ಬೆಳಗಾವಿ:ಅಂಜಲಿ ಅಂಬಿಗೇರ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ಕೋಳಿ ಬೆಸ್ತ ಸಮಾಜದ ವತಿಯಿಂದ ಪ್ರತಿಭಟನೆ
ಅಂಜಲಿ ಅಂಬಿಗೇರ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ಕೋಳಿ ಬೆಸ್ತ ಸಮಾಜದ ವತಿಯಿಂದ ಪ್ರತಿಭಟನೆ
ಬೆಳಗಾವಿ ಮೇ 17 : ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ವತಿಯಿಂದ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಜಲಿ ಹಂತಕ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಪೊಲೀಸರಿಗೆ ಮೌಖಿಕ ದೂರು ನೀಡಿದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದರಿಂದ ಅಂಜಲಿ ಹತ್ಯೆ ನಡೆದಿದೆ.
ನೇಹಾ ಹಿರೇಮಠ ಹತ್ಯೆ ಸಂದರ್ಭದಲ್ಲೇ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ. ನೇಹಾ ಹಾಗೂ ಅಂಜಲಿ ಹಂತಕರನ್ನು ಗಲ್ಲಿಗೇರಿಸಿ, ಎನ್‌ಕೌಂಟರ್ ಮಾಡಿ. ಸಾಧ್ಯವಾಗದಿದ್ದರೆ ನಮ್ಮ ಕೈಗೆ ಅವರನ್ನು ಕೊಟ್ಟು ಬಿಡಿ ನಾವು ನೋಡಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ರಾಜ್ಯ ಸಭಾ ಸದಸ್ಯ ಸಾಬಣ್ಣ ತಳವಾರ ಮಾತನಾಡಿ, ಅಂಜಲಿ ಅಂಬಿಗೇರ್ ಕೊಲೆ ಖಂಡಿಸಿ ಬೆಳಗಾವಿ ನಗರದಲ್ಲಿ ಕೋಳಿ ಬೆಸ್ತ ಸಮುದಾಯ ಪ್ರತಿಭಟನೆ ಮಾಡಲಾಗುತ್ತಿದೆ. ಇಡೀ ಜಿಲ್ಲೆಯ ಸಮುದಾಯದ ಬಾಂಧವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಇದು ಎರಡನೇ ಘಟನೆ ಆಗಿದೆ. ಈಗಲೂ ಕೂಡಾ ವಿದ್ಯಾರ್ಥಿನಿ ಮೇಲೆ ಹಲ್ಲೆಮಾಡಿ ಕೊಲೆ ಮಾಡಲಾಗಿದೆ. ಯಾವುದೋ ಕಾರಣ ಇಟ್ಟುಕೊಂಡು ಕೊಲೆ ಮಾಡಿದ್ದಾನೆ. ನೇಹಾ ಕೊಲೆ ಮಾಸುವ ಮುನ್ನವೇ ಈಗ ಮತ್ತೊಂದು ಕೊಲೆ ಆಗಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಅಂಜಲಿ ಕೊಲೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಮೃತ ಅಂಜಲಿ ಕುಟುಂಬದ ಸದಸ್ಯರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಉಪ ಮಹಾಪೌರ ಮಧುಶ್ರೀ ಪೂಜಾರಿ ಮಾತನಾಡಿ, ಅಂಜಲಿ ಅಂಬಿಗೇರ ಕೊಲೆ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ನೇಹಾ ಕೊಲೆ ಇನ್ನೂ ಮರೆತಿಲ್ಲ ಈಗ ಮತ್ತೊಂದು ಕೊಲೆಯಾಗಿದೆ. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು. ಮಹಿಳೆಯರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. ಕೋಳಿ ಬೆಸ್ತ ಸಮಾಜದ ಜಿಲ್ಲಾಧ್ಯಕ್ಷ ದಿಲೀಪ ಕುರದಂವಾಡೆ, ಧರೆಪ್ಪ ಪೂಜಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.