ಗೋಕಾಕ:ಬಸವಾದಿ ಶಿವಶರಣರು ನೀಡಿದ ವಚನಗಳು ಸಮಸ್ತ ಮನುಕುಲದ ಉದ್ದಾರಕ್ಕೆ ದಾರಿದೀಪವಾಗಿವೆ : ರಂಜಾನ್ ದರ್ಗಾ ಅಭಿಮತ
ಬಸವಾದಿ ಶಿವಶರಣರು ನೀಡಿದ ವಚನಗಳು ಸಮಸ್ತ ಮನುಕುಲದ ಉದ್ದಾರಕ್ಕೆ ದಾರಿದೀಪವಾಗಿವೆ : ರಂಜಾನ್ ದರ್ಗಾ ಅಭಿಮತ
ಗೋಕಾಕ ಮಾ 25 : ಬಸವಾದಿ ಶಿವಶರಣರು ನೀಡಿದ ವಚನಗಳು ಸಮಸ್ತ ಮನುಕುಲದ ಉದ್ದಾರಕ್ಕೆ ದಾರಿದೀಪವಾಗಿವೆ ಎಂದು ಧಾರವಾಡದ ಖ್ಯಾತ ಸಾಹಿತಿ,ಚಿಂತಕ ರಂಜಾನ್ ದರ್ಗಾ ಹೇಳಿದರು.
ಇತ್ತೀಚೆಗೆ ಶೂನ್ಯ ಸಂಪಾದನ ಮಠದಲ್ಲಿ ಇಲ್ಲಿನ ಧರ್ಮ ಪ್ರಚಾರ ಸಂಸ್ಥೆ , ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 175ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಲಿಂಗಾಯತ ಧರ್ಮವು ವೈಜ್ಞಾನಿಕ ತತ್ವಾಧಾರಿತ ಧರ್ಮವಾಗಿದ್ದು, ವಚನ ಸಾಹಿತ್ಯ ಇಂದು ಕನ್ನಡ ನಾಡಿನಿಂದ ಇಡೀ ಜಗತ್ತಿಗೆ ರಫ್ತು ಆಗಬೇಕಾದ ಅವಶ್ಯಕತೆ ಇದೆ. ಇಂದಿನ ಯುವ ಪಿಳಿಗೆಗೆ ಬಸವಣ್ಣನವರ ತತ್ವಗಳನ್ನು ಹಾಗೂ ಅವರು ಬಾಳಿ ಬದುಕಿದ ಆದರ್ಶಗಳನ್ನು ತಿಳಿಸಿ ಹೇಳಬೇಕಾದ ಕಾರ್ಯ ನಾವು ಮಾಡಬೇಕಾಗಿದೆ. ಜಗತ್ತಿನಲ್ಲಿ ಕೇವಲ 15 ಧರ್ಮಗಳಿಗೆ ಧರ್ಮ ಭಾಷೆಗಳಿವೆ ಲಿಂಗಾಯತರಿಗೆ ಕನ್ನಡವೇ ಧರ್ಮ ಭಾಷೆ ಕನ್ನಡ ಕಳೆದುಕೊಂಡರೆ ಲಿಂಗಾಯತ ಧರ್ಮದ ಅಸ್ತಿತ್ವಕ್ಕೆ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಕನ್ನಡವನ್ನು ಉಳಿಸುವ ಮೂಲಕ ಶರಣ ಸಾಹಿತ್ಯವನ್ನು ರಕ್ಷಿಸಬೇಕಿದೆ. ಜಗತ್ತಿನ 29 ಭಾಷೆಗಳಿಗೆ ಭಾಷಾಂತರಗೊಂಡಿರುವ ವಚನ ಸಾಹಿತ್ಯ ಶ್ರೇಷ್ಠ ಮೌಲ್ಯಗಳನ್ನು ಹೊಂದಿದೆ ಎಂದರು.
ಲಿಂಗಾಯತ ಧರ್ಮ ವಿಶ್ವಮಾನ್ಯವಾದುದ್ದು ಅದು ವಿಮೋಚನಾ ಅಥವಾ ಮೋಕ್ಷ ನೀಡಬಲ್ಲ ಧರ್ಮವಾಗಿದೆ.ವಚನಗಳ ಮೇಲೆ ದಬ್ಬಾಳಿಕೆ ನಡೆದಿದ್ದು, ಯಾವುದೇ ಕಾರಣಕ್ಕೂ ಅವುಗಳನ್ನು ಬದಲಾಯಿಸದೇ ಅವುಗಳನ್ನು ಮೂಲ ರೀತಿಯಲ್ಲಿಯೇ ಉಳಿಸಿಕೊಳ್ಳಬೇಕೆಂದು ರಂಜಾನ್ ದರ್ಗಾ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸನಗೌಡ ಪಾಟೀಲ ವಹಿಸಿದ್ದರು.
ವೇದಿಕೆಯಲ್ಲಿ ಡಾ.ಸಿ.ಕೆ ನಾವಲಗಿ, ಶ್ರೀಮತಿ ಶೈಲಾ ಬಿದರಿ, ಅನಸೂಯ ಅಂಗಡಿ, ದುಂಡಪ್ಪ ಕಡ್ಡಿ, ಭಾರತಿ ಮದಬಾವಿ, ಸುಶೀಲಾ ಹಿತ್ತಲಮನಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಎಸ್.ಕೆ.ಮಠದ ನಿರೂಪಿಸಿದರು, ಆರ್.ಎಲ್.ಮಿರ್ಜಿ ವಂದಿಸಿದರು.