ಗೋಕಾಕ:ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ವರಕವಿ ದ.ರಾ.ಬೇಂದ್ರೆ ಅವರಿಗೆ ಸಲ್ಲುತ್ತದೆ : ಡಾ.ಸಿ.ಕೆ.ನಾವಲಗಿ
ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ವರಕವಿ ದ.ರಾ.ಬೇಂದ್ರೆ ಅವರಿಗೆ ಸಲ್ಲುತ್ತದೆ : ಡಾ.ಸಿ.ಕೆ.ನಾವಲಗಿ
ಗೋಕಾಕ ಫೆ 2 : ಕನ್ನಡ ಸಾರಸತ್ವ ಲೋಕದಲ್ಲಿ ಧ್ರುವ ನಕ್ಷತ್ರದಂತೆ ಬೆಳಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ವರಕವಿ ದ.ರಾ.ಬೇಂದ್ರೆ ಅವರಿಗೆ ಸಲ್ಲುತ್ತದೆ ಎಂದು ವಚನ-ಜಾನಪದ ಚಿಂತಕ ಡಾ.ಸಿ.ಕೆ.ನಾವಲಗಿ ಹೇಳಿದರು.
ಶನಿವಾರದಂದು ನಗರದ ಗೋಕಾಕ ಶಿಕ್ಷಣ ಸಂಸ್ಥೆಯ ಜಿ.ಇ.ಎಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಗೋಕಾಕ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಕನ್ನಡ ಸಂಘದ ಹಮ್ಮಿಕೊಂಡ ವರಕವಿ ಡಾ.ದ.ರಾ.ಬೇಂದ್ರೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದ.ರಾ.ಬೇಂದ್ರೆಯವರು ಕಷ್ಟಗಳ ಕುಲುಮೆಯಲ್ಲಿ ಅರಳಿನಿಂತ ಅಪೂರ್ವ ಪ್ರತಿಭೆ. ಪ್ರಕೃತಿ, ಆಧ್ಯಾತ್ಮ, ಸ್ತ್ರೀಸಂಕಟಗಳು ಸೇರಿ ಹಲವು ವಿಷಯಗಳ ಕುರಿತು ಕಾವ್ಯರಚನೆ ಮಾಡಿ ಗಮನ ಸೆಳೆದಿದ್ದಾರೆ. ಅವರಲ್ಲಿನ ಕಾವ್ಯ ಪ್ರತಿಭೆಗೆ ಅವರೇ ಸಾಟಿ ಎಂದು ವಿವರಿಸಿದರು. ಕನ್ನಡ ಸಾರಸ್ವತ ಲೋಕದ ಮಿನುಗು ತಾರೆಯಾಗಿದ್ದ ಅವರು ಹುಟ್ಟಿಬೆಳೆದ ಧಾರವಾಡದ ಸಾಧನಕೇರಿಯ ಪರಿಸರ ಬೇಂದ್ರೆಯವರ ಸಾಧನೆಯಿಂದ ಸಾಧನೆಕೇರಿಯಾಯಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಯ ಸಾಹಿತ್ಯ ಜಾನಪದ ಸೊಗಡಿನ ಮೂಲಕ ಜನಸಾಮಾನ್ಯರನ್ನು ಮುಟ್ಟುವಂತದ್ದಾಗಿದೆ. ಬೇಂದ್ರೆಯವರು ಕನ್ನಡ ಸಾರಸ್ವತ ಲೋಕದ ಮಿನುಗುತಾರೆ ಎಂದು ನಾವಲಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ವ್ಹಿ.ವ್ಹಿ ಮೋದಿ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರೋ ವಾಯ್.ಬಿ.ಕೊಪ್ಪದ, ಪ್ರೋ ಸುರೇಶ್ ಮುದ್ದಾರ, ಯಲಪ್ಪ ಕಟ್ಟಿಮನಿ, ಶ್ರೀದೇವಿ ಗುಡ್ಲಿ,ಸಿದ್ದಾರೂಢ ಯಳ್ಳೂರ ಉಪಸ್ಥಿತರಿದ್ದರು.