ಗೋಕಾಕ:ಎಮ್‍ಇಎಸ್ ಗೆ ಕರಾಳ ದಿನಾಚರಣೆ ಆಚರಿಸಲು ಅನುಮತಿ ನೀಡಿದ ಜಿಲ್ಲಾಡಳಿತ ಕ್ರಮವು ಸರಿಯಲ್ಲ: ಶ್ರೀ ಶಿವಾನಂದ ಮಹಾಸ್ವಾಮಿಗಳು
ಎಮ್‍ಇಎಸ್ ಗೆ ಕರಾಳ ದಿನಾಚರಣೆ ಆಚರಿಸಲು ಅನುಮತಿ ನೀಡಿದ ಜಿಲ್ಲಾಡಳಿತ ಕ್ರಮವು ಸರಿಯಲ್ಲ: ಶ್ರೀ ಶಿವಾನಂದ ಮಹಾಸ್ವಾಮಿಗಳು
ಗೋಕಾಕ ನ 4 : ಕನ್ನಡ ರಾಜ್ಯೋತ್ಸವದಂದು ಎಮ್‍ಇಎಸ್ ಗೆ ಕರಾಳ ದಿನಾಚರಣೆ ಆಚರಿಸಲು ಅನುಮತಿ ನೀಡಿದ ಜಿಲ್ಲಾಡಳಿತ ಕ್ರಮವು ಸರಿಯಲ್ಲ ಎಂದು ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಬಿಲಕುಂದಿ ಗ್ರಾಮದಲ್ಲಿ ಗುರುವಾರದಂದು ರಾತ್ರಿ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ ಶೆಟ್ಟಿ ಬಣ ) ವು ಕನ್ನಡ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ಹಾಸ್ಯ ಸಂಜೆ ಹಾಗೂ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಕನ್ನಡ ರಾಜ್ಯೋತ್ಸವ ದಿನದಂದು ಎಮ್‍ಇಎಸ್ ಕರಾಳ ದಿನಚರಣೆ ಆಚರಿಸಲು ಅನುಮತಿ ನೀಡಬಾರದು. ಮುಂದಿನ ವರ್ಷ ನೀಡಿದ್ದಾದಲ್ಲಿ ಬೆಳಗಾವಿ ಜಿಲ್ಲೆಯ ಸರ್ವ ಮಠಾಧೀಶರು ಹಾಗೂ ಕರವೇ ಕಾರ್ಯಕರ್ತರು ಸೇರಿಕೊಂಡು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಗ್ರಹ ನಡೆಸುವುದಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಭಾಗೋಜಿಕೊಪ್ಪದ ಶ್ರೀ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಗೋಸಬಾಳ ಗ್ರಾ.ಪಂ. ಅಧ್ಯಕ್ಷ ಶಿವಲಿಂಗ ಬಳಿಗಾರ ವಹಿಸಿದ್ದರು.
ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ ಶೆಟ್ಟಿ ಬಣ) ವತಿಯಿಂದ ನಾಡು-ನುಡಿ, ಸಮಾಜಮುಖಿ ಸೇವೆಗಾಗಿ ಕೊಡಮಾಡಲಾಗುವ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ”ಯನ್ನು ಶಿಕ್ಷಣ ಕ್ಷೇತ್ರ ಹಾಗೂ ಅನ್ನ ದಾಸೋಹಿ ಸುಣಧೋಳಿಯ ಶ್ರೀ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳಿಗೆ ನೀಡಿ ಗೌರವಿಸಲಾಯಿತು.
ಅಥಣಿಯ ವಿಜಯ ಹುದ್ದಾರ ನೇತೃತ್ವದ ತಂಡದ ಸದಸ್ಯರಿಂದ ಹಾಸ್ಯ ಸಂಜೆ ಹಾಗೂ ರಸಮಂಜರಿ ಕಾರ್ಯಕ್ರಮ ಜರುಗಿತು.
ಕರವೇ ತಾಲೂಕಾಧ್ಯಕ್ಷ ಕಿರಣ ಡಮಾಮಗರ, ಜಿ.ಪಂ. ಮಾಜಿ ಸದಸ್ಯ ವಿಠ್ಠಲ ಸವದತ್ತಿ, ಕೃಷ್ಣಪ್ಪ ಕಪರಟ್ಟಿ, ಮಹಾದೇವ ಹೊಸತೋಟ, ರಣಜಿತ್‍ಸಿಂಗ್ ರಾಣಾವತ್, ಶಿವಯ್ಯಾ ಹಿರೇಮಠ, ರಮೇಶ ಹೊಸತೋಟ, ಗೋವಿಂದ ಜೋತೆನ್ನವರ, ಹನಮಂತ ಬಡಿಗೇರ, ಈರಪ್ಪಾ ಹೊಸಟ್ಟಿ, ವಾಯ್.ಬಿ.ಕಳ್ಳಿಗುದ್ದಿ, ಕಲ್ಲಯ್ಯ ಮಠಪತಿ, ಮಲ್ಲಪ್ಪಾ ಪಾಶ್ಚಾಪೂರ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.