RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ: ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ : ಕರವೇ ಪ್ರತಿಭಟನೆ

ಗೋಕಾಕ: ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ : ಕರವೇ ಪ್ರತಿಭಟನೆ 

ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ : ಕರವೇ ಪ್ರತಿಭಟನೆ

ಗೋಕಾಕ ನ 10: ಪಾಮಲದಿನ್ನಿ ಗ್ರಾಮದ ಪಶು ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪಾಮಲದಿನ್ನಿ ಗ್ರಾಮದ ಕಾರ್ಯಕರ್ತರು, ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಸಿದರು.
ಗುರುವಾರ ಮುಂಜಾನೆ ನಗರದ ಪಶು ಸಂಗೋಪಣೆ ಕಚೇರಿ ಎದುರು ಸೇರಿದ ಕರವೇ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಸಹಾಯಕ ನಿರ್ದೇಶಕ ಮೋಹನ ಕಮತ ಅವರ ಮುಖಾಂತರ ಉಪನಿರ್ದೇಶಕರಿಗೆ ಮನವಿ ಅರ್ಪಿಸಿದರು.
ಕಳೆದ ಹಲವು ದಿನಗಳಿಂದ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿರುವ ಪಶು ಆಸ್ಪತ್ರೆಯು ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಇದರಿಂದ ಈ ಗ್ರಾಮದ ಪಶು ಆಸ್ಪತ್ರೆಯನ್ನು ಅವಲಂಬಿಸಿರುವ ದನ, ಕರು, ಎಮ್ಮೆ ಸೇರಿದಂತೆ ಇತರೆ ಪಶು, ಪ್ರಾಣಿಗಳನ್ನು ಹೊಂದಿರುವ ಸಾರ್ವಜನಿಕರು ಮತ್ತು ರೈತರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದರ ಬಗ್ಗೆ ಹಲವು ಬಾರಿ ಸ್ಥಳೀಯ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಇಲ್ಲಿ ಬರುವ ಸಾರ್ವಜನಿಕರು ಮತ್ತು ಮೂಕಪ್ರಾಣಿಗಳು ಸರಿಯಾದ ವ್ಯವಸ್ಥೆ ಮತ್ತು ಔಷಧೋಪಚಾರ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದಾರೆ.

ಮೇಲಾಗಿ ಕಳೆದ ಹಲವು ದಿನಗಳಿಂದ ಇಲ್ಲಿಯ ವೈದ್ಯರು ನಿಯೋಜನೆ ಮೇರೆಗೆ ಬೇರೆ ಪಶು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಇಲ್ಲಿಯ ಆಸ್ಪತ್ರೆಗೆ ಸರಿಯಾಗಿ ಬರುತ್ತಿಲ್ಲ. ಇದರಿಂದ ಸಾಕಷ್ಟು ಕೆಲಸಗಳು ಮತ್ತು ಕಡತಗಳು ಬಾಕಿ ಉಳಿಯುತ್ತಿವೆ. ರೈತರಿಗಾಗಿ ವಿತರಣೆ ಮಾಡುವ ಬೀಜಗಳು, ರಸಗೊಬ್ಬರಗಳು ಸಹ ಸರಿಯಾಗಿ ವಿತರಣೆಯಾಗುತ್ತಿಲ್ಲ. ಇದರಿಂದ ಪಶು ಆಸ್ಪತ್ರೆಯನ್ನು ಅವಲಂಬಿಸಿರುವ ರೈತರು ಸಹ ಸರಿಯಾದ ಸಮಯಕ್ಕೆ ರಸಗೊಬ್ಬರ ಬೀಜಗಳನ್ನು ಪಡೆಯದೇ ಕಂಗಾಲಾಗುತ್ತಿದ್ದಾರೆ. ಬಹುಮುಖ್ಯವಾಗಿ ರಾಜ್ಯಾದ್ಯಂತ ಚಾಲ್ತಿಯಲ್ಲಿರುವ ದನುಕರುಗಳಿಗೆ ಲಸಿಕಾ ಕಾರ್ಯಕ್ರಮವು ಸಹ ಈ ಪಶು ಆಸ್ಪತ್ರೆಯಲ್ಲಿ ಸರಿಯಾಗಿ ಅನುಷ್ಠಾನವಾಗಿಲ್ಲ. ಇವೆಲ್ಲ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಬಂದಾಗ ಈ ಆಸ್ಪತ್ರೆಯಲ್ಲಿ ವೈದ್ಯರೇ ಇರುವುದಿಲ್ಲ. ಇಲ್ಲಿರುವ ಸಿಬ್ಬಂದಿಗಳು ಸಹ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡದೇ ಸತಾಯಿಸುತ್ತಿದ್ದಾರೆ. ಇದರಿಂದ ಈ ಭಾಗದ ರೈತರು, ಸಾರ್ವಜನಿಕರು ಮೇಲಾಗಿ ದನುಕರು ಸೇರಿದಂತೆ ಇತರೆ ಮೂಕಪ್ರಾಣಿಗಳು ತುಂಬಾ ಕಷ್ಟವನ್ನು ಅನುಭವಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಈ ಮೇಲಿನ ವಿಷಯಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿ ಆದಷ್ಟು ಬೇಗ ಇದಕ್ಕೆ ಶಾಶ್ವತ ಪರಿಹಾರ ದೊರಕಿಸಿಕೊಟ್ಟು ಇಲ್ಲಿಯ ಆಸ್ಪತ್ರೆಗೆ ವೈದ್ಯರು ನಿಯೋಜನೆ ಮೇರೆಗೆ ಬೇರೆ ಪಶು ಆಸ್ಪತ್ರೆಗಳಿಗೆ ಹೋಗುತ್ತಿರುವದನ್ನು ತಡೆದು ಇದೇ ಆಸ್ಪತ್ರೆಯಲ್ಲಿ ಇವರನ್ನು ಅಥವಾ ಬೇರೆ ಯಾರೋ ವೈದ್ಯರು ಖಾಯಂ ಆಗಿ ನೇಮಿಸಿ ಪಾಮಲದಿನ್ನಿ ಗ್ರಾಮದಲ್ಲಿರುವ ಪಶು ಆಸ್ಪತ್ರೆಯನ್ನು ಅವಲಂಬಿಸಿರುವ ರೈತರು ಪಡುತ್ತಿರುವ ಗೋಳಿನಿಂದ ಪಾರು ಮಾಡಬೇಕೆಂದು ಕರವೇ ಪಾಮಲದಿನ್ನಿ ಶಾಖೆಯು ವಿನಂತಿಸಿದೆ. ಇದಕ್ಕೆ ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ಸಹಾಯಕ ನಿರ್ದೇಶಕರ ಮನೆ ಎದುರು ಧರಣಿ ಸತ್ಯಾಗ್ರಹ ಕೈಗೊಂಡು ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಈ ಮನವಿ ಮೂಲಕ ಎಚ್ಚರಿಸಲಾಗಿದೆ.

ಪ್ರತಿಭಟನೆಯಲ್ಲಿ ಕೃಷ್ಣಾ ಖಾನಪ್ಪನವರ, ದೀಪಕ್ ಹಂಜಿ, ಬಸು ಗಾಡಿವಡ್ಡರ, ಸಂಜು ಗಾಡಿವಡ್ಡರ, ವಸಂತ ಹಂಜಿ, ಶೆಟ್ಟೆಪ್ಪಾ ಗಾಡಿವಡ್ಡರ, ಮಲ್ಲು ಸಂಪಗಾರ, ರಮೇಶ ಕಮತಿ, ರವಿ ನಾವಿ, ಮಲ್ಲಪ್ಪ ತಲೆಪ್ಪಗೋಳ, ರಮೇಶ ಕೆ., ನಿಯಾಜ ಪಟೇಲ್, ಅಪ್ಪಯ್ಯಾ ತಿಗಡಿ, ವಿಠ್ಠಲ ಹೂಲಿಕಟ್ಟಿ, ವಿಠ್ಠಲ ಸಣ್ಣಕ್ಕಿ, ಸುರೇಶ ಹುಣಶ್ಯಾಳ, ಆನಂದ ಕದಮ್, ಮಂಜು ಗಾಡಿವಡ್ಡರ, ಮಲ್ಲಪ್ಪ ಕೌಜಲಗಿ, ಮಾರುತಿ ಹಂಜಿ, ಬಸಪ್ಪ ಕುರಣಿ, ದುಂಡಪ್ಪ ಭಾವಿಕಟ್ಟಿ, ಸಿದ್ದಪ್ಪ ಹಣಬರಟ್ಟಿ, ವಿಠ್ಠಲ ಹಂಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: