ಮೂಡಲಗಿ:ಹೊಸ ತಾಲೂಕಿನ ಆದೇಶ ಪತ್ರವನ್ನು ತೆಗೆದುಕೊಂಡು ಮೂಡಲಗಿಗೆ ಕಾಲಿಟ್ಟಿದ್ದೇನೆ : ಶಾಸಕ ಬಾಲಚಂದ್ರ
ಹೊಸ ತಾಲೂಕಿನ ಆದೇಶ ಪತ್ರವನ್ನು ತೆಗೆದುಕೊಂಡು ಮೂಡಲಗಿಗೆ ಕಾಲಿಟ್ಟಿದ್ದೇನೆ : ಶಾಸಕ ಬಾಲಚಂದ್ರ
ಮೂಡಲಗಿ ಅ 17 : ಮೂಡಲಗಿ ಭಾಗದ ಸಾರ್ವಜನಿಕರಿಗೆ ಮಾತುಕೊಟ್ಟಂತೆ ಹೊಸ ತಾಲೂಕಿನ ಆದೇಶ ಪತ್ರವನ್ನು ತೆಗೆದುಕೊಂಡು ಮೂಡಲಗಿಗೆ ಕಾಲಿಟ್ಟಿದ್ದೇನೆ. ಆದೇಶ ಪತ್ರದ ಪ್ರತಿಯನ್ನು ಶ್ರೀಪಾದಬೋಧ ಸ್ವಾಮೀಜಿಯವರಿಗೆ ಅರ್ಪಿಸಿದ್ದೇನೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಮಂಗಳವಾರದಂದು ಇಲ್ಲಿಯ ಶಿವಬೋಧರಂಗ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮೂಡಲಗಿ ನಾಗರೀಕರಿಗೆ ಮಾತುಕೊಟ್ಟಂತೆ ತಾಲೂಕು ಕೇಂದ್ರವನ್ನಾಗಿ ಘೋಷಿಸಿಕೊಂಡು ಬಂದಿದ್ದು, ಜನೇವರಿ 1 ರಿಂದ ಮೂಡಲಗಿ ಹೊಸ ತಾಲೂಕು ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.
ಮೂಡಲಗಿ ಹೊಸ ತಾಲೂಕಿನಿಂದ ರಾಜ್ಯದಲ್ಲಿ ಒಟ್ಟು 50 ಹೊಸ ತಾಲೂಕುಗಳು ಉದಯವಾಗಿದ್ದು, ಅರಭಾವಿ ಕ್ಷೇತ್ರದ 50 ಗ್ರಾಮಗಳು ಸೇರಿ ಮೂಡಲಗಿ ಹೊಸ ತಾಲೂಕು ಕೇಂದ್ರವಾಗಿದೆ. ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವ ಸಿದ್ಧರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಜ.1 ರಿಂದ ಮೂಡಲಗಿಗೆ ಹೊಸ ಸರ್ಕಾರಿ ಕಛೇರಿಗಳು ಪ್ರಾರಂಭಗೊಳ್ಳಲಿವೆ. ತಾಲೂಕು ಮಟ್ಟದ ಸರ್ಕಾರಿ ಕಛೇರಿಗಳು ತಲೆಯೆತ್ತಲಿವೆ. ಹೊಸ ತಾಲೂಕಿಗೆ ಸರ್ಕಾರ 10 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ.
ಮೂಡಲಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದು, ಈಗಾಗಲೇ ನಗರೋತ್ಥಾನ ಯೋಜನೆಯಡಿ 7.50 ಕೋಟಿ ರೂ. ಮೊತ್ತ ಕಾಮಗಾರಿಗಳು ಪ್ರಗತಿಯಲ್ಲಿವೆ. ಶ್ರೀಪಾದಬೋಧ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಮೂಡಲಗಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ಹೇಳಿದರು.
ಮೂಡಲಗಿ ತಾಲೂಕು ರಚನೆ ಸಂಬಂಧ ನಡೆಸಿದ ಧರಣಿ ಸತ್ಯಾಗ್ರಹದಲ್ಲಿ ಕೆಲವರು ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡಿದ್ದಾರೆ. ವೈಯಕ್ತಿಕ ಟೀಕೆಗಳನ್ನು ಸಹ ಮಾಡಿದ್ದಾರೆ. ಟೀಕೆ-ಟಿಪ್ಪಣಿಗಳನ್ನು ಸಮನಾಗಿ ಸ್ವೀಕರಿಸುವ ಮನೋಭಾವನೆ ನನ್ನದು. ಇಲ್ಲಿಯವರೆಗೆ ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ. ಕ್ಷೇತ್ರದ ಅಭಿವೃದ್ಧಿಯಲ್ಲಿ ಎಲ್ಲ ಸಮಾಜದವರನ್ನು ಸಮನಾಗಿ ಗೌರವಿಸಿದ್ದೇನೆ. ಯಾರಿಗೂ ನೋವನ್ನುಂಟು ಮಾಡಿಲ್ಲ. ಯಾರ ಮೇಲೂ ಸಿಟ್ಟಿಲ್ಲ. ಹಿಂದಿನ ಕಹಿ ಘಟನೆಗಳನ್ನು ಮರೆತು ಮೂಡಲಗಿ ತಾಲೂಕಿನ ಶ್ರೇಯೋಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ. ವೈಮನಸ್ಸುಗಳನ್ನು ಬದಿಗಿಟ್ಟು ಪ್ರೀತಿ-ವಿಶ್ವಾಸದಿಂದ ಬದುಕೋಣ. ಯಾರು ನನ್ನನ್ನು ನಿಂದಿಸುತ್ತಿದ್ದಾರೆಯೋ ಅವರೇ ಮುಂದೊಂದು ದಿನ ನನ್ನನ್ನು ಗೌರವಿಸುವ ದಿನ ದೂರವಿಲ್ಲವೆಂದು ಹೇಳಿದರು.
ಕ್ಷೇತ್ರದ ಶಾಸಕನಾಗಿ ಮೂಡಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಮಾಡುವ ಜವಾಬ್ದಾರಿ ನಿರ್ವಹಿಸಿದ್ದೇನೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆಂದು ಹೇಳಿದರು.
ತಾಲೂಕಿನ ಆದೇಶ ಪತ್ರದ ಪ್ರತಿಯನ್ನು ಸ್ವೀಕರಿಸಿದ ಶ್ರೀಪಾದಬೋಧ ಸ್ವಾಮೀಜಿಯವರು, ಶಾಸಕ ಬಾಲಚಂದ್ರ ಅವರು ಮೂಡಲಗಿ ನಾಗರೀಕರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಅವರಿಗೆ ಸಮಸ್ತ ಮೂಡಲಗಿ ಭಾಗದ ನಾಗರೀಕರಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಒಳ್ಳೆಯ ಕೆಲಸ ಮಾಡುವವರಿಗೆ ವಿರೋಧಿಗಳು ಇರುವುದು ಸ್ವಾಭಾವಿಕ. ಅದನ್ನು ಮೆಟ್ಟಿನಿಂತು ಅಭಿವೃದ್ಧಿಪರ ಚಿಂತನೆ ಮೈಗೂಡಿಸಿಕೊಂಡಿರುವ ಬಾಲಚಂದ್ರ ಜಾರಕಿಹೊಳಿ ಅವರ ಸಾಧನೆಯನ್ನು ಬಣ್ಣಿಸಲು ಶಬ್ಧಗಳಿಲ್ಲವೆಂದು ಪ್ರಶಂಸಿಸಿದರು.
ಜನೇವರಿಯಿಂದ ಮೂಡಲಗಿಯಲ್ಲಿ ಕಛೇರಿ ಪ್ರಾರಂಭ :
ಮೂಡಲಗಿ ಭಾಗದ ಬಹು ವರ್ಷಗಳ ಬೇಡಿಕೆಯಾಗಿದ್ದ ಮೂಡಲಗಿ ತಾಲೂಕು ರಚನೆಯಾಗಿದೆ. ಇದರಿಂದ ಶರವೇಗದಲ್ಲಿ ಅಭಿವೃದ್ಧಿಯಾಗುತ್ತದೆ. ಸರ್ಕಾರದಿಂದ ಪ್ರತಿವರ್ಷ ಕ್ಯೋಟ್ಯಾಂತರ ರೂಪಾಯಿ ಅನುದಾನ ದೊರೆಯುತ್ತದೆ. ಜನೇವರಿ 1 ರಿಂದ ಮೂಡಲಗಿಯಲ್ಲಿ ಸಾರ್ವಜನಿಕರ ಅನುಕೂಲಕ್ಕೋಸ್ಕರ ಮನೆ ಹಾಗೂ ಕಛೇರಿಯನ್ನು ಪ್ರಾರಂಭಿಸುತ್ತೇನೆ. ವಾರದಲ್ಲಿ 2 ದಿನ ಮೂಡಲಗಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುತ್ತೇನೆ ಶಾಸಕ ಬಾಲಚಂದ್ರ ಹೇಳಿದರು
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ರವಿ ಸೋನವಾಲ್ಕರ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ರಾಜ್ಯ ಸಹಕಾರಿ ಮಾರಾಟ ಮಂಡಳ ಉಪಾಧ್ಯಕ್ಷ ಬಿ.ಆರ್. ಪಾಟೀಲ, ಡಿ.ಬಿ.ಪಾಟೀಲ, ಈರಣ್ಣಾ ಹೊಸೂರ, ನಿಂಗಪ್ಪ ಫಿರೋಜಿ, ಅಜೀಜ ಡಾಂಗೆ, ಎಸ್.ಆರ್.ಸೋನವಾಲ್ಕರ, ಬಿ.ಎಚ್.ಸೋನವಾಲ್ಕರ, ಹನಮಂತ ಸತರಡ್ಡಿ, ಅಪ್ಪಾಸಾಬ ಹೊಸಕೋಟಿ, ಶಂಕರ ಬೆಳಕೂಡ, ಬಸಪ್ಪ ಹಾಲೊಳ್ಳಿ, ಶ್ರೀಶೈಲ ಬಳಿಗಾರ, ಬಸಪ್ರಭು ನಿಡಗುಂದಿ, ಪ್ರಭಾಕರ ಬಂಗೆನ್ನವರ, ರವಿ ಸಣ್ಣಕ್ಕಿ, ಸಂತೋಷ ಸೋನವಾಲ್ಕರ, ರಾಮಣ್ಣಾ ಹಂದಿಗುಂದ, ಲಾಲಸಾಬ ಸಿದ್ಧಾಪೂರ, ಮೂಡಲಗಿ ಪುರಸಭೆ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು