RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಸಾಹಿತಿಗಳು ಅನ್ಯಾಯವಾದಾಗ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು : ಎಲ್.ಎಸ್.ಶಾಸ್ತ್ರಿ

ಗೋಕಾಕ:ಸಾಹಿತಿಗಳು ಅನ್ಯಾಯವಾದಾಗ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು : ಎಲ್.ಎಸ್.ಶಾಸ್ತ್ರಿ 

ಸಾಹಿತಿಗಳು ಅನ್ಯಾಯವಾದಾಗ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು : ಎಲ್.ಎಸ್.ಶಾಸ್ತ್ರಿ

ಗೋಕಾಕ ಜು 13 : ಸಾಹಿತಿಗಳು ಆತ್ಮಗೌರವವನ್ನು ಕಳೆದು ಕೊಳ್ಳದೆ ಅನ್ಯಾಯವಾದಾಗ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪತ್ರಕರ್ತ ಹಾಗೂ ಸಾಹಿತಿ ಎಲ್.ಎಸ್.ಶಾಸ್ತ್ರಿ ಹೇಳಿದರು.
ಶನಿವಾರದಂದು ನಗರದ ಜೆ.ಎಸ್.ಎಸ್.ಮಹಾವಿದ್ಯಾಲಯದ ಸಭಾಂಗಣದಲ್ಲಿ ಶ್ರೀ ಪರಮೇಶ್ವರಿ ಪ್ರಕಾಶನ ಹಾಗೂ ಸಾಹಿತ್ಯ ಚಿಂತನ ಕಮ್ಮಟ ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಪ್ರೋ. ಶಕುಂತಲಾ ದಂಡಗಿ ಅವರ ಆತ್ಮ ತೃಪ್ತಿ ಕಾದಂಬರಿಯನ್ನು ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಮಾಜಿಕ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳುವಂತಹ ಸಾಹಿತ್ಯವನ್ನು ಜನರಿಗೆ ನೀಡುವ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಬೇಕು. ಜನರಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸುವ ಕಾರ್ಯವಾಗಬೇಕು. ಯುವ ಪೀಳಿಗೆಯಲ್ಲಿ ಕನ್ನಡ ಸಾಹಿತ್ಯದ ಕುರಿತು ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.

ಕೃತಿ ಲೋಕಾರ್ಪಣೆಗೋಳಿಸಿ ಮಾತನಾಡಿದ ಜಾನಪದ ತಜ್ಞ ಡಾ.ಸಿ.ಕೆ ನಾವಲಗಿ ಸಹೃದಯಿ ಓದುಗರ ಅಭಿಪ್ರಾಯವೇ ಕೃತಿಗಳ ಪರಿಚಯ ಹಾಗೂ ವಿರ್ಮಶೆಯಾಗಿದೆ. ಓದುಗರೆ ಕೃತಿಗಳ ನಿಜವಾದ ಅಭಿಮಾನಿಗಳಾಗಿದ್ದು, ಪುಸ್ತಕಗಳನ್ನು ಓದುವ ಹವ್ಯಾಸವನ್ನು ಹೆಚ್ಚು ಬೆಳೆಸಿಕೊಂಡು ಸಾಹಿತಿಗಳನ್ನು ಪ್ರೋತ್ಸಾಹಿಸಿಬೇಕು ಆತ್ಮ ತೃಪ್ತಿ ಕಾದಂಬರಿ ಅರ್ಥಪೂರ್ಣ ಶಿರ್ಷಿಕೆಯೊಂದಿಗೆ ಓದುಗರಿಗೆ ತೃಪ್ತಿ ನೀಡುತ್ತದೆ. ಸಮಾಜ ಬದಲಾವಣೆ ಅಂಶದೊಂದಿಗೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತದೆ. ಸುಖಾಂತ್ಯ ರೀತಿಯಲ್ಲಿ ಕಾದಂಬರಿ ಮುಕ್ತಾಯ ಗೊಂಡು ಓದುಗರಲ್ಲಿ ಆನಂದ ಮೂಡಿಸುತ್ತದೆ. ಕಾದಂಬರಿ ರಚಿಸುವಲ್ಲಿ ಸಾಹಿತಿ ಶಕುಂತಲಾ ದಂಡಗಿ ಯಶಸ್ವಿಯಾಗಿದ್ದು, ಇನ್ನು ಹೆಚ್ಚಿನ ಕೃತಿಗಳು ಅವರಿಂದ ಸಾಹಿತ್ಯ ಲೋಕಕ್ಕೆ ಬರಲೆಂದು ಹಾರೈಸಿದರು.
ಕಾದಂಬರಿ ಕುರಿತು ಮಾತನಾಡಿದ ಸವದತ್ತಿಯ ಹಿರಿಯ ಸಾಹಿತಿ ಪ್ರಾಚಾರ್ಯ ಡಾ.ವಾಯ್.ಎಂ ಯೊಕ್ಕೊಳಿ ಕಾದಂಬರಿಗಳ ಸಾಮ್ರಾಟ್ ಕೃಷ್ಣಮೂರ್ತಿ ಪುರಾಣಿಕ, ಬಸವರಾಜ ಕಟ್ಟಿಮನಿ, ಬೆಟಗೇರಿ ಕೃಷ್ಣಶರ್ಮ, ಚಂದ್ರಶೇಖರ್ ಕಂಬಾರ ಅವರಂತಹ ಮಹಾನ ಸಾಹಿತಿಗಳು ಹುಟ್ಟಿದ ನೆಲ ಗೋಕಾಕ. ಅವರ ಪ್ರೇರಣೆಯಿಂದ ಹಲವಾರು ಸಾಹಿತಿಗಳು ತಮ್ಮ ಕಾದಂಬರಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಅಂತಹ ಸಾಹಿತಿಗಳಲ್ಲಿ ಒಬ್ಬರಾದ ಶಕುಂತಲಾ ದಂಡಗಿ ಅವರು ಸುಂದರವಾದ ಕಾದಂಬರಿ ರಚಿಸಿ ಓದುಗರೊಂದಿಗೆ ತಾವು ಆತ್ಮ ತೃಪ್ತಿ ಹೊಂದಿದ್ದಾರೆ. ಸಮಾಜದಲ್ಲಿ ನಡೆಯುವ ನೈಜ ಘಟನೆಗಳೊಂದಿಗೆ ಮನುಷ್ಯ ಒಳ್ಳೆಯವನಾಗಬೇಕು ಎಂಬುದನ್ನು ತಮ್ಮ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ ಎಂದರು.

ವೇದಿಕೆಯಲ್ಲಿ ಗೋಕಾಕ ಶಿಕ್ಷಣ ಸಂಸ್ಥೆಯ ಚೆರಮನ್ ವಿಶ್ವಾನಾಥ್ ಕಡಕೋಳ, ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ, ಸಾಹಿತಿಗಳಾದ ಮಹಾಲಿಂಗ ಮಂಗಿ, ಪ್ರೋ.ಚಂದ್ರಶೇಖರ್ ಅಕ್ಕಿ, ಜಯಾನಂದ ಮಾದರ, ಈಶ್ವರಚಂದ್ರ ಬೆಟಗೇರಿ, ಶಕುಂತಲಾ ದಂಡಗಿ, ಪ್ರಾಚಾರ್ಯ ಡಾ.ವಿರಾಜ ಮೋದಿ, ಸುರೇಶ್ ಮುದ್ದಾರ, ಲಕ್ಷ್ಮೀ ದುಗ್ಗಾಣಿ ಇದ್ದರು.

Related posts: