ಗೋಕಾಕ:ರೈತರ ಅಭ್ಯುದಯವೇ ನನ್ನ ಪ್ರಮುಖ ಗುರಿ : ಶಾಸಕ ಬಾಲಚಂದ್ರ
ರೈತರ ಅಭ್ಯುದಯವೇ ನನ್ನ ಪ್ರಮುಖ ಗುರಿ : ಶಾಸಕ ಬಾಲಚಂದ್ರ
ಗೋಕಾಕ ಅ 26: ಡಿಸೆಂಬರ ತಿಂಗಳಲ್ಲಿ ಜಿಆರ್‍ಬಿಸಿ ಕುಲಗೋಡ ವಿತರಣಾ ಕಾಲುವೆಯ ಟೇಲ್‍ಎಂಡ್‍ವರೆಗೆ ರೈತರಿಗೆ ನೀರು ಕೊಡಿಸುತ್ತೇನೆ. ರೈತರ ಅಭ್ಯುದಯವೇ ನನ್ನ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಗುರುವಾರದಂದು ಕುಲಗೋಡ ವಿತರಣಾ ಕಾಲುವೆಯ ಕಿ.ಮೀ 0 ರಿಂದ 19 ರವರೆಗೆ ಖುದ್ಧಾಗಿ ಭೇಟಿ ನೀಡಿ ಕಾಲುವೆ ಪರಿಸ್ಥಿತಿ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ಕುಲಗೋಡ ವಿತರಣಾ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ಶಾಶ್ವತ ಪರಿಹಾರಕ್ಕಾಗಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಪೈಪಲೈನ್ ಮೂಲಕ ಕೊನೆಯ ಭಾಗಕ್ಕೆ ನೀರು ಪೂರೈಕೆ ಮಾಡಲು 25 ಕೋಟಿ ರೂ, ಅಕ್ವಾರ್ಡೆಟ್ ಮೂಲಕ ನೀರು ಕೊಡಲಿಕ್ಕೆ 12.50 ಕೋಟಿ ರೂ, ಕುಲಗೋಡ ವಿತರಣಾ ಕಾಲುವೆಯ 5 ರಿಂದ 10 ಕಿ.ಮೀ ವರೆಗೆ ನೇರವಾಗಿ ಪೈಪಲೈನ್ ಮೂಲಕ ನೀರು ಮುಟ್ಟಿಸುವುದಕ್ಕಾಗಿ 18 ಕೋಟಿ ರೂ ಹಾಗೂ 0 ದಿಂದ 10 ಕಿ.ಮೀ.ವರೆಗೆ ಕಾಲುವೆ ಮೂಲಕ ಪೈಪಲೈನ್ ಮೂಲಕ ಕೊನೆಯ ಭಾಗಕ್ಕೆ ನೀರು ಪೂರೈಸಲಿಕ್ಕೆ 30.10 ಕೋಟಿ ರೂ.ಗಳ ಒಟ್ಟು 4 ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ನೀಡಿದ್ದು, ಇದರಲ್ಲಿ ಯಾವುದಾದರೊಂದು ಪ್ರಸ್ತಾವನೆಗೆ ಸರ್ಕಾರ ಶೀಘ್ರ ಮಂಜೂರಾತಿ ನೀಡಲಿದೆ ಎಂದು ಅವರು ಹೇಳಿದರು.
ಘಟಪ್ರಭಾ ಬಲದಂಡೆ ಕಾಲುವೆಯಿಂದ ಬಿಡಲಾಗುತ್ತಿರುವ ನೀರಿನ ಅವಧಿ ಕಡಿಮೆ ಇರುವದರಿಂದ ಕೊನೆಯ ಭಾಗಕ್ಕೆ ನೀರು ತಲುಪುವುದಿಲ್ಲ. ಕನಿಷ್ಠ 20 ರಿಂದ 25 ದಿನಗಳ ಅವಧಿವರೆಗೆ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡಿದರೆ ಕೊನೆಯ ಭಾಗಕ್ಕೆ ನೀರು ತಲುಪುತ್ತದೆ. ಹೀಗಾಗಿ ಕೊನೆಯ ಭಾಗದ ಹಳ್ಳಿಗಳಾದ ಲಕ್ಷ್ಮೇಶ್ವರ, ಹೊನಕುಪ್ಪಿ, ಹೊಸಟ್ಟಿ, ಭೈರನಟ್ಟಿ, ಸುಣಧೋಳಿ, ಹಾಗೂ ಕುಲಗೋಡ ಗ್ರಾಮಗಳಿಗೆ ಇದುವರೆಗೂ ನೀರು ತಲುಪುತ್ತಿಲ್ಲ. ಪ್ರಸ್ತಾವನೆ ಅನುಮೋದನೆ ನೀಡಿದ ನಂತರ ಕೊನೆಯ ಭಾಗದ ಹಳ್ಳಿಗಳಿಗೆ ನೀರು ತಲುಪಿ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈಗಾಗಲೇ ಹಿಡಕಲ್ ಜಲಾಶಯದಲ್ಲಿ ಮಳೆರಾಯನ ಕೃಪೆಯಿಂದ 45 ಟಿಎಂಸಿ ನೀರು ಸಂಗ್ರಹವಾಗಿದೆ. ಎಲ್ಲೆಡೆ ಮಳೆ ಆಗಿರುವುದರಿಂದ ರೈತರು ಸಂತಸದಲ್ಲಿದ್ದಾರೆ. ಮುಂದಿನ ಡಿಸೆಂಬರ್ ತಿಂಗಳಲ್ಲಿ ಅಗತ್ಯ ಎನಿಸಿದರೆ ಹಿಡಕಲ್ ಜಲಾಶಯದಿಂದ ನೀರನ್ನು ಬಿಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಎಪ್ರೀಲ್-ಮೇ ತಿಂಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ತಪ್ಪಿಸಲು ಹಿಡಕಲ್ ಜಲಾಶಯದಲ್ಲಿ ನೀರನ್ನು ಕಾಯ್ದಿರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ, ಭೂನ್ಯಾಯ ಮಂಡಳಿ ಸದಸ್ಯ ಬಸನಗೌಡ ಪಾಟೀಲ, ಸುಣಧೋಳಿ ತಾಪಂ ಸದಸ್ಯ ರಮೇಶ ಗಡಗಿ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಅಶೋಕ ಉದ್ದಪ್ಪನವರ, ಎಪಿಎಂಸಿ ನಿರ್ದೇಶಕ ರೇವಣ್ಣಾ ಕನಕಿಕೋಡಿ, ಕೌಜಲಗಿ ಗ್ರಾಪಂ ಅಧ್ಯಕ್ಷ ರಾಯಪ್ಪ ಬಳೋಲದಾರ, ರವಿ ಪರುಶೆಟ್ಟಿ, ಬಾಳಪ್ಪ ಗೌಡರ, ಲಕ್ಷ್ಮಣ ಸಂಕ್ರಿ, ಬಸು ಗಂಗರಡ್ಡಿ, ಶರೀಫ ನದಾಫ, ಕೌಜಲಗಿ ಜಿಆರ್‍ಬಿಸಿ ಇಇ ಎಂ.ಎಸ್. ಗಿಡ್ಡೊಳ್ಳಿ, ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.