ಗೋಕಾಕ:ಸಿಲಿಂಡರ್ ಸ್ಫೋಟ- ಏಳು ಜನರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ
ಸಿಲಿಂಡರ್ ಸ್ಫೋಟ- ಏಳು ಜನರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ
ಗೋಕಾಕ ಡಿ 17 : ತಾಲ್ಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ಭಾನುವಾರ ನಸುಕಿನಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಏಳು ಜನ ತೀವ್ರ ಗಾಯಗೊಂಡಿದ್ದಾರೆ. ಇವರಲ್ಲಿ ಒಂಬತ್ತು ತಿಂಗಳ ಹಸುಳೆ, ಬಾಣಂತಿ ಕೂಡ ಇದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ರಾಜಶ್ರೀ ನಿರ್ವಾಣಿ (42) ಅಶೋಕ ನಿರ್ವಾಣಿ (45) ಸೋಮನಗೌಡ (44) ದೀಪಾ (42) ನವೀನ (14), ವಿದ್ಯಾ (13) ಬಸನಗೌಡ ನಿರ್ವಾಣಿ( 9 ತಿಂಗಳು) ಗಾಯಗೊಂಡವರು.
ಮೂವರನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯ ಸದಸ್ಯರೆಲ್ಲ ರಾತ್ರಿ ಊಟ ಮಾಡಿ ಮಲಗಿದ್ದರು. ಈ ವೇಳೆ ಅಡುಗೆ ಅನಿಲ ಸಿಲಿಂಡರಿನಿಂದ ಅನಿಲ ಸೋರಿಕೆಯಾಯಿತು. ವಾಸನೆಯಿಂದ ಎಚ್ಚರವಾದ ಮನೆಯ ಸದಸ್ಯರೊಬ್ಬರು ಮೊಬೈಲ್ ಟಾರ್ಚ್ ಆನ್ ಮಾಡಿ ಸಿಲಿಂಡರ್ ಬಂದ್ ಮಾಡಲು ಬಂದರು. ಈ ವೇಳೆ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಸ್ಫೋಟವಾಯಿತು. ಸ್ಫೋಟದ ರಭಸಕ್ಕೆ ಮನೆಯ ಹೆಂಚುಗಳು ಹಾರಿಹೋದವು. ಮನೆಬಳಕೆ ವಸ್ತುಗಳು ಚೆಲ್ಲಾಪಿಲ್ಲಿಯಾದವು. ನೋಡನೋಡುತ್ತಿದ್ದಂತೆಯೇ ಮನೆ ಹೊತ್ತಿ ಉರಿಯಿತು ಎಂದು ಗಾಯಗೊಂಡವರು ತಿಳಿಸಿದ್ದಾರೆ.
ಅಂಕಲಗಿ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ. ತಡವಾಗಿ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಪಕ್ಕದ ಮನೆಗೆ ಅಂಟಿಕೊಳ್ಳದಂತೆ ತಡೆದರು.