RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಇಂದಿನಿಂದ ವಾಲ್ಮೀಕಿ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ರಾಹುಲ್ ಟ್ರೋಫಿ : ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ

ಗೋಕಾಕ:ಇಂದಿನಿಂದ ವಾಲ್ಮೀಕಿ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ರಾಹುಲ್ ಟ್ರೋಫಿ : ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ 

ಇಂದಿನಿಂದ ವಾಲ್ಮೀಕಿ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ರಾಹುಲ್ ಟ್ರೋಫಿ : ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ

ನವೆಂಬರ್ ಬಂತೆಂದರೆ ರಾಜ್ಯದ ಉದ್ದಗಲಕ್ಕೂ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳ ಸುಗ್ಗಿ ಶುರು. ಈ ಟೂರ್ನಿಗಳು ಮೇ ತಿಂಗಳ ಅಂತ್ಯದವರೆಗೂ ನಿರಂತರವಾಗಿ ನಡೆಯುತ್ತವೆ. ಟೆನ್ನಿಸ್ ಬಾಲ್ ಕ್ರಿಕೆಟ್ ಮೂಲಕವೇ ಆಟದ ಅಂಗಳಕ್ಕೆ ಕಾಲಿಟ್ಟು ರಾಜ್ಯ, ರಾಷ್ಟ್ರ ತಂಡವನ್ನು ಪ್ರತಿನಿಧಿಸಿದ ಹಲವು ಆಟಗಾರರೂ ನಮ್ಮ ರಾಜ್ಯದಲ್ಲಿ ಇದ್ದಾರೆ.

ಈಗೀಗ ಟೆನ್ನಿಸ್‌ ಬಾಲ್‌ ಟೂರ್ನಿಯು ಗಲ್ಫ್ ರಾಷ್ಟ್ರಕ್ಕೂ ಕಾಲಿಟ್ಟಿದ್ದು, ರಾಜ್ಯದ ಆಯ್ದ ಆಟಗಾರರು ಅಲ್ಲಿಗೆ ತೆರಳುತ್ತಾರೆ. ಹೊನಲು ಬೆಳಕಿನಲ್ಲಿ ಬೆಳಗಿನ ಜಾವದವರೆಗೂ ನಡೆಯುವ ಈ ಕ್ರಿಕೆಟ್‌ನ ನೇರ ಪ್ರಸಾರಕ್ಕೆಂದೇ ಹಲವು ಯೂಟ್ಯೂಬ್ ಚಾನೆಲ್‌ಗಳು ಹುಟ್ಟಿಕೊಂಡಿವೆ. ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳ ಇತಿಹಾಸ ಹಾಗೂ ಬೆಳವಣಿಗೆ ರೋಚಕವಾಗಿದೆ. ಟೆನ್ನಿಸ್ ಬಾಲ್ ಕ್ರಿಕೆಟ್ ಮೂಲಕವೇ ರಾಜ್ಯ ಹಾಗೂ ರಾಷ್ಟ್ರ ತಂಡವನ್ನು ಪ್ರತಿನಿಧಿಸಿದ ಆಟಗಾರರು ಇಲ್ಲಿದ್ದಾರೆ. ಡೇವಿಡ್ ಜಾನ್ಸನ್, ದೊಡ್ಡ ಗಣೇಶ್, ಎಸ್.ಅರವಿಂದ್ ಬೆಂಗಳೂರಿನ ಜೈ ಕರ್ನಾಟಕದ ತಂಡದ ಮೂಲಕವೇ ತಮ್ಮ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದು.
ಶಾಸ್ತ್ರೀಯವೂ , ಕಲಾತ್ಮಕವೂ ಆದ ಆಟದ ಜೊತೆಗೆ ಆಯಾ ಕಾಲಕ್ಕೆ ತಕ್ಕಂತಹ ಬದಲಾವಣೆಗಳನ್ನು ಮೈಗೂಡಿಸಿಕೊಂಡಿರುವುದು ಟೆನ್ನಿಸ್ ಬಾಲ್ ಕ್ರಿಕೆಟ್‌ನ ವಿಶೇಷತೆಯಾಗಿದೆ. ಐಪಿಎಲ್ ಜನಪ್ರಿಯವಾದ ನಂತರ ಟೆನ್ನಿಸ್ ಬಾಲ್‌ನಲ್ಲೂ ಪ್ರೀಮಿಯರ್ ಲೀಗ್ ಕ್ರಿಕೆಟ್ ಆರಂಭಗೊಂಡಿದೆ. ಈ ಟೂರ್ನಿಗಳನ್ನು ಪ್ರಸಾರ ಮಾಡುವ ಹಲವು ಯೂಟ್ಯೂಬ್ ಚಾನೆಲ್‌ಗಳಿವೆ.

ಕರ್ನಾಟಕದಲ್ಲಿದ್ದಾಗ ಟೆನ್ನಿಸ್ ಬಾಲ್ ಕ್ರಿಕೆಟ್‌ನಲ್ಲಿ ತೊಡಗಿಕೊಂಡಿದ್ದು, ನಂತರ ಉದ್ಯೋಗ ನಿಮಿತ್ತ ಗಲ್ಫ್ ರಾಷ್ಟ್ರಕ್ಕೆ ತೆರಳಿದ ಕೆಲವರು ಅಲ್ಲಿ ಪಂದ್ಯಾವಳಿಗಳನ್ನು ಸಂಘಟಿಸುತ್ತಿದ್ದಾರೆ. ಅದಕ್ಕೆ ರಾಜ್ಯದ ಆಯ್ದ ಆಟಗಾರರು ಪ್ರತಿವರ್ಷವೂ ತೆರಳುತ್ತಾರೆ. ಹಲವರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುವುದೇ ವೃತ್ತಿಯಾಗಿದೆ. ಈ ಟೂರ್ನಿಗಳ ಮಹತ್ವಕ್ಕೆ ಹಿಡಿದ ಕನ್ನಡಿ ಇದು.

ಇದು ರಾಜ್ಯದ ವಿಷಯವಾದರೆ ಟೆನಿಸಬಾಲ್ ಪಂದ್ಯಾವಳಿಗಳು ಗೋಕಾಕ ನಗರದಲ್ಲಿಯೂ ಸಹ ತನ್ನದೇ ಆದ ಛಾಪನ್ನು ಮೂಡಿಸಿವೆ. ಗೋಕಾಕ ನಗರದಲ್ಲಿ 2 ದಶಕಗಳ ಹಿಂದೆ ಇದ್ದ ಸೂಪರ್ಸ್ಟಾರ್, ಮಾರ್ನಿಂಗ್ ಸ್ಟಾರ್, ಗ್ರೀನ್ ಪ್ಲ್ಯಾಗ್, ಎಂ.ಜಿ.ಸೂಪರ ಸೇರಿದಂತೆ ಇತರ ತಂಡಗಳು ಟೆನಿಸಬಾಲ್ ಪಂದ್ಯಾವಳಿಗಳನ್ನು ಆಯೋಜಿಸಿ ಗೋಕಾಕ ಅಷ್ಟೇ ಅಲ್ಲಾ ಇಡೀ ಜಿಲ್ಲೆಯಲ್ಲಿ ಕ್ರಿಕೆಟ್ ಆಟದ ಖದರ್ ತೋರಿಸಿಕೊಟ್ಟಿದ್ದಾರೆ.
ಕ್ರಮೇಣ ಈ ತಂಡಗಳಿದ್ದ ಆಟಗಾರರು ಬೇರೆ, ಬೇರೆ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಪರಿಣಾಮ ಟೆನಿಸಬಾಲ್ ಪಂದ್ಯಾವಳಿಗಳು ಗೋಕಾಕದಲ್ಲಿ ಕ್ರಮೇಣ ನೇಪಥ್ಯಕ್ಕೆ ಸರಿದವು.

ಇತ್ತೀಚೆಗೆ ಕೆಲವು ವರ್ಷಗಳಿಂದ ಮತ್ತೆ ಗೋಕಾಕನ ಕ್ರೀಡಾಪ್ರೇಮಿಗಳು ಜನಪ್ರತಿನಿಧಿಗಳ, ಕ್ರೀಡಾ ಪ್ರೇಮಿಗಳ ಸಹಕಾರದಿಂದ ನಗರದಲ್ಲಿ ವಾರ್ಡ ಮಟ್ಟದ, ತಾಲೂಕು ಮಟ್ಟದ, ಜಿಲ್ಲಾಮಟ್ಟದ ಟೆನಿಸಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಸುತ್ತಾ ಬಂದಿದ್ದಾರೆ. ಆದರೆ ಗೋಕಾಕ ನಗರದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎಂಬಂತೆ ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಫೆಬ್ರವರಿ 15 ರಿಂದ ನಾಲ್ಕು ದಿನಗಳ ಕಾಲ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ರಾಹುಲ್ ಟ್ರೋಫಿ ಹೊನಲು ಬೆಳಕಿನ ರಾಜ್ಯಮಟ್ಟದ ಟೆನಿಸಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.
ಈ ಪಂದ್ಯಾವಳಿಗಳು ಸಾಯಂಕಾಲ 5 ಘಂಟೆಯಿಂದ ಪ್ರಾರಂಭವಾಗಿ ರಾತ್ರಿ 12ರ ವರೆಗೆ ಜರುಗಲಿದೆ. ಈ ಪಂದ್ಯಾವಳಿಯಲ್ಲಿ ರಾಜ್ಯದ ಆಹ್ವಾನಿತ ತಂಡಗಳು ಪಂದ್ಯಗಳನ್ನು ಆಡಲಿವೆ. ವಿಶೇಷವೆಂದರೆ ಪಕ್ಕದ ಮಹಾರಾಷ್ಟ್ರ ರಾಜ್ಯದ ಆಯ್ದ ಕ್ರಿಕೆಟ್ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

ಕಳೆದ ಸುಮಾರು 30 ವರ್ಷಗಳಿಂದ ಕ್ರಿಕೆಟ್ ಆಟದಿಂದ ದೂರು ಉಹಿದಿದ್ದ ಸಚಿವ ಸತೀಶ ಜಾರಕಿಹೊಳಿ ಅವರು ವಾಲ್ಮೀಕಿ ಕ್ರೀಡಾಂಗಣದಲ್ಲಿ ಪ್ಲಡಲೈಡ ( ಹೈಮಾಸ್) ವಿದ್ಯುತ್ ದೀಪಗಳನ್ನು ಅಳವಡಿಸಿರುವ ಪರಿಣಾಮ ತಮ್ಮ ಸುಪುತ್ರ ರಾಹುಲ್ ಅವರ ಹೆಸರಿನಲ್ಲಿ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಹೊನಲು ಬೆಳಕಿನ ಪಂದ್ಯಾವಳಿಗಳಿಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಪಂದ್ಯಾವಳಿಗಳು ಸತೀಶ್ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಆಯೋಜನೆವಾಗಿದ್ದು, ಪ್ರಥಮ ಸ್ಥಾನ ಪಡೆದ ತಂಡಕ್ಕೆ ನಗದು ರೂ 2 ಲಕ್ಷ ಹಾಗೂ ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ನಗದು ರೂ 1 ಲಕ್ಷ ಹಾಗೂ ಆಕರ್ಷಕ ಟ್ರೋಫಿ ಜೊತೆಗೆ ಅತ್ಯುತ್ತಮ ಬಾಲರ್, ಅತ್ಯುತ್ತಮ ಬ್ಯಾಟ್ಸಮನ್, ಅತ್ಯುತ್ತಮ ಕ್ಷೇತ್ರ ರಕ್ಷಕ, ಪಂದ್ಯ ಪುರುಷ, ಸರಣಿ ಪುರುಷ ಪುರಸ್ಕಾರ ಕ್ಕೆ ಒಳಗಾದ ಕ್ರೀಡಾಪಟುಗಳಲ್ಲಿ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಿ ಸಚಿವ ಸತೀಶ ಜಾರಕಿಹೊಳಿ ಅವರು ಗೌರವಿಸಲಿದ್ದಾರೆ.

ಒಟ್ಟಾರೆ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರ ಪ್ರಯತ್ನದ ಫಲವಾಗಿ ಪ್ಲಡಲೈಡ ( ಹೈಮಾಸ್) ವಿದ್ಯುತ್ ದೀಪಗಳು ಅಳವಡಿಕೆಯಾಗಿದ್ದು, ರಾಹುಲ್ ಟ್ರೋಫಿ ಯನ್ನು ಆಯೋಜನೆ ಮಾಡುವ ಮೂಲಕ ಹೊನಲು ಬೆಳಕಿನ ಪಂದ್ಯಾವಳಿಗೆ ಅಧಿಕೃತವಾಗಿ ಚಾಲನೆ ದೊರೆತಂತಾಗಿದೆ. ಇದರ ಸದುಪಯೋಗವನ್ನು ನಗರದ ,ತಾಲೂಕಿನ ಕ್ರೀಡಾಪಟುಗಳು ಪಡೆದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗೋಕಾಕ ನಾಡಿ ಕೀರ್ತಿ ಪತಾಕೆಯನ್ನು ಹಾರಿಸಲಿ ಎಂಬ ಆಶಯ ಸಚಿವ ಸತೀಶ ಜಾರಕಿಹೊಳಿ ಅವರದ್ದಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಕ್ರೀಡಾಪೇಮ ಇದೆ ರೀತಿ ಮುಂದುವರೆದು ತಾಲೂಕಿನ ಕ್ರೀಡಾಪಟುಗಳಿಗೆ ವರದಾನವಾಗಲಿ ಎಂದು ಆಶಿಸೋಣ

Related posts: