RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಕೂಡಲೇ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆಯನ್ನಾಗಿ ಘೋಷಿಸಬೇಕು : ಅಶೋಕ ಪೂಜಾರಿ ಆಗ್ರಹ

ಗೋಕಾಕ:ಕೂಡಲೇ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆಯನ್ನಾಗಿ ಘೋಷಿಸಬೇಕು : ಅಶೋಕ ಪೂಜಾರಿ ಆಗ್ರಹ 

ಕೂಡಲೇ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆಯನ್ನಾಗಿ ಘೋಷಿಸಬೇಕು : ಅಶೋಕ ಪೂಜಾರಿ ಆಗ್ರಹ

ಗೋಕಾಕ 30: ಬೆಳಗಾವಿ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿ 18 ವಿಧಾನಸಭಾ ಮತಕ್ಷೇತ್ರಗಳನ್ನು ಹೊಂದಿ ಭೌಗೋಳಿಕವಾಗಿ ಮತ್ತು ಜನಸಂಖ್ಯೆಯಿಂದ ದೊಡ್ಡ ಜಿಲ್ಲೆಯಾಗಿದ್ದು,ಕೂಡಲೇ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಹಿರಿಯ ರಾಜಕೀಯ ಧುರೀಣ ಮತ್ತು ಕಾಂಗ್ರೇಸ್ ಮುಖಂಡ ಅಶೋಕ ಪೂಜಾರಿ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

ಸೋಮವಾರದಂದು ನಗರದಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಹಿಂದೆ ಕರ್ನಾಟಕ ಸರಕಾರ ಆಡಳಿತಾತ್ಮಕ ಅನುಕೂಲತೆಯ ದೃಷ್ಠಿಯಿಂದ ರಾಜ್ಯದ ಬಹುದೊಡ್ಡ ಜಿಲ್ಲೆಗಳನ್ನು ವಿಭಜಿಸಿ ಹೊಸ ಜಿಲ್ಲೆಗಳ ರಚನೆ ಮಾಡುವ ಮೂಲಕ ಆಯಾ ಜಿಲ್ಲೆಗಳ ಜನರಿಗೆ ಆಡಳಿತಾತ್ಮಕ ವಿಕೇಂದ್ರೀಕರಣದ ಅನುಕೂಲತೆ ಕಲ್ಪಿಸಿಕೊಟ್ಟಿದ್ದಾರೆ. ಅದರೇ ಅದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ವಿಭಜನೆಯ ಕೂಗು ಕರ್ನಾಟಕ ರಾಜ್ಯದ ಅಸ್ಥಿತ್ವಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಬಹುದೊಡ್ಡ ಕೂಗಾಗಿ ಸರಕಾರದ ಸಕಾರಾತ್ಮಕ ನಿರ್ಣಯಕ್ಕೆ ಒತ್ತಾಯಿಸುತ್ತಿದ್ದರೂ ಸಹ ಒಂದಿಲ್ಲೊಂದು ರಾಜಕೀಯ ಕಾರಣಗಳಿಂದ ವಿಳಂಬವಾಗುತ್ತಿರುವದು ಖೇಧದ ಸಂಗತಿಯಾಗಿದೆ ಎಂದು ನೋವನ್ನು ವ್ಯಕ್ತಪಡಿಸಿರುವ ಅವರು ಇದರ ಹಿಂದೆ ಕಾಣದ ಕೈಗಳು ಸಮಂಜಸವಲ್ಲದ ಕಾರಣಗಳನ್ನು ಮುಂದೊಡ್ಡಿ ಜಿಲ್ಲಾ ವಿಭಜನೆಯ ಪ್ರಕ್ರಿಯೆಗೆ ತಡೆಯೊಡ್ಡುತ್ತಿರುವದು ಅಸಹನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ದಿ.ಜೆ.ಎಚ್. ಪಟೇಲರವರು ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ಹೊಸ ಜಿಲ್ಲೆಗಳ ರಚನೆಗೆ ಅಧಿಕೃತವಾಗಿ ಸರಕಾರದಿಂದ ಆದೇಶ ಮಾಡಿ ಗೆಜೆಟ್ ನೋಟಿಪಿಕೇಶನ್ ಮಾಡಿ ಸರಕಾರದ ರಾಜಕೀಯ ಮತ್ತು ಆಡಳಿತಾತ್ಮಕ ಇಚ್ಚಾಶಕ್ತಿಯನ್ನು ಪ್ರದರ್ಶಿಸಿದ್ದರು. ಆದರೆ ಅಂದು ಸಹ ಬೆಳಗಾವಿ ಜಿಲ್ಲೆಯ ರಾಜಕೀಯ ವ್ಯವಸ್ಥೆ ಸರಕಾರದ ಸಕಾರಾತ್ಮಕ ಆದೇಶವನ್ನು ಜಾರಿಗೆ ತರುವಂತೆ ಮಾಡುವಲ್ಲಿ ವಿಫಲವಾಗಿ ಇಲ್ಲಿಯ ವರೆಗೆ ಈ ಭಾಗದ ಜನ ಬೆಳಗಾವಿ ಜಿಲ್ಲಾ ವಿಭಜನೆಗೆ ಜಾತಕ ಪಕ್ಷಿಯಂತೆ ಕಾಯುವಂತೆ ಮಾಡಿರುವದು ಈ ಭಾಗದ ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನು ಎದ್ದುಕಾಣುವಂತೆ ತೋರಿಸುತ್ತಿದೆ ಎಂದು ಹೇಳಿದ್ದಾರೆ.

ಕಳೇದ 2-3 ವಾರಗಳಲ್ಲಿ ಜಿಲ್ಲೆಯ ಇಬ್ಬರೂ ಸಚಿವರು ಬೆಳಗಾವಿ ಜಿಲ್ಲೆಯ ವಿಭಜನೆಗೆ ಪೂರಕವಾದ ಸಕಾರಾತ್ಮಕ ಹೇಳಿಕೆಗಳನ್ನು ನೀಡುತ್ತಿರುವದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದರೂ ಸಹ ಇಂತಹ ಹೇಳಿಕೆಗಳನ್ನು ಈ ಹಿಂದೆಯೂ ಸಹ ಅನೇಕ ಬಾರಿ ಇಂತಹ ಹೇಳಿಕೆಗಳನ್ನು ಆಶಾಭಾವನೆಯಿಂದ ಕೇಳುತ್ತಿರುವ ಜಿಲ್ಲೆಯ ಜನ ಈಗಲಾದರೂ ಈ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬಹುದೇ ಎಂಬ ಪ್ರಶ್ನಾರ್ಥಕ ಭಾವನೆಯಿಂದ ಕಾಯಬೇಕಾಗಿದೆ ಎಂದು ಹತಾಶ ಮನೋಭಾವನೆಯಿಂದ ಹೇಳಿದ್ದಾರೆ. ಬೆಳಗಾವಿ ಜಿಲ್ಲಾ ವಿಭಜನೆಯ ಬೇಡಿಕೆ ಹಾಗೂ ಕೂಗು ರಾಜಕೀಯ ಪ್ರೇರಿತ ಹೋರಾಟವಾಗಿರದೇ ಆಡಳಿತಾತ್ಮ ಅನುಕೂಲತೆಯ ಕೂಗಾಗಿದೆ. ಯಾವುದೇ ವ್ಯವಸ್ಥೆ ಬೆಳಗಾವಿ ಜಿಲ್ಲಾ ವಿಭಜನೆ ಹಾಗೂ ಹೊಸ ಜಿಲ್ಲೆಗಳ ರಚನೆಯ ಪ್ರಕ್ರಿಯೆಗೆ ತಮ್ಮ ರಾಜಕೀಯ ಇಚ್ಚಾಶಕ್ತಿಗೆ ಪೂರಕವಾಗಿ ತಡೆಯೊಡ್ಡುವ ತಂತ್ರಗಾರಿಕೆ ಮಾಡುತ್ತಿದ್ದರೆ ಅದನ್ನು ಬೆಳಗಾವಿ ಜಿಲ್ಲೆಯ ಜನತೆ ಸಹಿಸಲು ಸಾಧ್ಯವಿಲ್ಲ ಎಂದಿರುವ ಅವರು ಈ ಕುರಿತು ದೃಢಸಂಕಲ್ಪದ ನಿಲುವನ್ನು ರಾಜ್ಯಸರಕಾರ ಪ್ರದರ್ಶಿಸಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಸಹಿತ ಹೊಸ ಜಿಲ್ಲೆಗಳ ರಚನೆ ಮಾಡದಿದ್ದರೆ ದಸರಾ ಹಬ್ಬದ ನಂತರ ಗೋಕಾಕ ಜಿಲ್ಲಾ ಚಾಲನಾ ಸಮೀತಿಯ ಆಶ್ರಯದಲ್ಲಿ ಉಗ್ರಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಸಿದ್ದಾರೆ.

Related posts: