ಗೋಕಾಕ:ಟೇಲ್‍ಎಂಡ್ ರೈತರಿಗೆ ನೀರು ಹರಿಸಲು ದಿ. 3 ರಂದು ಇಆರ್‍ಸಿ ಸಭೆಯನ್ನು ಕರೆಯಲಾಗಿದೆ : ಮಲ್ಲಿಕಾರ್ಜುನ ಗುಂಗೆ
ಟೇಲ್‍ಎಂಡ್ ರೈತರಿಗೆ ನೀರು ಹರಿಸಲು ದಿ. 3 ರಂದು ಇಆರ್‍ಸಿ ಸಭೆಯನ್ನು ಕರೆಯಲಾಗಿದೆ : ಮಲ್ಲಿಕಾರ್ಜುನ ಗುಂಗೆ
ಗೋಕಾಕ ನ 2: ಜಿಆರ್‍ಬಿಸಿ ಕುಲಗೋಡ ವಿತರಣಾ ಕಾಲುವೆಯ ಟೇಲ್‍ಎಂಡ್ ರೈತರಿಗೆ ನೀರು ಹರಿಸಲು ಉದ್ಧೇಶದಿಂದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಮನವಿ ಹಿನ್ನೆಲೆಯಲ್ಲಿ ಶುಕ್ರವಾರ ದಿ. 3 ರಂದು ಇಆರ್‍ಸಿ ಸಭೆಯನ್ನು ಕರೆಯಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ನಿಯೋಗಕ್ಕೆ ತಿಳಿಸಿದ್ದಾರೆ.
ಎಚ್.ಡಿ. ಮುಲ್ಲಾ ಹಾಗೂ ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ ಅವರನ್ನೊಳಗೊಂಡ ನಿಯೋಗವು ಬೆಂಗಳೂರಿನಲ್ಲಿಂದು ಸಂಜೆ ನೀರಾವರಿ ನಿಗಮದ ಎಂಡಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಗುಂಗೆ ಅವರು ಈ ವಿಷಯ ತಿಳಿಸಿದರು.
ಕುಲಗೋಡ ವಿತರಣಾ ಕಾಲುವೆಯ ಟೇಲ್‍ಎಂಡ್ ಗ್ರಾಮಗಳಾದ ಕುಲಗೋಡ, ಲಕ್ಷ್ಮೇಶ್ವರ, ಹೊನಕುಪ್ಪಿ, ಭೈರನಟ್ಟಿ, ಸುಣಧೋಳಿ, ಹೊಸಟ್ಟಿ ಗ್ರಾಮಗಳ ರೈತರಿಗೆ ನೀರು ಹರಿಸಲೇಬೇಕು ಎಂಬ ಸದುದ್ಧೇಶದಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೈತರ ಹಿತಕ್ಕನುಗುಣವಾಗಿ ಇಆರ್‍ಸಿ ಸಭೆಯಲ್ಲಿ ವಿತರಣಾ ಕಾಲುವೆಯ ಪ್ರಸ್ತಾವನೆಗೆ ಅನುಮೋದನೆ ನೀಡುವಂತೆ ಕೋರಿದ್ದಾರೆ. ಹೀಗಾಗಿ ನಾಳೆ ಶುಕ್ರವಾರದಂದು ನಡೆಯಲಿರುವ ಇಆರ್‍ಸಿ ಸಭೆಯಲ್ಲಿ ಚರ್ಚಿಸಿ ಪ್ರಸ್ತಾವನೆಗೆ ಅನುಮೋದನೆ ನೀಡಲಾಗುವುದು ಎಂದು ಎಂಡಿ ಮಲ್ಲಿಕಾರ್ಜುನ ಗುಂಗೆ ಅವರು ತಿಳಿಸಿದ್ದಾರೆಂದು ಮುಲ್ಲಾ ಹಾಗೂ ಕೊಪ್ಪದ ಜಂಟಿಯಾಗಿ ತಿಳಿಸಿದ್ದಾರೆ.
ಈಗಾಗಲೇ ನೀರಾವರಿ ನಿಗಮಕ್ಕೆ ಕುಲಗೋಡ ಟೇಲ್‍ಎಂಡ್ ರೈತರಿಗೆ ನೀರು ತಲುಪಿಸುವ ಉದ್ಧೇಶದಿಂದ ಒಟ್ಟು 4 ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಯಾವುದಾದರೊಂದು ಪ್ರಸ್ತಾವನೆಗೆ ಅನುಮೋದನೆ ನೀಡಲಾಗುವುದು. ಅಲ್ಲದೇ ಈ ಸಂಬಂಧ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಮಾತನಾಡಿರುವುದಾಗಿ ಗುಂಗೆ ಹೇಳಿದ್ದಾರೆ.
ಸುಣಧೋಳಿ ತಾಪಂ ಸದಸ್ಯ ರಮೇಶ ಗಡಗಿ, ಸುರೇಶ ಸಣ್ಣಕ್ಕಿ, ಮುಂತಾದವರು ಎಂಡಿಯವರ ಭೇಟಿಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.