ಗೋಕಾಕ:ಕೊಲೆ ಪ್ರಕರಣ ತೀರ್ಪು ಪ್ರಕಟ; ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ 12ನೇ ಜಿಲ್ಲಾ ನ್ಯಾಯಾಲಯ
ಕೊಲೆ ಪ್ರಕರಣ ತೀರ್ಪು ಪ್ರಕಟ; ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ 12ನೇ ಜಿಲ್ಲಾ ನ್ಯಾಯಾಲಯ
ಗೋಕಾಕ ಜು 31 : ಪ್ರಿಯಕರನೊಂದಿಗೆ ಕೂಡಿ ಸಂಚು ನಡೆಸಿ, ಗಂಡನನ್ನೇ ಕೊಲೆಗೈದಿದ್ದ ವಿವಾಹಿತ ಯುವತಿ ಮತ್ತು ಆಕೆಯ ಪ್ರಿಯಕರನಿಗೆ ಇಲ್ಲಿನ 12ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ. 3 ಲಕ್ಷ ದಂಡ ಪಾವತಿಸುವಂತೆ ಮಂಗಳವಾರ ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ 12ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ ಅವರು ಮಂಗಳವಾರ ತೀರ್ಪು ನೀಡಿ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ.
ಕೊಲೆಯಾದ ಮೂಡಲಗಿ ತಾಲ್ಲೂಕಿನ ವಡೇರಹಟ್ಟಿ ಗ್ರಾಮದ ಶಂಕರ ಸಿದ್ದಪ್ಪ ಜಗಮುತ್ತಿ (27) ಎಂಬಾತನನ್ನು ವಿವಾಹ ಆಗಿದ್ದ ಆಪಾದಿತೆ ಸಿದ್ದವ್ವ ಉರ್ಪ ಪ್ರಿಯಾಂಕಾ (21), ತನ್ನ ವಿವಾಹದ ಬಳಿಕವೂ ಆಪಾದಿತ ಪ್ರಿಯಕರ ಮೂಡಲಗಿ ತಾಲ್ಲೂಕಿನ ಭೈರನಟ್ಟಿ ಗ್ರಾಮದ ಶ್ರೀಧರ ತಳವಾರ (21) ಎಂಬಾತನೊಂದಿಗೆ ತನ್ನ ಸರಸ ಸಲ್ಲಾಪ ಮುಂದುವರೆಸಿದ್ದಳು ಎನ್ನಲಾಗಿದ್ದು, ತಮ್ಮಿಬ್ಬರ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಿದ್ದಾನೆ ಎಂದು ಆತನನ್ನು ಕೊಲೆಗೈಯಲು ಸಂಚು ರೂಪಿಸಿ, 2023ರ ಜುಲೈ 17ರಂದು ಮುಂಜಾನೆ ದೇವಸ್ಥಾನಕ್ಕೆ ಹೋಗುವುದಾಗಿ ಆಪಾದಿತೆ ಸಿದ್ದವ್ವ ಉರ್ಪ ಪ್ರಿಯಾಂಕಾ ತನ್ನ ಗಂಡ ಶಂಕರನನ್ನು ಕರೆದುಕೊಂಡು ಬಂದು, ಅಲ್ಲಿಗೆ ಮೊದಲೇ ಬಂದಿದ್ದ ಇನ್ನೋರ್ವ ಆಪಾದಿತ ಶ್ರೀಧರ ತನ್ನಲ್ಲಿದ್ದ ಹರಿತವಾದ ತಲವಾರದಿಂದ ಕುತ್ತಿಗೆ ಮತ್ತಿತರ ಕಡೆಗಳಲ್ಲಿ ಕೊಚ್ಚಿ ಕೊಲೈಗಿದ್ದಾನೆ ಎಂದು ದೂರಿ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರಿನನ್ವಯ ತನಿಖೆ ಕೈಗೊಂಡಿದ್ದ ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ ಅವರು ನ್ಯಾಯಾಲಯಕ್ಕೆ ಆಪಾದಿತರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ಸುನೀಲ ಎಂ. ಹಂಜಿ ವಾದಿಸಿದ್ದರು. ಆಪಾದಿತರಿಗೆ ವಿಧಿಸಲಾದ ದಂಡದ ಮೊತ್ತದ ಪೈಕಿ ರೂ. 2.50 ಲಕ್ಷ ಮೊತ್ತವನ್ನು ಮೃತನ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ಪಾವತಿಸುವಂತೆಯೂ ತೀರ್ಪಿನಲ್ಲಿ ಉಲ್ಲೇಖಿತವಾಗಿದೆ.