ಬೆಳಗಾವಿ:ವಿವಾದದ ಸುಳಿಯಲ್ಲಿ ವೈಭವದ ಕಿತ್ತೂರು ಉತ್ಸವ
ವಿವಾದದ ಸುಳಿಯಲ್ಲಿ ವೈಭವದ ಕಿತ್ತೂರು ಉತ್ಸವ
ಬೆಳಗಾವಿ ಅ 24: ಕಿತ್ತೂರಿನಲ್ಲಿ ಮೂರುದಿನಗಳ ಕಾಲ ಕಿತ್ತೂರು ಉತ್ಸವ ನಡೆಯುತ್ತಿದೆ ಆದರೆ ಈ ಐತಿಹಾಸ ಉತ್ಸವಕ್ಕೆ ಪ್ರತಿ ವರ್ಷ ಒಂದಿಲೊಂದು ವಿವಾದಗಳು ಸುತ್ತಿಕೊಳ್ಳುತ್ತಿವೆ
ಆರಂಭದಲ್ಲಿ ಕಿತ್ತೂರು ವಿಜಯೋತ್ಸವ ಮತ್ತು ಚನ್ನಮ್ಮನ ಜಯಂತಿ ಒಂದೇ ದಿನ ಆಚರಿಸದಂತೆ ಕೂಗು ಕೇಳಿ ಬಂದಿತ್ತು. ಈಗ ಕಿತ್ತೂರು ಉತ್ಸವದ ಮೊದಲ ದಿನವೇ ಇಬ್ಬರು ಮಹಾನ್ ನಾಯಕರ ಮೂರ್ತಿಗಳು ಲೋಕಾರ್ಪಣೆಗೊಳ್ಳಬೇಕಿತ್ತು. ಆದ್ರೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಮೂರ್ತಿಗಳಿಗೆ ಉದ್ಘಾಟನೆ ಭಾಗ್ಯ ದೊರೆತಿಲ್ಲ.
ಕಿತ್ತೂರು ಪ್ರಾಧಿಕಾರದಲ್ಲಿ ಕಿತ್ತೂರು ಕೋಟೆಗೆ ಪ್ರವೇಶಿಸುವ ಮಹಾದ್ವಾರದ ಎರಡೂ ಬದಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಅಮಟೂರು ಬಾಳಪ್ಪ ಅವರ ಮೂರ್ತಿಯನ್ನ ಪ್ರತಿಷ್ಠಾಪಿಸಲಾಗಿದೆ. ಈ ಇಬ್ಬರು ನಾಯಕರ ಮೂರ್ತಿಗಳನ್ನ ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಸ್ಥಳೀಯ ಶಾಸಕ ಡಿ.ಬಿ. ಇನಾಮದಾರ್ ಲೋಕಾರ್ಪಣೆಗೊಳಿಸಬೇಕಿತ್ತು. ಆದ್ರೆ ಮಹಾದ್ವಾರದ ಎರಡೂ ಬದಿಯಲ್ಲಿ ಈ ಸಾತಂತ್ರ್ಯ ಹೋರಾಟಗಾರರ ಮೂರ್ತಿಯನ್ನ ಧ್ವಾರಪಾಲಕರಂತೆ ನಿಲ್ಲಿಸಲಾಗಿದೆ ಎಂದು ವಿರೋಧ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಅದೇ ಸ್ಥಳದಲ್ಲಿ ಮೂರ್ತಿಗಳನ್ನ ಲೋಕಾರ್ಪಣೆಗೊಳಿಸಬೇಕಾ ಅಥವಾ ಮೂರ್ತಿಗಳನ್ನ ಬೇರೆಡೆ ಸ್ಥಳಾಂತರಿಸಬೇಕಾ ಎಂಬ ಗೊಂದದಲ್ಲಿ ಜಿಲ್ಲಾಡಳಿತವಿದೆ. ಈ ಕುರಿತು ಮತ್ತೆ ಕಿತ್ತೂರು ಪ್ರಾಧಿಕಾರದ ಸಭೆ ಕರೆದು ನಿರ್ಣಯ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ