ಗೋಕಾಕ:ಜಿಎಲ್‍ಬಿಸಿ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ದಿಗ್ಬಂಧನ: ತುಕಾನಟ್ಟಿಯಲ್ಲಿ ಘಟನೆ
ಜಿಎಲ್‍ಬಿಸಿ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ದಿಗ್ಬಂಧನ: ತುಕಾನಟ್ಟಿಯಲ್ಲಿ ಘಟನೆ
ಗೋಕಾಕ ಅ 17: ತಾಲೂಕಿನ ತುಕ್ಕಾನಟ್ಟಿ ಗ್ರಾಮದ ತೋಟದಲ್ಲಿ ಕರ್ನಾಟಕ ನೀರಾವರಿ ನಿಗಮದ ಜಿಎಲ್‍ಬಿಸಿ ಘಟಪ್ರಭಾ ಉಪವಿಭಾಗದ ಅಧಿಕಾರಿಗಳನ್ನು ರೈತ ಸಂಘದವರು ಹಾಗೂ ಗ್ರಾಮಸ್ಥರು ದಿಗ್ಬಂಧನ ಹಾಕಿ ಕೂಡ್ರಿಸಿದ ಘಟನೆ ಮಂಗಳವಾರದಂದು ಜರುಗಿದೆ.
ತಾಲೂಕಿನ ತುಕ್ಕಾನಟ್ಟಿ ಗ್ರಾಮದಿಂದ ಗಾಂಧಿನಗರಕ್ಕೆ ಹೋಗುವ 2 ಕಿ. ಮೀ. ಕೆನಾಲ ಪಕ್ಕದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರೈತರಿಗೆ ಮತ್ತು ಗ್ರಾಮಸ್ಥರಿಗೆ ಹೋಗಲು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಇದರ ಬಗ್ಗೆ ಕಳೆದ ಒಂದು ವರ್ಷದಿಂದ ರೈತರು ಮತ್ತು ಗ್ರಾಮಸ್ಥರು ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲವೆಂದು ರೈತರು ದೂರಿದರು.
ನಂತರ ಪತ್ರಕರ್ತರ ಜೊತೆ ಮಾತನಾಡಿದ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಉಪಯೋಗವಾಗಲೆಂದು ಕೆನಾಲ ಪಕ್ಕದಲ್ಲಿ ಆಯಕಟ್ಟ ರಸ್ತೆ ಕಾಮಗಾರಿಗೆ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿದ್ದು ನೀರಾವರಿ ನಿಗಮದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಈ ರಸ್ತೆ ರಿಪೇರಿ ಮಾಡದೆ ರೈತರಿಗೆ ಅನ್ಯಾಯವೆಸಗಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕೆನಾಲ ರಸ್ತೆ ಮೇಲೆ ಆಕಸ್ಮಿಕವಾಗಿ ಭೇಟಿಗೆ ಬಂದ ನೀರಾವರಿ ನಿಗಮದ ಅಧಿಕಾರಿಗಳಾದ ಅಸಿಸ್ಟಂಟ ಇಂಜನೀಯರ ಸಗರೆ ಮತ್ತು ಅಸಿಸ್ಟಂಟ ಎಕ್ಝಿಕ್ಯೂಟಿವ್ಹ ಇಂಜನೀಯರ ಕೆ.ವೈ. ಕನ್ನೂರಕರ ಅವರನ್ನು ಸುಮಾರು ಎರಡು ಗಂಟೆಗಳ ಕಾಲ ಗ್ರಾಮದ ಯಲ್ಲಾಲಿಂಗ ದೇವಸ್ಥಾನದಲ್ಲಿ ದಿಗ್ಬಂಧನ ಮಾಡಿ ಕೂಡ್ರಿಸಿದರು. ನೀರಾವರಿ ನಿಗಮದ ಮೇಲಾಧಿಕಾರಿಗಳಿಗೆ ಅಧಿಕಾರಿಗಳು ಮೊಬೈಲ ಮೂಲಕ ಸಂಪರ್ಕ ಮಾಡಿ ಮನವಿ ಮಾಡಿಕೊಂಡಾಗ ಬರುವ ದಿ.23ರೊಳಗೆ ರಸ್ತೆ ಕಾಮಗಾರಿ ಸಂಪೂರ್ಣ ಸುಧಾರಣೆ ಮಾಡುವದಾಗಿ ಭರವಸೆ ನೀಡಿದ ನಂತರ ರೈತ ಸಂಘದವರು ಮತ್ತು ಗ್ರಾಮಸ್ಥರು ಅವರನ್ನು ಅಲ್ಲಿಂದ ಹೋಗಲು ಬಿಟ್ಟರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ, ಸತ್ತೆಪ್ಪ ಮಲ್ಲಾಪೂರ, ಕೆಂಪಣ್ಣಾ ಗದಾಡಿ, ಆನಂದ ಮುದ್ದಾಪೂರೆ, ಪರಸಪ್ಪ ಗದಾಡಿ, ಅಜ್ಜಪ್ಪ ಬಿಲಕಾರ, ಗೋಪಾಲ ಸಂಗಟಿ, ಭರಮು ಖೆಮಲಾಪೂರೆ ಸೇರಿದಂತೆ ರೈತ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು