RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಈ ಸರಕಾರದಿಂದ ರಾಜ್ಯದ ಅಭಿವೃದ್ಧಿ ಅಸಾಧ್ಯ : ಸಂಜಯ ಪಾಟೀಲ

ಗೋಕಾಕ:ಈ ಸರಕಾರದಿಂದ ರಾಜ್ಯದ ಅಭಿವೃದ್ಧಿ ಅಸಾಧ್ಯ : ಸಂಜಯ ಪಾಟೀಲ 

ಈ ಸರಕಾರದಿಂದ ರಾಜ್ಯದ ಅಭಿವೃದ್ಧಿ ಅಸಾಧ್ಯ : ಸಂಜಯ ಪಾಟೀಲ

ಗೋಕಾಕ ಜು 15 : ರಾಜ್ಯ ಕಾಂಗ್ರೇಸ್ ಸರಕಾರ ಜನರಿಗೆ ಸುಳ್ಳು ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದು ಈ ಸರಕಾರದಿಂದ ರಾಜ್ಯದ ಅಭಿವೃದ್ಧಿ ಅಸಾಧ್ಯ. ಮುಂಬರುವ ದಿನಗಳಲ್ಲಿ ಕಾಂಗ್ರೇಸ್ ಪಕ್ಷಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ಅವರು, ನಗರದ ಹೊರವಲಯದಲ್ಲಿರುವ ಪ್ರೀಯ ದರ್ಶಿನಿ ಸಭಾ ಭವನದಲ್ಲಿ ಬಿಜೆಪಿ ಗೋಕಾಕ ನಗರ ಮತ್ತು ಗ್ರಾಮೀಣ ಮಂಡಲಗಳ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರಿಗೆ ಗ್ಯಾರಂಟಿ ಭರವಸೆ ನೀಡಿ ಸರಿಯಾಗಿ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿಲ್ಲ. ತನ್ನ ತಾಯಿ ಪ್ರೀತಿಸುವ ಪ್ರಧಾನಿ ನಮಗೆ ಬೇಡ. ತನ್ನ ತಾಯಿಯ ಜೊತೆಗೆ ದೇಶವನ್ನು ಪ್ರೀತಿಸುವ ಪ್ರಧಾನಿ ನರೇಂದ್ರ ಮೋದಿ ನಮಗೆ ಬೇಕು. ಹೀಗಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರು ಬರುವ ಚುನಾವಣೆಯ ಒಳಗಾಗಿ ಮೋದಿಯವರ ಅಭಿವೃದ್ಧಿ ಪರ ಯೋಜನೆಗಳನ್ನು ಜನರ ಮನೆ ಮನಗಳಿಗೆ ತಲುಪಿಸುವ ಕಾರ್ಯ ಮಾಡಬೇಕು. ಬೆಳಗಾವಿ ಲೋಕಸಭೆ ಅಭ್ಯರ್ಥಿ ಯಾರು ಅಂತ ತೆಲೆಕೆಡಿಸಿಕೊಳ್ಳಬೇಡಿ. ಪಕ್ಷ ಯಾರಿಗೆ ಟಿಕೇಟ್ ನೀಡುತ್ತೆ ಅವರ ಆಯ್ಕೆಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಒಗ್ಗಟ್ಟಿನ ಮಂತ್ರ ಜಪಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೋಕಾಕ ಮತ್ತು ಅರಭಾಂವಿ ಮತಕ್ಷೇತ್ರದಲ್ಲಿ ಸಿದ್ದರಾಮಯ್ಯ ಡಿಕೆಶಿ ಹೆಬ್ಬಾಳಕರ ಆಟ ನಡೆಯಲಿಲ್ಲ. ಇಲ್ಲಿ ಏನಿದ್ದರೂ ಜಾರಕಿಹೊಳಿ ಸಹೋದರರ ಆಟ ಹೀಗಾಗಿ ಜಾರಕಿಹೊಳಿ ಸಹೋದರರನ್ನು ಇಲ್ಲಿಯ ಜನ ಅತಿ ಹೆಚ್ಚಿನ ಲೀಡನಲ್ಲಿ ಗೆಲ್ಲಿಸಿದ್ದಾರೆ. ಗೋಕಾಕ ಮತ್ತು ಅರಭಾಂವಿ ಮತಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಲೀಡ್ ಬರಲಿದ್ದು ಹೀಗಾಗಿ ಬೆಳಗಾವಿ ಬಿಜೆಪಿ ಅಭ್ಯರ್ಥಿ ಆಯ್ಕೆ ಖಚಿತ ಎಂದರು.
ವೇದಿಕೆಯ ಮೇಲೆ ಮಾಜಿ ಶಾಸಕ ಎಮ್ ಎಲ್ ಮುತ್ತೆನ್ನವರ, ವಿಭಾಗ ಸಂಘಟನಾ ಪ್ರ.ಕಾರ್ಯದರ್ಶಿ ಜಯಪ್ರಕಾಶ ಎಮ್ ಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ ದೇಶಪಾಚಿಡೆ, ಸುಭಾಸ ಪಾಟೀಲ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಹಿಂದುಳಿದ ವರ್ಗಗಳ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಮುಖಂಡರುಗಳಾದ ಮಲ್ಲಿಕಾರ್ಜುನ ಮಾದಮ್ಮನವರ, ಶಫಿ ಜಮಾದಾರ, ಬಸವರಾಜ ಹಿರೇಮಠ, ಜ್ಯೋತಿ ಕೊಲ್ಹಾರ, ತವನರಾಜ ಬೆನ್ನಾಡಿ, ಎಫ್ ಎಸ್ ಸಿದ್ದನಗೌಡರ ಇದ್ದರು.
ರಾಜೇಶ್ವರಿ ಒಡೆಯರ ಸ್ವಾಗತಿಸಿದರು, ಶಶಿಧರ ದೇಮಶೆಟ್ಟಿ ನಿರೂಪಿಸಿದರು, ಪುಂಡಲೀಕ ವಣ್ಣೂರ ವಂದಿಸಿದರು.

Related posts: