ಘಟಪ್ರಭಾ:ಆಸ್ಪತ್ರೆ ಬೆಳೆಯಲು ಬಿ.ಆರ್.ಪಾಟೀಲರ ಕೊಡುಗೆ ಅಪಾರವಾಗಿದೆ : ಡಾ| ಎನ್.ಎ.ಮಗದುಮ
ಆಸ್ಪತ್ರೆ ಬೆಳೆಯಲು ಬಿ.ಆರ್.ಪಾಟೀಲರ ಕೊಡುಗೆ ಅಪಾರವಾಗಿದೆ : ಡಾ| ಎನ್.ಎ.ಮಗದುಮ
ಘಟಪ್ರಭಾ ಅ 28: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಇಲ್ಲಿಯ ಜೆಜಿಕೋ ಸಹಕಾರಿ ಆಸ್ಪತ್ರೆ ಸೊಸಾಯಿಟಿಯು ಉತ್ತುಂಗಕ್ಕೆ ಬೆಳೆಯಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯ ರಾಜ್ಯ ಉಪಾಧ್ಯಕ್ಷರು ಹಾಗೂ ಶ್ರೀ ಜೆಜಿಕೋ ಆಸ್ಪತ್ರೆ ಸೊಸಾಯಿಟಿ ಚೇರಮನ್ ಬಿ.ಆರ್.ಪಾಟೀಲರ(ನಾಗನೂರ) ಕೊಡುಗೆ ಅಪಾರವಾಗಿದೆ ಎಂದು ನವದೆಹಲಿಯ ಸಿಸಿಐಎಂನ ನಿರ್ದೇಶಕ ಹಾಗೂ ಶ್ರೀ ಗೋಮಟೇಶ ಶಿಕ್ಷಣ ಸಂಸ್ಥೆ ಅಂಕಲಿಯ ಅಧ್ಯಕ್ಷರಾದ ಡಾ| ಎನ್.ಎ.ಮಗದುಮ ಹೇಳಿದರು.
ಅವರು ಶನಿವಾರ ಇಲ್ಲಿಯ ಜೆ.ಜಿ.ಸಹಕಾರಿ ಆಸ್ಪತ್ರೆ ಸೊಸಾಯಿಟಿಯ ಶ್ರೀ ಜೆ.ಜಿ.ಸಿ.ಎಚ್.ಎಸ್. ಆಯುರ್ವೇದಿಕ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಸಂಸ್ಥೆಯಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ಕಳೆದ 50 ವರ್ಷಗಳ ಕಾಲ ಸುದೀರ್ಘವಾಗಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಬಿ.ಆರ್.ಪಾಟೀಲರು ತಮ್ಮ ಆಡಳಿತ ಮಂಡಳಿ ನಿರ್ದೇಶಕರೊಂದಿಗೆ ಹಾಗೂ ಸಿಬ್ಬಂದಿಯೊಂದಿಗೆ ಹೊಂದಿದ ಅಪಾರ ಪ್ರೀತಿ,ವಿಶ್ವಾಸ ಹಾಗೂ ಸತತ ಪರಿಶ್ರಮದಿಂದ ಸಂಸ್ಥೆಯ ಪ್ರಗತಿಗೆ ಶ್ರಮಿಸಿದ ವ್ಯಕ್ತಿಯಾಗಿದ್ದಾರೆ. ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಕೀರ್ತಿ ಈ ಸಂಸ್ಥೆಗೆ ಮತ್ತು ಚೇರಮನ್‍ರಿಗೆ ಸಲ್ಲುತ್ತಿದೆ. ಸಂಸ್ಥೆ ಚೇರಮನ್‍ರ ನಾಯಕತ್ವದ ಗುಣ ಹಾಗೂ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರಲ್ಲದೇ ಭಾರತೀಯ ಆಯುರ್ವೇದ ಚಿಕಿತ್ಸಾ ಪದ್ದತಿಗೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಬೇಡಿಕೆ ಇದೆ. ಪ್ರತಿಯೊಂದು ರೋಗ ನಿವಾರಕ ಶಕ್ತಿ ಆಯುರ್ವೇದಲ್ಲಿದ್ದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಅವಶ್ಯಕತೆ ಇದೆ. ಸಂಸ್ಥೆಯು ಒಳ್ಳೇಯ ಆರ್ಯುವೇದಿಕ ಕಾಲೇಜಿಗೆ ಹೆಸರುವಾಸಿಯಾಗಿದೆ. ರಾಜ್ಯದಲ್ಲಿ ಹಲವಾರು ಆಯುರ್ವೇದಿಕ ಕಾಲೇಜಗಳು ಬೆಳೆಯಬೇಕೆಂಬುದು ನನ್ನ ಮಹಾದಾಸೆಯಾಗಿದೆ. ಈ ಸಂಸ್ಥೆಗೆ ನಾನು ಸಹಾಯ ಸಹಕಾರ ನೀಡುತ್ತೇನೆ ಎಂದರು.
ಶ್ರೀ ಜೆಜಿಕೋ ಆಸ್ಪತ್ರೆ ಸೊಸಾಯಿಟಿಯ ಚೇರಮನ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯ ರಾಜ್ಯ ಉಪಾಧ್ಯಕ್ಷರಾದ ಬಿ.ಆರ್.ಪಾಟೀಲ(ನಾಗನೂರ) ಸಂಸ್ಥೆ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ನಾನು ಎಷ್ಟು ವರ್ಷ ಸೇವೆ ಸಲ್ಲಿಸಿದ್ದೇನೆ ಅನ್ನುವುದಕಿಂತ ಸಂಸ್ಥೆಗೆ ನಾನು ಏನು ಕೊಡುಗೆ ನೀಡಿದ್ದೇನೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ನಾನು ಸಂಸ್ಥೆಯ ಅಭಿವೃದ್ದಿಗೆ ಸದಾ ಕಾಲ ಶ್ರಮಿಸುತ್ತೇನೆ. ಸಂಸ್ಥೆಗೆ ಯಾವಾಗಲೂ ಚಿರಋಣಿಯಾಗಿರುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಸಂಸ್ಥೆಯ ಚೇರಮನ್ ಬಿ.ಆರ್.ಪಾಟೀಲ(ನಾಗನೂರ) ಹಾಗೂ ನವದೆಹಲಿಯ ಸಿಸಿಐಎಂನ ನಿರ್ದೇಶಕರಾಗಿ ಆಯ್ಕೆಗೊಂಡ ಶ್ರೀ ಗೋಮಟೇಶ ಶಿಕ್ಷಣ ಸಂಸ್ಥೆ ಅಂಕಲಿಯ ಅಧ್ಯಕ್ಷರಾದ ಡಾ| ಎನ್.ಎ.ಮಗದುಮ ಅವರನ್ನು ಶ್ರೀ ಜೆಜಿಕೋ ಆಸ್ಪತ್ರೆ ಸೊಸಾಯಿಟಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ಎ.ಎನ್. ಕರಲಿಂಗಣ್ಣವರ ವಹಿಸಿದ್ದರು.
ವೇದಿಕೆ ಮೇಲೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ| ಬಿ.ಕೆ.ಎಚ್.ಪಾಟೀಲ, ನಿರ್ದೇಶಕರುಗಳಾದ ಎ.ಎಸ್.ಬಡಕುಂದ್ರಿ, ಐ.ಐ.ನೇರ್ಲಿ, ಎಸ್.ಎಸ್.ಪಾಟೀಲ, ಪಿ.ಎಂ.ಬಂಡಿ, ಬಿ.ಎಚ್.ಇನಾಮದಾರ, ವೈದ್ಯಕೀಯ ನಿರ್ದೇಶಕ ಡಾ| ಸಿ.ಎಸ್.ಬಣಕಾರ, ಎಎಂಸಿ ಕಾಲೇಜಿನ ಪ್ರಾಚಾರ್ಯ ಡಾ| ಜೆ.ಕೆ.ಶರ್ಮಾ ಇದ್ದರು.
ಕಾರ್ಯಕ್ರಮದಲ್ಲಿ ಆಯುರ್ವದಿಕ ಮೆಡಿಕಲ್ ಕಾಲೇಜಿನ ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಸಂಸ್ಥೆಯ ನಿರ್ದೇಶಕ ಸಿ.ಎ.ಕಾಡದವರ ಸ್ವಾಗತಿಸಿದರು. ಮ್ಯಾನೇಜರ್ ಎಲ್.ಎಸ್.ಹಿಡಕಲ್ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕ ಆರ್.ಟಿ.ಶಿರಾಳಕರ ವಂದಿಸಿದರು