RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಕೌಜಲಗಿ ಪಟ್ಟಣದಲ್ಲಿ ಹೆಚ್ಚುತ್ತಿರುವ ಜನದಟ್ಟಣೆ : ಹೈರಾಣಾಗುತ್ತಿರುವ ಸಾರ್ವಜನಿಕರು

ಗೋಕಾಕ:ಕೌಜಲಗಿ ಪಟ್ಟಣದಲ್ಲಿ ಹೆಚ್ಚುತ್ತಿರುವ ಜನದಟ್ಟಣೆ : ಹೈರಾಣಾಗುತ್ತಿರುವ ಸಾರ್ವಜನಿಕರು 

ಕೌಜಲಗಿ ಪಟ್ಟಣದಲ್ಲಿ ಹೆಚ್ಚುತ್ತಿರುವ ಜನದಟ್ಟಣೆ : ಹೈರಾಣಾಗುತ್ತಿರುವ ಸಾರ್ವಜನಿಕರು

ರಾಜು ಕಂಬಾರ, ಕೌಜಲಗಿ:

ಕೌಜಲಗಿ ಪಟ್ಟಣ ಇತ್ತೀಚೆಗೆ ಜನಸಂದಣಿಯ ಆಗರವಾಗಿದೆ. ದಿನದಿಂದ ದಿನಕ್ಕೆ ಪಟ್ಟಣ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಅಂಗಡಿ-ಮುಗ್ಗಟ್ಟುಗಳು ಜನ್ಮ ತಳೆಯುತ್ತಿವೆ. ಸ್ಥಳೀಯ ವಿವಿಧ ಅಂಗಡಿಕಾರರೊಂದಿಗೆ ಪರ ಊರಿನ ವ್ಯಾಪಾರೋಧ್ಯಮಿಗಳು ಕೌಜಲಗಿಯಲ್ಲಿ ಕಾಲಿಡುತ್ತಿದ್ದಾರೆ. ಪಟ್ಣದ ಪ್ರಮುಖ ರಸ್ತೆಗಳು ಜನಸಂದಣಿಯಿಂದ ಕೂಡಿ ಗಿಜಿ ಗಿಜಿ ಎನ್ನುತ್ತಿವೆ. ದಾರಿಹೋಕರಿಗೆ ರಸೆಯೇ ಕಾಣದಂತೆ ಜನ ಮತ್ತು ದ್ವಿಚಕ್ರ ವಾಹನಗಳು ರಸ್ತೆಯನ್ನು ಆಕ್ರಮಿಸಿಕೊಂಡಿವೆ. ಒಬ್ಬಂಟಿ ಮಹಿಳೆ, ಶಾಲಾ ಮಕ್ಕಳು ಪ್ರಮುಖ ರಸ್ತೆ ದಾಟಿ ಮನೆಗೆ ಹೋಗಿ ಮುಟ್ಟುವಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತದೆ.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಲಾರಿ, ಬಸ್ಸು, ಟ್ರ್ಯಾಕ್ಟರ್, ಚಕ್ಕಡಿಗಳು ಚಲಿಸಲು ಅಸಾಧ್ಯವಾಗುವಷ್ಟು ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನಗಳು ನಿಂತಿರುತ್ತವೆ. ಅಪರೂಪಕ್ಕೆ ಸರ್ಕಾರಿ ಬಸ್ಸುಗಳು ಪಟ್ಟಣದಲ್ಲಿ ಪ್ರವೇಶಗೊಂಡರೆ ಸುಲಲಿತವಾಗಿ ಊರು ದಾಟುವುದು ಕಷ್ಟ. ಪ್ರಮುಖವಾಗಿ ಮಹಾಲಿಂಗಪೂರ ರಸ್ತೆಯ ಸಂಗೊಳ್ಳಿ ರಾಯಣ್ಣ ನಿಲ್ದಾಣ ಮತ್ತು ಕಳ್ಳಿಗುದ್ದಿ-ರಾಮದುರ್ಗ ರಸ್ತೆಯ ರವಿವರ್ಮ ವೃತ್ತದಲ್ಲಿ ಪಟ್ಟಣದ ಮಹಾಜನತೆಗೆ ಅತೀ ಅವಶ್ಯಕವಾಗಿರುವ ಅಂಗಡಿಗಳು ಲಭಿಸುತ್ತವೆ. ವಿದ್ಯಾರ್ಥಿಗಳು ಶಾಲೆಗೆ ಹೋಗಲು ಇದೇ ವೃತ್ತದಲ್ಲಿ ಹಾಯ್ದು ಹೋಗಬೇಕು. ಇದರಿಂದಾಗಿ ಈ ಎರಡು ಸ್ಥಳಗಳಲ್ಲಿ ನಿತ್ಯವೂ ಜನಸಂದಣಿ ತುಂಬಿ ತುಳುಕುತ್ತದೆ. ಇತ್ತೀಚೆಗೆ ಸರ್ಕಾರಿ ಬಸ್ಸಿನ ಚಾಲಕ-ನಿರ್ವಾಹಕರು ಪಟ್ಟಣದ ಮುಖಂಡರ ಮೇಲೆ, ಸ್ಥಳೀಯ ಆಡಳಿತ ಪೋಲಿಸ್ ಇಲಾಖೆಯವರ ಮೇಲೆ ಮುನಿಸಿಕೊಳ್ಳುತ್ತಿದ್ದಾರೆ. ಗೋಕಾಕ ಘಟಕದ ಬಸ್ಸಿನವರು ಕೌಜಲಗಿ ಪಟ್ಟಣ ಬಂತೆಂದರೆ ಸಾಕು ತಲೆನೋವು ಶುರು ಆಗುತ್ತದೆಂದು ಹೇಳುತ್ತಾರೆ. ಪಟ್ಟಣದಲ್ಲಿ 4-5 ನಿಲುಗಡೆಯಿವೆ. ರಸ್ತೆಯುದ್ದಕ್ಕೂ ಅಂಗಡಿಗಳಿದ್ದು ಜನ ಮತ್ತು ದ್ವಿಚಕ್ರ ವಾಹನಗಳಿಂದ ಬೇಸತ್ತಿದ್ದಾರೆ. ಪಟ್ಟಣಕ್ಕೆ ಒಂದು ನಿರ್ಧಿಷ್ಟ ಬಸ್ ನಿಲ್ದಾಣವಿಲ್ಲದಿರುವುದು ಅವರ ನೋವಿಗೆ ಒಂದು ಪ್ರಮುಖ ಕಾರಣ.

ಪಟ್ಟಣಕ್ಕೆ ಆಗಮಿಸುವ ಸವದತ್ತಿ ಘಟಕದ ಯರಗಟ್ಟಿ-ಕೌಜಲಗಿ ಬಸ್ಸು ರವಿವರ್ಮ ವೃತ್ತದಲ್ಲಿ ಸಂಚರಿಸುವುದು ತುಂಬಾ ಕಷ್ಟವಾಗುತ್ತಿದೆ ಎನ್ನುತ್ತಾರೆ. ಚಾಲಕ ನಿರ್ವಾಹಕರು ಗ್ರಾಮ ಪಂಚಾಯತ ಬಳಿಯಿರುವ ಬಸ್ ನಿಲ್ದಾಣ ಸ್ವಲ್ಪ ಮಟ್ಟಿಗೆ ಶಾಂತತೆಯಿಂದ ಇದ್ದರೂ ಇಲ್ಲಿಯ ಅಂಬೇಡ್ಕರ ವೃತ್ತಕ್ಕೆ ಅಂಟಿಕೊಂಡ ಖಾಸಗಿ ವಾಹನಗಳ ದರ್ಬಾರ ಜಾಸ್ತಿ. ಇವುಗಳನ್ನು ಸರಿಯಾಗಿ ನಿಯಂತ್ರಿಸುವ ಪೋಲಿಸರು ಕೌಜಲಗಿಯಲ್ಲಿ ಇಲ್ಲದಿರುವುದು ಒಂದು ದುರಂತ. ಕೌಜಲಗಿ ಒಂದು ಪಟ್ಟಣವಾಗಿದ್ದರೂ ಪೋಲಿಸ್ ಠಾಣೆ ಇಲ್ಲ. ಹಗಲು ವೇಳೆ ಇಷ್ಟೊಂದು ಜನಸಂದಣಿಗೊಂಡರೆ ಸಾಯಂಕಾಲ 6 ಗಂಟೆಯಿಂದ ವಿಪರೀತ ಜನಸಂದಣಿ ಏರ್ಪಡುತ್ತದೆ. ಪಟ್ಟಣವು ಟ್ರಾಫಿಕ್ ಜಾಂಬ್‍ಗೊಳಿಸದೆ ಸುವ್ಯವಸ್ಥೆಯಿಂದ ಕೂಡಿರಬೇಕು ಎಂಬುದು ಸ್ಥಳೀಯ ಜನರ ಒತ್ತಾಶೆಯಾಗಿದೆ.


ಜಾಕೀರ ಜಮಾದಾರ : ಗ್ರಾ.ಪಂ.ಸದಸ್ಯರು

ಕೌಜಲಗಿ ಪಟ್ಟಣವಾಗಿ ಬೆಳೆಯುತ್ತಿದೆ. ಇಲ್ಲಿ ದ್ವಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ರಸ್ತೆಯುದ್ದಗಲಕ್ಕೂ ವಾಹನಗಳು ಸಂಚರಿಸುತ್ತಿರುವುದರಿಂದ ಪಟ್ಟಣ ಜನಸಂದಣಿಯಿಂದ ಕೂಡಿರುತ್ತದೆ. ಪೋಲಿಸರು ಟ್ರಾಫಿಕ್ ಜಾಂಬ್ ಆಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಕೌಜಲಗಿಗೆ ಒಂದು ಪ್ರತ್ಯೇಕ ಪೋಲಿಸ್ ಠಾಣೆಯಾಗಬೇಕು.

ಪುಂಡಲೀಕ ಕಟ್ಟಿ : ಗ್ರಾಮಸ್ಥರು, ಕೌಜಲಗಿ

ಕೌಜಲಗಿ ಹೋಬಳಿ ಕೇಂದ್ರವಾಗಿರುವುದರಿಂದ ಸುತ್ತಲಿನ 30 ಗ್ರಾಮದ ಜನ ಪಹಣಿ ಪತ್ರಿಕೆ, ಬ್ಯಾಂಕ್ ವ್ಯವಹಾರ, ವ್ಯಾಪಾರೋಧ್ಯಮ, ಸಂತೆ, ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಪರಊರಿನಿಂದ ಪಟ್ಟಣಕ್ಕೆ ಆಗಮಿಸುತ್ತಿರುವುದರಿಂದ ಪಟ್ಟಣದಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ಪಟ್ಟಣ ಅತೀ ವೇಗದಲ್ಲಿ ಬೆಳೆಯುತ್ತಿದೆ. ಈಗಲೇ ಜನಸಂದಣಿ ನಿಯಂತ್ರಿಸಲು ಕ್ರಮ ಜರುಗಬೇಕು.
ಮೆಟ್ರೊ ಬ್ರೇಡ್-ಬೇಕರಿ, ಕೌಜಲಗಿ :

ಕೌಜಲಗಿ ಇಂದಿಲ್ಲ ನಾಳೆ ತಾಲೂಕಾಗತೈತಿ! ದೊಡ್ಡ ಪಟ್ಣ ಆಗಿ ಬೆಳಿತೈತಿ! ಅದಕ್ಕ ನಾವು ಹೊಸದಾಗಿ ಬ್ರೇಡ್ ಬೇಕರಿ ಅಂಗಡಿ ಹಾಕೇವ್ರಿ!

Related posts: