ಗೋಕಾಕ:ನಾಳೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
ನಾಳೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
ಗೋಕಾಕ ಅ 29 : ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಅಗಸ್ಟ್ .30 ರಂದು ಮಧ್ಯಾಹ್ನ 2 ಗಂಟೆಗೆ ನಗರಸಭೆ ಸಭಾಂಗಣದಲ್ಲಿ ಜರುಗಲಿದ್ದು,ನಗರಸಭೆ ಅಧ್ಯಕ್ಷ ಸ್ಥಾನ ‘ಹಿಂದುಳಿದ ವರ್ಗ ಬ , ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿ ಮಾಡಲಾಗಿದೆ.
ಗೋಕಾಕ ನಗರಸಭೆಯು 31 ಸದಸ್ಯರನ್ನು ಒಳಗೊಂಡಿದ್ದು 26 ಸದಸ್ಯರು ಶಾಸಕ ರಮೇಶ ಜಾರಕಿಹೊಳಿ ಬೆಂಬಲಿತರಾದರೆ 5 ಸದಸ್ಯರು ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬ ಮೀಸಲಾತಿಯಿಂದ ಆಕಾಂಕ್ಷಿಗಳ ಸಂಖ್ಯೆ ಕಡಿಮೆ ಇದ್ದರೂ ಸಹ ಪರೋಕ್ಷವಾಗಿ ಆಕಾಂಕ್ಷಿಗಳು ಶಾಸಕ ರಮೇಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮತ್ತು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರನ್ನು ಬೇಟಿಯಾಗಿ, ಸಮಾಜದ ಹಿರಿಯರ ಮುಖಾಂತರ ಒತ್ತಡ ಹೇರುವ ಕಾರ್ಯ ಜೋರಾಗಿ ನಡೆದಿರುವುದು ಕಂಡು ಬಂದಿದೆ. ಇನ್ನು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿಯಿಂದ ಹಲವಾರು ಮಹಿಳಾ ಸದಸ್ಯೆಯರ ಹೆಸರು ಕೇಳಿ ಬರುತ್ತಿದ್ದು, ನಾಳೆ ಮುಂಜಾನೆ ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಗೃಹ ಕಛೇರಿಯಲ್ಲಿ ನಗರಸಭೆ ಸರ್ವ ಸದಸ್ಯರ ಸಭೆ ಕರೆದಿದ್ದು ಆ ಸಭೆಯಲ್ಲಿಯೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಯಾರಾಗಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.
ಒಟ್ಟಾರೆಯಾಗಿ ಕಳೆದ ಹದಿನೈದು ತಿಂಗಳಿನಿಂದ ನೆನೆಗುದಿಗೆ ಬಿದ್ದಿದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ಮುಹೂರ್ತ ನಿಗದಿಯಾಗಿದ್ದು, ಶಾಸಕ ರಮೇಶ ಜಾರಕಿಹೊಳಿ ಮತ್ತು ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಅವರು ಸೂಚಿಸುವ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎಂದು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂಬ ಚರ್ಚೆಗಳು ಜೋರಾಗಿ ನಡೆದಿವೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸುವ ಅಭ್ಯರ್ಥಿಗಳು ಮುಂಜಾನೆ 10-00 ಘಂಟೆಯಿಂದ 12-00 ವರೆಗೆ ನಾಮ ಪತ್ರ ಸಲ್ಲಿಸುವುದು , ಮಧ್ಯಾಹ್ನ 2 ಘಂಟೆಯಿಂದ ಚುನಾವಣಾ ಪ್ರಕ್ರಿಯೆ ಪ್ರಾರಂಭ ಮಧ್ಯಾಹ್ನ 2-15 ಘಂಟೆಗೆ ನಾಮಪತ್ರಗಳ ಪರಿಶೀಲನೆ, ಮಧ್ಯಾಹ್ನ 2-15 ರಿಂದ 2-30 ವರೆಗೆ ನಾಮಪತ್ರ ಹಿಂತೆಗೆದುಕೊಳ್ಳುವುದು, ಅವಶ್ಯವಿದ್ದಲ್ಲಿ ಮಧ್ಯಾಹ್ನ 2:30 ಕ್ಕೆ ಮತದಾನ ಮತ್ತು ಚುನಾವಣೆ ಫಲಿತಾಂಶ ಘೋಷಣೆಯಾಗಲಿದೆ.