ಗೋಕಾಕ:ನಾಳೆಯಿಂದ ಕೌಜಲಗಿಯಲ್ಲಿ ವಿಠ್ಠಲ ಬೀರದೇವರ ಜಾತ್ರೆ
ನಾಳೆಯಿಂದ ಕೌಜಲಗಿಯಲ್ಲಿ ವಿಠ್ಠಲ ಬೀರದೇವರ ಜಾತ್ರೆ
ಗೋಕಾಕ ನ 5: ಕೌಜಲಗಿ ಪಟ್ಟಣದಲ್ಲಿ ನ-6 ರಿಂದ ಪ್ರಸಿದ್ಧ ವಿಠ್ಠಲ ಬೀರದೇವರ ಜಾತ್ರೆಯು ಅತ್ಯಂತ ವಿಜ್ರಂಭನೆಯಿಂದ ಜರುಗಲಿದೆ. ಪ್ರತಿವರ್ಷದಂತೆ ಶಿಗಿ ಹುಣ್ಣಿವೆಯಂದು ವಿಠ್ಠಲ ಬೀರದೇವರಿಗೆ ಕರಿಕಟ್ಟುವುದರೊಂದಿಗೆ ಆರಂಭವಾಗುತ್ತದೆ. ನೆರೆಯ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ ಜಿಲ್ಲೆಯ ಕಡೋಳಿ ಗ್ರಾಮದ ವಿಠ್ಠಲ ಬೀರದೇವರು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲು ಬೇರೆ ಬೇರೆ ಗ್ರಾಮಗಳಲ್ಲಿ ನೆಲೆಸಿದಂತೆ 20 ವರ್ಷಗಳ ಹಿಂದೆ ಕೌಜಲಗಿಯಲ್ಲಿ ನೆಲೆಸಿ ಪವಾಡ ಮೆರೆದಿದ್ದಾರೆ. ದೇವಸ್ಥಾನ ನಿರ್ಮಿಸಲು ಭೂದಾನಿ ದಿ.ಹನಂತಪ್ಪ ಲ. ಜಡಗಪ್ಪಗೋಳ ಅವರು ತಮ್ಮ ಕೃಷಿ ಭೂಮಿಯನ್ನೇ ದಾನವಾಗಿ ನೀಡಿದರು. ಇಂದು ವಿಠ್ಠಲ ಬೀರದೇವರ ದೇವಸ್ಥಾನದೊಂದಿಗೆ ವಿಠ್ಠಲ ಮುರಿಸಿದ್ಧೇಶ್ವರ ದೇವಾಲಯವೂ ನಿರ್ಮಾಣವಾಗಿದೆ. ಜಾತ್ರೆಗೆ ಬರುವ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಪವುಳಿ, ಅಡುಗೆ ಮನೆ ಹಾಗೂ ಪ್ರಸಿದ್ಧ ಅಲಗು ಹಾಯುವ ರಂಗಮಂಟಪಗಳು ನಿರ್ಮಾಣವಾಗಿದೆ.
ಕಡೋಳ್ಳಿಯಲ್ಲಿ ಜರುಗುವ ಜಾತ್ರೆ ಮರುಕಳಿಸುವಂತೆ ಪಟ್ಟಣದಲ್ಲಿ ಜಾತ್ರೆ ಏರ್ಪಡುತ್ತದೆ. ಸೋಮವಾರ ನ-6 ರಿಂದ 8 ರವರೆಗೆ ಸಂಭ್ರಮದಿಂದ ಜರುಗುತ್ತದೆ. ನ-6 ರಂದು ಮುಂಜಾನೆ 7:00 ಗಂಟೆಗೆ ವಿಠ್ಠಲ ಮುರಿಸಿದ್ದೇಶ್ವರ ದೇವರ ಅಭಿಷೇಕ. ಮಧ್ಯಾಹ್ನ 12 ಗಂಟೆಗೆ ಪರಊರಿನ ವಾಲಗ ಕೂಡುತ್ತವೆ. ಅಂದು ರಾತ್ರಿ 10:00 ಗಂಟೆಗೆ ಡೊಳ್ಳಿನ ಪದಗಳು ಜರುಗುತ್ತವೆ. ಮಂಗಳವಾರ 7 ರಂದು ಮುಂಜಾನೆ ಪೂಜೆ, ಧಾರ್ಮಿಕ ಕಾರ್ಯಗಳು ಹಾಗೂ 8:00 ಗಂಟೆಗೆ ಹೊನಕುಪ್ಪಿ ಹೆಗಡೆ ಮನೆತನದವರಿಂದ ಬಾನ ವಿತರಣೆ ನಡೆಯುತ್ತದೆ. 11:00 ಗಂಟೆಗೆ ಪಟ್ಟಣದ ಶ್ರೀ ಉದ್ದಮ್ಮಾದೇವಿ ದೇವಸ್ಥಾನದಿಂದ ವಾಲಗ ಸಮೇತ ಶ್ರೀ ಲಚ್ಚಪ್ಪ ಲ. ದೂಳಪ್ಪನವರ ಅವರು ಅಲಗು ತೆಗೆದುಕೊಂಡು ಹೋಗುವದು. ಅಂದು ಮಧ್ಯಾಹ್ನ 2:00 ಗಂಟೆಗೆ ಪ್ರಸಿದ್ಧ ಅಲಗು ಹಾಯುವ ಕಾರ್ಯಕ್ರಮವನ್ನು ದೇವಋಷಿ ಶ್ರೀ ವಿಠ್ಠಲ ಕುರಗುಂದ ನೆರವೇರಿಸಲಿದ್ದಾರೆ. ಇದರೊಂದಿಗೆ ಸಿದ್ದಪ್ಪ ಸಣ್ಣಕ್ಕಿ ಅವರಿಂದ ಬೆತ್ತ ಹಾಯುವ ಕಾರ್ಯಕ್ರಮ ಜರುಗಲಿದೆ. ರಾತ್ರಿ 10:30 ಗಂಟೆಗೆ ಸಾಮಾಜಿಕ ಬಯಲಾಟ ಜರುಗುತ್ತದೆ.
ಬುಧವಾರ 8 ರಂದು ಮುಂಜಾನೆ 8:00 ಗಂಟೆಗೆ ಊರಭಕ್ತರಿಂದ ನೈವೇದ್ಯ ಸಮರ್ಪಣೆ ಜರುಗಲಿದೆ. 9 ಗಂಟೆಗೆ ಬಾಗೂ ಬಾಯಿ ಪಲ್ಲಕ್ಕಿಯ ಉದ್ದಮ್ಮದೇವಿ ದೇವಸ್ಥಾನದಿಂದ ವಿಠ್ಠಲ ಬೀರದೇವರ ಗುಡಿಗೆ ಹೋಗಿ ಬರುತ್ತದೆ. ರಾತ್ರಿ 10:00 ಗಂಟೆಗೆ ಮಹಾಪ್ರಸಾದ ಜರುಗಲಿದೆ. ಜಾತ್ರೆಯ ನಿಮಿತ್ತ ಮುಕ್ತ ನಾಲ್ಕು ಹಲ್ಲು, ಎರಡು ಹಲ್ಲು, ಹಾಲಹಲ್ಲಿನ ಟಗರಿನ ಕಾಳಗ ಸ್ಪರ್ಧೆ ಜರುಗಲಿದೆ.