ಗೋಕಾಕ:ಮಾನವ ಜೀವನದ ಸಫಲತೆಗೆ ವಚನಗಳೇ ಮಹಾಮಂತ್ರಗಳು : ಮಾತೋಶ್ರೀ ಅನ್ನಪೂರ್ಣಾ ತಾಯಿ

ಮಾನವ ಜೀವನದ ಸಫಲತೆಗೆ ವಚನಗಳೇ ಮಹಾಮಂತ್ರಗಳು :
ಮಾತೋಶ್ರೀ ಅನ್ನಪೂರ್ಣಾ ತಾಯಿ
ಗೋಕಾಕ ಮಾ 15 : ಮಾನವ ಜೀವನದ ಸಫಲತೆಗೆ ವಚನಗಳೇ ಮಹಾಮಂತ್ರಗಳು. ವಚನಗಳನ್ನು ಕೇವಲ ಕಂಠ ಪಾಠ ಮಾಡಿದರೆ ಸಾಲದು ಅವುಗಳ ನೈಜ ಸತ್ಯವನ್ನು ಅರಿಯಬೇಕು ಎಂದು ಶಿವಾನಂದ ಮಠ ಹೊಸುರದ ಮಾತೋಶ್ರೀ ಅನ್ನಪೂರ್ಣಾ ತಾಯಿ ಹೇಳಿದರು.
ಶುಕ್ರವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 184ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಸವಾದಿ ಶರಣರು ಬಿತ್ತಿದ ಬೀಜ ಇಂದು ಹುಲುಸಾಗಿ ಬೆಳೆದು ಜಗತ್ತಿಗೆ ಫಲ ನೀಡುತ್ತಿದೆ. ಶರಣರು ಹೊತ್ತಿಸಿದ ದೀಪ ಜಗತ್ತಿಗೆ ಬೆಳಕು ನೀಡುತ್ತಿದೆ. ಬಸವ ಎಂಬುದೇ ಒಂದು ಮಂತ್ರವಾಗಿದೆ. ಜಗದ ಕಲ್ಯಾಣದ ತಂತ್ರವಾಗಿದೆ. ಬಸವಣ್ಣನವರ ವಚನಗಳೇ ನಮ್ಮ ಸಂವಿಧಾನದ ಜೀವಾಳ. ಬಸವಣ್ಣನವರು ಈ ನೆಲದ ಪ್ರಜಾಪ್ರಭುತ್ವ ಮಾನವ ಹಕ್ಕುಗಳ ಮೂಲ ಪುರುಷರು ಎಂದ ಅವರು ಬಸವಣ್ಣನವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ನಡೆಸಿದರೆ ಮಾನವ ಜೀವನಕ್ಕೆ ಒಂದು ಅರ್ಥಬರುತ್ತದೆ ಆ ದಿಸೆಯಲ್ಲಿ ನಾವು ಬಾಳಿ ಬದುಕಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಶೂನ್ಯ ಸಂಪಾದನಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಲೋಕಾಪುರದ ಶ್ರೀ ಮಹಾಂತ್ ದೇವರು ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸನಗೌಡ ಪಾಟೀಲ ವಹಿಸಿದ್ದರು.
ವೇದಿಕೆಯಲ್ಲಿ ಡಾ.ಸಿ.ಕೆ.ನಾವಲಗಿ, ಶ್ರೀಮತಿ ಭಾರತಿ ಮರೆನ್ನವರ
ಶ್ರೀಮತಿ ಪ್ರೀತಿ ಕರುಬೇಟ, ಶ್ರೀಮತಿ ಶೈಲಾ ಬಿದರಿ ಇದ್ದರು. ಕಾರ್ಯಕ್ರಮವನ್ನು ಎಸ್.ಕೆ ಮಠದ ನಿರೂಪಿಸಿದರು. ಆರ್.ಎಲ್.ಮಿರ್ಜಿ ವಂದಿಸಿದರು.