RNI NO. KARKAN/2006/27779|Sunday, December 22, 2024
You are here: Home » breaking news » ಅಂಕಲಗಿ:

ಅಂಕಲಗಿ: 

ಕನ್ನಡ ಕಡ್ಡಾಯ ಕಾನೂನು ಜಾರಿಗೆ ತರುವದರೊಂದಿಗೆ ಕನ್ನಡ ಉಳಿಸಿ ಬೆಳೆಸಬೇಕು : ಶಾಸಕ ರಮೇಶ ಅಭಿಮತ

 

 

ಅಂಕಲಗಿ ಜು 28 : ಸಾಹಿತಿಗಳು, ರಾಜಕಾರಣಿಗಳು, ಕನ್ನಡಾಭಿಮಾನಿಗಳೆಲ್ಲರೂ ಪ್ರಯತ್ನಶೀಲರಾಗಿ ಕನ್ನಡ ಕಡ್ಡಾಯ ಕಾನೂನು ಜಾರಿಗೆ ತರುವದರೊಂದಿಗೆ ಕನ್ನಡ ಉಳಿಸಿ ಬೆಳೆಸುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ರವಿವಾರದಂದು ತಾಲೂಕಿನ ಅಂಕಲಗಿ ಗ್ರಾಮದ ಶ್ರೀ ಸಪ್ತಪದಿ ಕಲ್ಯಾಣ ಮಂಟಪದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕದಿಂದ ಹಮ್ಮಿಕೊಂಡ ಬಸವರಾಜ ಕಟ್ಟಿಮನಿ ವೇದಿಕೆಯಲ್ಲಿ 7ನೇ ಗೋಕಾಕ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು.
ರಾಷ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜನರಿಗೆ ಕನ್ನಡದ ಬಗ್ಗೆ ಪ್ರೀತಿ, ಗೌರವಿದೆ. ಅತ್ಯಂತ ಪ್ರಾಚೀನ ಭಾಷೆಯಾದ ಕನ್ನಡವನ್ನು ತಳ ಮಟ್ಟದಿಂದ ಸಂಘಟಿಸಿ ಬೆಳೆಸೋಣ. ತಾಯಂದಿರು ತಮ್ಮ ಮಕ್ಕಳಿಗೆ ಮಾತೃಭಾಷೆ ಕಲಿಸಿ ಅವರಲ್ಲಿ ಕನ್ನಡಾಭಿಮಾನ ಬೆಳೆಸುವಂತೆ ಕರೆ ನೀಡಿದರು.
ಸಮ್ಮೇಳನದ ಸರ್ವಾಧ್ಯಕ್ಷರಾದ ಶಿವಲಿಂಗಪ್ಪ ಭಾಂವಿಕಟ್ಟಿ ಅವರು ಮಾತನಾಡುತ್ತ, ಸಮ್ಮೇಳನ ಸಾರ್ಥತಕ ಪಡೆದುಕೊಳ್ಳ ಬೇಕೆಂದರೆ ನಮ್ಮ ಕನ್ನಡ ಭಾಷೆ , ನೆಲ, ಜಲಗಳ ಬಗೆಗೆ ಸರಕಾರ ಸದಾ ಕನ್ನಡಿಗರ ಪರವಾಗಿರಬೇಕು. ಕನ್ನಡ ಮಾಧ್ಯಮದ ಶಾಲೆಗಳಿಗೆ ಹೆಚ್ಚೆಚ್ಚು ಅನುದಾನ ನೀಡುವ ಮೂಲಕ ಅವುಗಳ ಅಭಿವೃದ್ಧಿ ಜೊತೆಗೆ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವವರ ಮಕ್ಕಳಿಗೆ ಸರಕಾರಿ ಮತ್ತು ಖಾಸಗಿ ಉದ್ಯೋಗದಲ್ಲಿ ವಿಶೇಷ ಮೀಸಲಾತಿಯನ್ನು ನೀಡಬೇಕು. ಇಂದಿನ ಡಿಜಿಟಲ್ ಯುಗದಲ್ಲಿ ಕನ್ನಡ ಸಂಸ್ಕೃತಿ ಮಾಯವಾಗುತ್ತಿದೆ. ನಮ್ಮ ಸಂಸ್ಕೃತಿ ಉಳಿದರೆ ನಮ್ಮ ನಾಡು, ನಮ್ಮ ಬದುಕು ಉಳಿಯುತ್ತದೆ. ಕನ್ನಡ ನಮ್ಮ ಉಸಿರಾಗಬೇಕು. ಅದನ್ನು ಉಳಿಸಿ ಬೆಳೆಸಿ ಶ್ರೀಮಂತ ಭಾಷೆಯನ್ನಾಗಿ ಮಾಡುವಂತೆ ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಅಂಕಲಗಿ-ಕುಂದರಗಿ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಅಮಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ, ಅಡವಿಸಿದ್ದೇಶ್ವರ ಶಿವಯೋಗಿಗಳು 363 ಮಠಗಳನ್ನು ಸ್ಥಾಪಿಸಿ ಶರಣರ ವಚನಗಳನ್ನು ಪ್ರಚಾರ ಮಾಡುವ ಮೂಲಕ ಕನ್ನಡವನ್ನು ಬೆಳೆಸಿದ್ದಾರೆ. ಎಲ್ಲ ಭಾಷೆಯನ್ನು ಕಲಿಯೋಣ ಆದರೆ ಮಾತೃಭಾಷೆ ಕನ್ನಡಕ್ಕೆ ಹೆಚ್ಚಿನ ಮಹತ್ವ ನೀಡೋಣ. ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಆಶಯ ನುಡಿಗಳನ್ನು ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ನುಡಿದರು. ತಾಲೂಕಾಧ್ಯಕ್ಷೆ ಭಾರತಿ ಮದಬಾವಿ ಸ್ವಾಗತಿಸಿ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಭೀಮಗೌಡ ಪೋಲಿಸಗೌಡರ ಪ್ರಸ್ತಾವಿಕವಾಗಿ ಮಾತ‌ಅಡಿದರು. ನಿಕಟಪೂರ್ವ ಅಧ್ಯಕ್ಷ ಈಶ್ವರಚಂದ್ರ ಬೆಟಗೇರಿ ಇವರಿಂದ ನಿಯೋಜಿತ ಅಧ್ಯಕ್ಷರಾದ ಶಿವಲಿಂಗಪ್ಪಾ ಭಾಂವಿಕಟ್ಟಿ ಅವರಿಗೆ ಧ್ವಜ ಹಸ್ತಾಂತರ ಮಾಡಲಾಯಿತು.
ವೇದಿಕೆಯ ಮೇಲೆ ಮಾಜಿ ಶಾಸಕ ಎಮ್ ಎಲ್ ಮುತ್ತೇನ್ನವರ, ಪ್ರೊ.ಚಂದ್ರಶೇಖರ ಅಕ್ಕಿ, ಮಹಾಂತೇಶ ತಾಂವಶಿ, ಶಾಮಾನಂದ ಪೂಜೇರಿ, ಬಸವರಾಜ ಪಟ್ಟಣಶೆಟ್ಟಿ, ಬಾಳಗೌಡ ಪಾಟೀಲ, ಶಂಕರ ಬೂಸಣ್ಣವರ, ಟಿ ಆರ್ ಕಾಗಲ, ಎಮ್ ಎಲ್ ತೋಳಿನವರ ಇದ್ದರು.

ಇದಕ್ಕು ಮುಂಚೆ ಮುಂಜಾನೆ 8 ಗಂಟೆಗೆ ನಿವೃತ್ತ ಸೇನಾಧಿಕಾರಿ ಬಿ ಎಲ್ಲ ಪರಗಣ್ಣವರ ರಾಷ್ಟ್ರಧ್ವಜ ಧ್ವಜಾರೋಹಣ ನೆರವೇರಿಸಿದರು‌. ಕಸಾಪ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟ್ಟಗುಡ್ಡ ನಾಡಧ್ವಜ, ಕಸಾಪ ತಾಲೂಕ ಅಧ್ಯಕ್ಷೆ ಭಾರತಿ ಮದಭಾವಿ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಸೇನಾಧಿಕಾರಿಗಳಾದ ಎಲ್ ಎಲ್ ಮಲ್ಲಾಪೂರ, ಎ ಬಿ ಅಂಬಲಿ, ಬಸವರಾಜ ಮಾಳಗಿ ಇದ್ದರು.
ತಾಯಿ ಭುವನೇಶ್ವರಿ ಭಾವಚಿತ್ರ ಮತ್ತು ಸಮ್ಮೇಳನಾಧ್ಯಕ್ಷ ಶಿವಲಿಂಗ ಭಾಂವಿಕಟ್ಟಿ ದಂಪತಿಗಳ ಮೆರವಣಿಗೆಗೆ ವರ್ತಕ ಅಣ್ಣಾಸಾಹೇಬ ರಾಜಮಾನೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಅಂಕಲಗಿ ಬಸ್ಸು ನಿಲ್ದಾಣದಿಂದ ಬಸವಾರ ಕಟ್ಟಿಮನಿ ಪ್ರಧಾನ ವೇದಿಕೆ ವರೆಗೆ ವಿವಿಧ ವಾದ್ಯಮೇಳ, ಸುಮಂಗಲಿಯರ ಕುಂಭದೊಂದಿಗೆ, ಜಾನಪದ ಕಲಾತಂಡಗಳಾದ ದಟ್ಟಿ ಕುಣಿತ, ಹುಲಿವೇಷ, ಕುದರೆ ವೇಷಧರಿಸಿದ ಕಲಾವಿದರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿ ಆಕರ್ಷಿಸಿದರು. ಸ್ವಾಗಾತ ಸಮಿತಿ ಅಧ್ಯಕ್ಷ ಭೀಮಗೌಡ ಪೋಲಿಸಗೌಡರ, ಬಿಇಓ ಜಿ ಬಿ ಬಳಗಾರ, ಮುಖ್ಯ ವೈದ್ಯಾಧಿಕಾರಿ ರವೀಂದ್ರ ಅಂಟಿನ, ಸಮಾಜ ಕಲ್ಯಾಣ ಅಧಿಕಾರಿ ಎ ಬಿ ಮಲಬನ್ನವರ, ಅಂಕಲಗಿ ಪಟ್ಟಣ ಪಂಚಾಯ ಮುಖ್ಯಾಧಿಕಾರಿ ಕೆಂಪಣ್ಣ ಪಾಟೀಲ, ಮಹಾಂತೇಶ ತಾಂವಶಿ, ಶಾಮಾನಂದ ಪೂಜೇರಿ, ವೀರುಪಾಕ್ಷ ಅಂಗಡಿ, ಮುನ್ನಾ ದೇಸಾಯಿ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.

Related posts: