ಗೋಕಾಕ:ಭಾರತದ ಧಾರ್ಮಿಕ ಪದ್ಧತಿ ಇಡೀ ಜಗತ್ತಿಗೆ ಮಾದರಿಯಾಗಿದೆ : ಮಾಜಿ ಸಚಿವ ಬಾಲಚಂದ್ರ
ಭಾರತದ ಧಾರ್ಮಿಕ ಪದ್ಧತಿ ಇಡೀ ಜಗತ್ತಿಗೆ ಮಾದರಿಯಾಗಿದೆ : ಮಾಜಿ ಸಚಿವ ಬಾಲಚಂದ್ರ
ಗೋಕಾಕ ಅ 27 : ಭಾರತದ ಧಾರ್ಮಿಕ ಪದ್ಧತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಜಾತ್ಯಾತೀತ ತಳಹದಿಯ ಮೇಲೆ ನಿಂತಿರುವ ಭಾರತ ವಿವಿಧತೆಯಲ್ಲಿ ಏಕತೆ ಮೆರೆಯುವ ಮೂಲಕ ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಮನ್ನಿಕೇರಿ ಗ್ರಾಮದ ಹೊರವಲಯದಲ್ಲಿರುವ ಮಹಾಂತೇಶ್ವರ ಮಠದಲ್ಲಿ ಗುರುವಾರ ರಾತ್ರಿ ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕ್ಷೇತ್ರದಲ್ಲಿ ಬಾಕಿ ಉಳಿದಿರುವ ದುರಸ್ತಿಯಲ್ಲಿರುವ ರಸ್ತೆ ಕಾಮಗಾರಿಗಳನ್ನು ಡಿಸೆಂಬರ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಕಳೆದ 13 ವರ್ಷಗಳಿಂದ ಕ್ಷೇತ್ರದ ಅಭ್ಯುದಯಕ್ಕೆ ಸರ್ಕಾರದ ವಿವಿಧ ಯೋಜನೆಗಳಡಿ ಶ್ರಮಿಸಲಾಗುತ್ತಿದೆ. ಅರಭಾವಿ ಕ್ಷೇತ್ರವನ್ನು ಮಾದರಿ ಮಾಡುವ ಸಂಕಲ್ಪದಿಂದ ನೂರಾರು ಕೋಟಿ ರೂ.ಗಳ ಅನುದಾನವನ್ನು ಕ್ಷೇತ್ರದ ಸರ್ವತೋಮುಖ ಪ್ರಗತಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಒಂದು ಗ್ರಾಮ ಉನ್ನತಿ ಮತ್ತು ಪ್ರಗತಿಯಾಗಬೇಕಾದರೆ ಒಗ್ಗಟ್ಟಿನ ಮೂಲಮಂತ್ರ ಜಪಿಸಬೇಕು. ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಹೋದರೆ ಗ್ರಾಮವು ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಮನ್ನಿಕೇರಿ ಗ್ರಾಮಸ್ಥರ ಬೇಡಿಕೆಗಳಿಗೆ ಆಧ್ಯತಾನುಸಾರ ಈಡೇರಿಸುವ ಭರವಸೆ ನೀಡಿದ ಅವರು, ಅಗತ್ಯವಿರುವ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯ, ವಸತಿ ನಿಲಯವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮಹಾಂತಸಿದ್ಧೇಶ್ವರ ಸ್ವಾಮಿಗಳು ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಸ್ವಾಮೀಜಿಗಳ ಪಾತ್ರ ಮಹತ್ವದ್ದಾಗಿದೆ. ಸಮಾಜದ ಸ್ವಾಸ್ತ್ಯ ಕಾಪಾಡಲು ಸ್ವಾಮೀಜಿಗಳಿಂದ ಮಾತ್ರ ಸಾಧ್ಯವಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಂತಹ ಜನಾನುರಾಗಿ ಶಾಸಕರನ್ನು ಪಡೆದಿರುವುದು ಈ ನೆಲದ ಪುಣ್ಯ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಮುಂತಾದ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆಗೈದಿರುವ ಶಾಸಕರ ಕಾರ್ಯ ಶ್ಲಾಘನೀಯ. ಹೆತ್ತವರ ಸ್ಮರಣೆಗಾಗಿ ಟ್ರಸ್ಟ್ ಸ್ಥಾಪಿಸುವ ಮೂಲಕ ಬಡಜನರ ಸೇವೆಗೈಯುವ ಮಾತೃ ಹೃದಯದ ಕರುಣಾಮಯಿ ಬಾಲಚಂದ್ರ ಅವರು ಎಂದು ಪ್ರಶಂಸಿಸಿದರು.
ಕಳ್ಳಿಗುದ್ದಿ ಗ್ರಾಪಂ ಉಪಾಧ್ಯಕ್ಷ ಸತ್ತೆಪ್ಪ ಗಡಾದ, ಮಾಜಿ ಗ್ರಾಪಂ ಅಧ್ಯಕ್ಷರಾದ ಮುದಕಪ್ಪ ಗೋಡಿ, ಬಾಳಪ್ಪ ಗೌಡರ, ಜಿಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ, ರವಿ ಪರುಶೆಟ್ಟಿ, ಲಕ್ಷ್ಮಣ ಗಡಾದ, ಪುಂಡಲೀಕ ದಳವಾಯಿ, ಮಹಾಂತೇಶ ಮೆಟ್ಟಿನ, ಸುಭಾಸ ಪೂಜೇರಿ, ಬಸು ನಾಯ್ಕರ, ಗುರುಪಾದ ರಾಮಣ್ಣಿ, ಪತ್ರೆಪ್ಪ ತೋಟಗಿ, ಮಹಾಂತಯ್ಯಾ ಹಿರೇಮಠ, ಬಾಬು ವನಶಣವಿ, ಅಶೋಕ ಮಲಬನ್ನವರ, ಮುಂತಾದವರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮಹಾಂತ ಸಿದ್ಧೇಶ್ವರ ಸ್ವಾಮಿಗಳು ಇದೇ ಸಂದರ್ಭದಲ್ಲಿ ಸತ್ಕರಿಸಿದರು.
ಬಾಲಚಂದ್ರ ಜಾರಕಿಹೊಳಿ, ಶಾಸಕ :
ಈ ಭಾಗದ ರೈತಾಪಿ ವರ್ಗದ ಬಹುದಿನಗಳ ಬೇಡಿಕೆಯಾಗಿರುವ ಕಲ್ಮಡ್ಡಿ ಯಾತ ನೀರಾವರಿ ಯೋಜನೆಯ ಪ್ರಸ್ತಾವನೆಯು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಸುಮಾರು 125.40 ಕೋಟಿ ರೂ.ಗಳ ವೆಚ್ಚದಲ್ಲಿ ಕಲ್ಮಡ್ಡಿ ಯಾತ ನೀರಾವರಿ ಅನುಷ್ಠಾನಗೊಳ್ಳಲಿದ್ದು, ಇದರಿಂದ 2250 ಹೆಕ್ಟರ್ ಪ್ರದೇಶ ನೀರಾವರಿ ಸೌಲಭ್ಯ ಹೊಂದಲಿದೆ. ಕೌಜಲಗಿ, ಗೋಸಬಾಳ, ಬಿಲಕುಂದಿ, ಬಗರನಾಳ, ಮನ್ನಿಕೇರಿ, ತಳಕಟ್ನಾಳ ಗ್ರಾಮಗಳ ರೈತರಿಗೆ ಇದು ವರದಾನವಾಗಲಿದೆ. ಶೀಘ್ರದಲ್ಲಿಯೇ ಹಣಕಾಸು ಇಲಾಖೆಯಿಂದ ಅನುಮೋದನೆಗೊಳ್ಳಲಿದೆ.