ಬೆಳಗಾವಿ : ಜನತಾ ಪರಿವಾರವನ್ನು ಒಂದು ಗೂಡಿಸುವುದೆ ಜೆಡಿಎಸ ನ ಗುರಿ : ಕುಮಾರಸ್ವಾಮಿ
ಜನತಾ ಪರಿವಾರವನ್ನು ಒಂದು ಗೂಡಿಸುವುದೆ ಜೆಡಿಎಸ ನ ಗುರಿ : ಕುಮಾರಸ್ವಾಮಿ
ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಬೀಸಿದ್ದು, ಜನತಾ ಪರಿವಾರ ಒಗ್ಗೂಡಿಸುವ ಪ್ರಯತ್ನಗಳು ಜಾರಿಯಲ್ಲಿವೆ. ಬರುವ ವಿಧಾನಸಭೆ ಚುನಾವಣೆ ನಂತರ ರಾಜ್ಯದಲ್ಲಿ ಜನತಾ ಪರಿವಾರದ ರಾಜ್ಯಭಾರ ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.
ಅರಭಾವಿ ಕ್ಷೇತ್ರದಲ್ಲಿ ಆಯೋಜಿಸಿರುವ ಜೆಡಿಎಸ್ ಸಮಾವೇಶಕ್ಕೆ ತೆರಳುವ ಮುನ್ನ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ರಾಜ್ಯ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಒಳಜಗಳಗಳು ಭುಗಿಲ್ಲೆದ್ದಿವೆ. ರಾಜ್ಯ ಉಸ್ತುವಾರಿಗಳಿಗೆ ಈ ಜಗಳಗಳ ದೂರುಗಳನ್ನು ನಿರಂತರ ಕೇಳುವ ಪರಿಸ್ಥಿತಿ ಬಂದಿದೆ. ಎಚ್.ವಿಶ್ವನಾಥ ಸೇರಿ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕೆಲವು ಬಿಜೆಪಿ ನಾಯಕರೂ ಸಂಪರ್ಕದಲ್ಲಿದ್ದಾರೆ. ಶಾಸಕ ಸತೀಶ ಜಾರಕಿಹೊಳಿ ಖಾಸಗಿ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಅದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಕಾಂಗ್ರೆಸ್ ನ ವಿಶ್ವನಾಥ ಸೇರಿ ಹಲವರು ಜೆಡಿಎಸ್ ಸೇರುವುದಾದಲ್ಲಿ ಸ್ವಾಗತಿಸುತ್ತೇನೆ ಎಂದರು.
ರಾಜ್ಯ ಭ್ರಷ್ಟಾಚಾರದಲ್ಲಿ ನಂ.1 ಸ್ಥಾನಕ್ಕೆ ಏರಿದೆ. ಬರ ಪರಿಸ್ಥಿತಿ ಇದ್ದರೂ ನೆರವು ಇಲ್ಲ. ಸ್ಪಂದನೆ ಇಲ್ಲ. ಇವೆಲ್ಲ ರಾಜ್ಯ ಸರಕಾರದ ಸಾಧನೆಗಳು. ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತೇನೆ ಎಂದು ಅಧಿಕಾರಕ್ಕೆ ಬಂದಾಗ ಹೇಳಿದ್ದ ಕಾಂಗ್ರೆಸ್ ಈಗ ಮಾತು ಮರೆತಿದೆ. ಭರವಸೆಗಳು ಹುಸಿಯಾಗಿವೆ ಎಂದು ಹೇಳಿದ ಕುಮಾರಸ್ವಾಮಿ, ಕೇಂದ್ರ ಸರಕಾರದ ಸ್ಥಿತಿಯೂ ಇದಕ್ಕಿಂತ ಬೇರೆಯಲ್ಲ. ಬಡವರ ಬಗ್ಗೆ ಅವರಿಗೆ ಕರುಣೆಯೇ ಇಲ್ಲ ಎಂದು ಹರಿಹಾಯ್ದರು.