ಗೋಕಾಕ:ಪ್ರೊ. ಅಕ್ಕಿಯವರು ಬಹುಮುಖಿ ಸಾಹಿತ್ಯ ಪರಿಚಾರಕರು – ಡಾ. ಬಿರಾದಾರ
ಪ್ರೊ. ಅಕ್ಕಿಯವರು ಬಹುಮುಖಿ ಸಾಹಿತ್ಯ ಪರಿಚಾರಕರು – ಡಾ. ಬಿರಾದಾರ
16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ : ಸನ್ಮಾನ
ಗೋಕಾಕ ನ 8: ಕಳೆದ ಅರ್ಧ ಶತಮಾನದಿಂದ ಗೋಕಾವಿ ಪರಿಸರದ ಸಾರಸ್ವತ ಲೋಕದ ಅವಿಭಾಜ್ಯ ಅಂಗವಾಗಿರುವ ಪ್ರೊ. ಚಂದ್ರಶೇಖರ ಅಕ್ಕಿಯವರು ಬಹುಮುಖಿ ಸಾಹಿತ್ಯ ಪರಿಚಾರಕರಾಗಿದ್ದಾರೆ ಎಂದು ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು.
ವಿಶ್ರಾಂತ ಪ್ರಾಧ್ಯಾಪಕರು, ಹಿರಿಯ ಸಾಹಿತಿಗಳು ಮತ್ತು ಉತ್ತಮ ವಾಗ್ಮಿಗಳೂ ಆದ ಪ್ರೊ. ಚಂದ್ರಶೇಖರ ಅಕ್ಕಿಯವರು ಬೆಳಗಾವಿ ಜಿಲ್ಲಾ ೧೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಯುಕ್ತ ಕೇಂದ್ರ ಬಸವ ಸಮಿತಿ ವತಿಯಿಂದ ಆಯೋಜಿಸಿದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರೊ. ಅಕ್ಕಿಯವರು ಕಥೆಗಾರ, ವಿಮರ್ಶಕ, ಸಂಪಾದಕ ಹಾಗೂ ಪ್ರಕಾಶಕರಾಗಿ ಬಹುಮುಖಿ ನೆಲೆಯಲ್ಲಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪಕರಾಗಿ, ಜನಮನಗೆದ್ದ ಅಪರೂಪದ ವಾಗ್ಮಿಗಳಾಗಿ ಮತ್ತು ಕರ್ನಾಟಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತುಗಳೊಂದಿಗೆ ಕಳೆದ ಐದಾರು ದಶಕಗಳಿಂದ ನಿಕಟ ಸಂಪರ್ಕವನ್ನು ಹೊಂದಿ, ನಾಡಿನ ಬಹುತೇಕ ಎಲ್ಲಾ ಪ್ರಸಿದ್ಧ ಸಾಹಿತಿಗಳನ್ನು ಗೋಕಾವಿ ನಾಡಿಗೆ ಕರೆತಂದ ಅಪರೂಪದ ಸಂಘಟನಾ ಚತುರರೂ ಆಗಿದ್ದಾರೆ ಎಂದು ಪ್ರತಿಪಾದಿಸಿದರು. ಪ್ರೊ. ಅಕ್ಕಿಯವರಿಗೆ ಬಸವ ಪ್ರತಿಮೆ ಹಾಗೂ ಮಹಾಮಾನವತಾವಾದಿ ಬಸವಣ್ಣ ಗ್ರಂಥ ನೀಡಿ ಆತ್ಮೀಯವಾಗಿ ಸತ್ಕರಿಸಿ ಮಾತನಾಡಿದ ಕೇಂದ್ರ ಬಸವ ಸಮಿತಿಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಶ್ರೀ ಮೋಹನ ಬಸನಗೌಡ ಪಾಟೀಲ ಅವರು, ಗೋಕಾಕ ನೆಲದ ಸಾಹಿತ್ಯ ರತ್ನಗಳಾದ ಎಸ್.ಸಿ. ನಂದಿಮಠ, ಬಸವರಾಜ ಕಟ್ಟಿಮನಿ, ಬೆಟಗೇರಿ ಕೃಷ್ಣಶರ್ಮ, ಕೃಷ್ಣಮೂರ್ತಿ ಪುರಾಣಿಕ, ಕೆ.ಜಿ. ಕುಂದಣಗಾರ ಹಾಗೂ ಚಂದ್ರಶೇಖರ ಕಂಬಾರರ ಸಾರಸ್ವತ ಪರಂಪರೆಯ ಸಮರ್ಥ ವಾರಸುದಾರರಾದ ಪ್ರೊ. ಅಕ್ಕಿಯವರು ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪ್ರೊ. ಅಕ್ಕಿಯವರು, ಸಾಹಿತ್ಯ ಸರಸ್ವತಿಯನ್ನು ತನುಮನದಿಂದ ನಿರಂತರವಾಗಿ ಆರಾಧಿಸಿದ ಪರಿಣಾಮವಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ದೊರೆತಿದೆ. ನನ್ನ ಸಾಹಿತ್ಯ ಸೇವಯನ್ನು ಗುರುತಿಸಿ, ಸಾಹಿತಿಯ ಜೀವಮಾನದ ಗೌರವದ, ಸಾರ್ಥಕ ಕ್ಷಣಗಳಿಗೆ ಕಾರಣವಾದ ಎಲ್ಲರಿಗೂ ಅನಂತ ಕೃತಜ್ಞತೆಗಳು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಯರಗಟ್ಟಿ ತಾಲೂಕು ಘಟಕದ ಅಧ್ಯಕ್ಷರಾದ ತಮ್ಮಣ್ಣ ಕಾಮಣ್ಣವರ ಉಪಸ್ಥಿತರಿದ್ದರು. ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಇಂಚಲ ಅವರು ಸ್ವಾಗತಿಸಿದರು. ಶಿಕ್ಷಕರಾದ ಬಾಳೇಶ ಫಕಿರಪ್ಪನವರ ನಿರೂಪಿಸಿ, ವಂದಿಸಿದರು.