ಗೋಕಾಕ:ಕೋಲ್ಕತ್ತದಲ್ಲಿ ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ,ಹತ್ಯೆ ಖಂಡಿಸಿ ನಗರದಲ್ಲಿ ವೈದ್ಯರ ಪ್ರತಿಭಟನೆ
ಕೋಲ್ಕತ್ತದಲ್ಲಿ ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ,ಹತ್ಯೆ ಖಂಡಿಸಿ ನಗರದಲ್ಲಿ ವೈದ್ಯರ ಪ್ರತಿಭಟನೆ
ಗೋಕಾಕ ಅ 17 : ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಕರ್ತವ್ಯ ನಿರತ ಯುವ ವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕ್ರೂರ ಹತ್ಯೆಯನ್ನು ಖಂಡಿಸಿ ಇಲ್ಲಿನ ಭಾರತೀಯ ವೈದ್ಯಕೀಯ ಸಂಸ್ಥೆಯ ತಾಲೂಕು ಘಟಕದವರು ನಗರದಲ್ಲಿ ಶನಿವಾರದಂದು ಪ್ರತಿಭಟನೆ ನಡೆಸಿ , ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿ ಅರ್ಪಿಸಿದರು.
ನಗರದ ಸರಕಾರಿ ಆಸ್ಪತ್ರೆಯಿಂದ ಪ್ರತಿಭಟನಾ ಜಾಥಾ ನಡೆಸಿದ ನೂರಾರು ವೈದ್ಯರು, ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಡಾ.ಮೋಹನ ಭಸ್ಮೆ ಅವರ ಮುಖಾಂತರ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐಎಂಎ ತಾಲೂಕು ಅಧ್ಯಕ್ಷ ಡಾ.ರಮೇಶ ಪಟ್ಟಗುಂದಿ ಬೆಂಟೂರ, ಕೊಲ್ಕತ್ತದಲ್ಲಿ ನಡೆದ ಯುವವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಹೀನ ಕೃತ್ಯವಾಗಿದ್ದು, ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ದೇಶದಲ್ಲಿ ಸರಕಾರಗಳು ಮಹಿಳಾ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಅಲ್ಲದೇ, ಭವಿಷ್ಯದಲ್ಲಿ ಇಂಥ ಘಟನೆ ತಡೆಗಟ್ಟಲು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ, ಮಹಿಳೆಯರ ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಡಾ. ಅಶೋಕ ಕೊಪ್ಪ ಮಾತನಾಡಿ ಇದೊಂದು ಅಮಾನವೀಯ ಕೃತ್ಯವಾಗಿದೆ. ಇಂಥ ವಾತಾವರಣದಲ್ಲಿ ಮಹಿಳಾ ವೈದ್ಯರಿಗೆ ರಾತ್ರಿ ವೇಳೆ ಕೆಲಸ ಮಾಡಲು ಆದೇಶ ಮಾಡುವುದು ಹಿರಿಯ ವೈದ್ಯೆರಿಗೂ ಸವಾಲಾಗಿದೆ. ಇಂಥ ಭಯದ ವಾತಾವರಣದಲ್ಲಿ ಮಹಿಳಾ ವೈದ್ಯರು ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ಬಗ್ಗೆಯೇ ಹೆಚ್ಚಿಗೆ ಗಮನ ಹರಿಸಿದರೆ ರೋಗಿಗಳ ಆರೋಗ್ಯದ ಕುರಿತು ಕಾಳಜಿ ವಹಿಸುವುದು ಕಡಿಮೆಯಾಗುವ ಆತಂಕವಿದೆ. ಆದ್ದರಿಂದ ಸರಕಾರಗಳು ಮಹಿಳಾ ವೈದ್ಯರಿಗೆ ಸುಸೂತ್ರವಾಗಿ ಕೆಲಸ ನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ,
ನಗರದ ವೈದ್ಯರುಗಳಾದ ಆರ್.ಎಸ್.ಬೆನಚಿನಮರಡಿ, ಡಾ.ಮಂಗಳಾ ಸನದಿ, ಡಾ.ಶೆಟ್ಟೆಪ್ಪ ಗೋರೋಶಿ, ಡಾ. ಉಮೇಶ್ ನಿಪ್ಪಾಣಿ, ಡಾ.ಬಸವರಾಜ ಮದಬಾವಿ, ಡಾ.ಗಂಗಾಧರ ಉಮರಾಣಿ, ಡಾ. ಶಶಿಲ ಕಡಲಗಿಕರ, ಡಾ.ಸಿದ್ದಣ್ಣ ಕಮತ, ಡಾ.ಅಶೋಕ ಮುರಗೋಡ, ಡಾ.ಅಶೋಕ ಜಿರಗ್ಯಾಳ, ಡಾ.ಮಂಜುನಾಥ್ ಶಿಂಧೋಳಿಮಠ, ಡಾ. ಕೀರ್ತಿ ಬಿರನಗಡ್ಡಿ, ಡಾ.ಅರುಣ್ ವಣ್ಣೂರ, ಡಾ.ಗೀತಾ ಪಟ್ಟಗುಂದಿ, ಡಾ.ಬಶೀರ್ ಮತ್ತೆ, ಡಾ.ಚಿಕ್ಕೋಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.