RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಕುಲಗೋಡ ಕಾಲುವೆ ಭಾಗದ ರೈತರಿಗೆ ನೀರು ತಲುಪಿಸಲು ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ : ಮಾಜಿ ಸಚಿವ ಬಾಲಚಂದ್ರ

ಗೋಕಾಕ:ಕುಲಗೋಡ ಕಾಲುವೆ ಭಾಗದ ರೈತರಿಗೆ ನೀರು ತಲುಪಿಸಲು ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ : ಮಾಜಿ ಸಚಿವ ಬಾಲಚಂದ್ರ 

ಕುಲಗೋಡ ಕಾಲುವೆ ಭಾಗದ ರೈತರಿಗೆ ನೀರು ತಲುಪಿಸಲು ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ : ಮಾಜಿ ಸಚಿವ ಬಾಲಚಂದ್ರ

ಗೋಕಾಕ ಅ 30: ಕುಲಗೋಡ ವಿತರಣಾ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸುವ ಉದ್ಧೇಶದಿಂದ ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲ ತಾಂತ್ರಿಕ ಕಾರಣಗಳಿಂದಾಗಿ ಯೋಜನಾ ಮಂಜೂರಾತಿಗೆ ವಿಳಂಬವಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಈ ಬಗ್ಗೆ ಸೋಮವಾರದಂದು ಪತ್ರಿಕಾ ಹೇಳಿಕೆ ನೀಡಿರುವ ಅವರು, ನೀರಾವರಿ ನಿಗಮಕ್ಕೆ ಒಟ್ಟು 4 ಪ್ರಸ್ತಾವನೆಗಳನ್ನು ಸಲ್ಲಿಸಲಾಗಿತ್ತು ಎಂದು ಹೇಳಿದ್ದಾರೆ.
ಘಟಪ್ರಭಾ ಬಲದಂಡೆ ಕಾಲುವೆಯ ಕುಲಗೋಡ ವಿತರಣಾ ಕಾಲುವೆಯ ಹಳ್ಳಿಗಳಾದ ಲಕ್ಷ್ಮೇಶ್ವರ, ಹೊನಕುಪ್ಪಿ, ಹೊಸಟ್ಟಿ, ಭೈರನಟ್ಟಿ, ಸುಣಧೋಳಿ ಹಾಗೂ ಕುಲಗೋಡ ಭಾಗದ ರೈತರಿಗೆ ನೀರು ಮುಟ್ಟಿಸುವ ಉದ್ಧೇಶದಿಂದ ನಿಗಮದ ಅಧಿಕಾರಿಗಳ ಸಭೆಯನ್ನು ನಡೆಸಲಾಗಿದೆ. ರೈತರ ಹಿತಕ್ಕನುಗುಣವಾಗಿ ಕೂಡಲೇ ಸ್ಪಂದನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಭೆಯಲ್ಲಿ ಪ್ರಸ್ತಾಪವಾದಂತೆ ಕುಲಗೋಡ ಭಾಗದ ರೈತರಿಗೆ ನೀರು ಕೊಡಿಸುವುದು ನನ್ನ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ 4 ಪ್ರಸ್ತಾವನೆಗಳಲ್ಲಿ ಯಾವುದಾದರೂ ಒಂದು ಪ್ರಸ್ತಾವನೆಗೆ ನಿಗಮ ಮಂಜೂರಾತಿ ನೀಡಲಿದೆ. ಈ ಪ್ರಸ್ತಾವನೆಯು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹಂತದಲ್ಲಿದೆ ಹೊರತು ಸಚಿವ ಸಂಪುಟ ಸಭೆಯಲ್ಲಿ ಇಲ್ಲ. ಕೆಲವರಿಗೆ ಇದರ ಬಗ್ಗೆ ತಪ್ಪು ಮಾಹಿತಿ ಹೋಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮುಂದಿನ ಇಆರ್‍ಸಿ ಸಭೆಯಲ್ಲಿ ಪ್ರಸ್ತಾವನೆಗಳ ಬಗ್ಗೆ ಚರ್ಚೆ ನಡೆಯಲಿದ್ದು, ಅದರಲ್ಲಿ ಸಭೆಯು ಒಪ್ಪಿಗೆ ನೀಡಲಿದೆ. ಇದಕ್ಕಾಗಿ ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಈ ಪ್ರಸ್ತಾವನೆಯಲ್ಲಿರುವ ಕೆಲ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಲಾಗಿದೆ. ಒಟ್ಟಿನಲ್ಲಿ ಕುಲಗೋಡ ಟೇಲ್‍ಎಂಡ್ ಭಾಗದ ರೈತರ ಜಮೀನುಗಳಿಗೆ ನೀರು ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಈ ಬಗ್ಗೆ ನೀರಾವರಿ ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ. ರೈತರು ಕೂಡ ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

Related posts: