ಗೋಕಾಕ:ನೂತನ ಜಿಲ್ಲೆಗಾಗಿ ಆಗ್ರಹಿಸಿ ಮಂಗಳವಾರದಂದು ಧರಣಿ ಸತ್ಯಾಗ್ರಹ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು
ನೂತನ ಜಿಲ್ಲೆಗಾಗಿ ಆಗ್ರಹಿಸಿ ಮಂಗಳವಾರದಂದು ಧರಣಿ ಸತ್ಯಾಗ್ರಹ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು
ಗೋಕಾಕ ನ 10 : ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ಮಂಗಳವಾರ ಬೆಳಗ್ಗೆ 10 : 30 ಘಂಟೆಗೆ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಛೇರಿಯ ವರೆಗೆ ಮೆರವಣಿಗೆ ಮಾಡಿ ತಹಶೀಲ್ದಾರ ಮುಖಾಂತರ ಸರಕಾರಕ್ಕೆ ಮನವಿ ಅರ್ಪಿಸಲಾಗುವುದು ಎಂದು ಜಿಲ್ಲಾ ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ರವಿವಾರದಂದು ಸಾಯಂಕಾಲ ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು
ಕಳೆದ ಹಲವು ದಶಕಗಳಿಂದ ನಡೆಯುತ್ತಿರುವ ಹೋರಾಟಕ್ಕೆ ತೀವ್ರಗತಿ ನೀಡುವ ನಿಟ್ಟಿನಲ್ಲಿ ಮಂಗಳವಾರದಂದು ಸಾಂಕೇತಿಕವಾಗಿ ಧರಣಿ ನಡೆಸುವ ಮೂಲಕ ಚಾಲನೆ ನೀಡಲಾಗುವುದು. ನಗರದ ಎಲ್ಲಾ ಸಂಘಟನೆಗಳು, ವ್ಯಾಪಾರಸ್ಥರು, ಕನ್ನಡ ಪರ ಸಂಘಟನೆಗಳು, ರೈತಪರ ಸಂಘಟನೆಗಳು ಸೇರಿದಂತೆ ತಾಲೂಕಿನ ವಿವಿಧ ಸ್ಥರಗಳ ಸಂಘಟನೆಗಳ ಪದಾಧಿಕಾರಿಗಳು, ರಾಜಕೀಯ ಮುಖಂಡರುಗಳು ಈ ಹೋರಾಟದಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀಗಳು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಮಾತನಾಡಿ ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ಕಳೆದ 4 ದಶಕಗಳ ಹಿಂದಿನಿಂದ ಹೋರಾಟ ನಡೆಯುತ್ತಾ ಬಂದಿದ್ದು, ಆಯೋಗಗಳು ಸಹ ಗೋಕಾಕ ಜಿಲ್ಲೆಗೆ ಸಹಮತ ನೀಡಿವೆ. ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು . ಇತ್ತೀಚಿನ ದಿನಗಳಲ್ಲಿ ಜಿಲ್ಲಾ ಹೋರಾಟ ಸೌಮ್ಯವಾಗಿದೆ.ಜನಸಾಮಾನ್ಯರು ಸಂಶಯ ದೃಷ್ಟಿಯಿಂದ ಈ ಹೋರಾಟವನ್ನು ನೋಡುತ್ತಿದ್ದಾರೆ. ಹಾಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು.ಸಚಿವರು ಮತ್ತು ಶಾಸಕರು ಒಗ್ಗಟಿನಿಂದ ಇದಕ್ಕೆ ಬೆಂಬಲ ನೀಡಬೇಕು. ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ನಮ್ಮ ಧ್ವನಿ ಗೆ ಧ್ವನಿಯಾಗಬೇಕು. ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ಅವರು ಸಹ ಇದಕ್ಕೆ ಸಹಕಾರ ನೀಡಬೇಕು ಎಂದು ಅಶೋಕ್ ಪೂಜಾರಿ ವಿನಂತಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕೋಟಗಿ, ನ್ಯಾಯವಾದಿ ಸಿ.ಡಿ.ಹುಕ್ಕೇರಿ, ಬಸವರಾಜ ಖಾನಪ್ಪನವರ , ಸದಾಶಿವ ಗುದಗಗೋಳ, ದಸ್ತಗಿರಿ ಪೈಲವಾನ , ಅರ್ಜುನ್ ಪಂಗನ್ನವರ ಉಪಸ್ಥಿತರಿದ್ದರು.