ಗೋಕಾಕ:ಕೆಪಿಎಂಇ ತಿದ್ದುಪಡಿ ಮಸೂದೆಗೆ ವಿರೋಧ : ನಗರದ ವೈದ್ಯರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ
ಕೆಪಿಎಂಇ ತಿದ್ದುಪಡಿ ಮಸೂದೆಗೆ ವಿರೋಧ : ನಗರದ ವೈದ್ಯರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ
ಗೋಕಾಕ ನ 12: ನಾಳೆಯಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಮಂಡಿಸಲು ಉದ್ಧೇಶಿಸಿರುವ ಕೆಪಿಎಂಇ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ನಗರದ ವೈದ್ಯರುಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಈ ಮಸೂದೆ ತಿದ್ದುಪಡಿಯಾದಲ್ಲಿ ಯಾವುದೇ ಖಾಸಗಿ ವೈದ್ಯರಿಗೆ ಆಸ್ಪತ್ರೆ ನಡೆಸುವುದು ದುಸ್ತರವಾಗುತ್ತದೆ. ಇಡೀ ವೈದ್ಯಕೀಯ ವ್ಯವಸ್ಥೆ ಹಾಳಾಗಿ ಹೋಗುತ್ತದೆ. ಈ ಕಾಯ್ದೆ ಖಾಸಗಿ ವೈದ್ಯರುಗಳಿಗೆ ಮಾರಕವಾಗಿದ್ದು, ತಿದ್ದುಪಡಿಯನ್ನು ತಿರಸ್ಕರಿಸಲು ಅಧಿವೇಶನದಲ್ಲಿ ಚರ್ಚೆ ನಡೆಸಿ ವೈದ್ಯರುಗಳು ಹಿತ ಕಾಪಾಡುವಂತೆ ಭಾರತೀಯ ವೈದ್ಯಕೀಯ ಸಂಸ್ಥೆಯ ಪದಾಧಿಕಾರಿಗಳು ಶಾಸಕರಿಗೆ ಮನವಿ ಮಾಡಿಕೊಂಡರು.
ಹೊಸ ಕಾನೂನಿನಲ್ಲಿ ರೋಗಿಯ ಚಿಕಿತ್ಸೆ ಮಾಡುವಾಗ ಪ್ರತಿ ಹೆಜ್ಜೆಹೆಜ್ಜೆಗೂ ವೈದ್ಯರ ಮನೋಸ್ಥೈರ್ಯ ಕುಸಿಯುವಂತೆ ಮಾಡುವ ಕಟ್ಟಳೆಗಳಿವೆ. ಇಂತಹ ವಿಚಾರದಲ್ಲಿ ತಪ್ಪು ಹುಡುಕಿ ದೂರು ನೀಡಲು ಜಿಲ್ಲಾ ಮಟ್ಟದಲ್ಲಿ ಪ್ರಾಧಿಕಾರ ರಚಿಸಿರುವುದರಿಂದ ಪ್ರತಿಯೊಬ್ಬ ವೈದ್ಯನು ರೋಗಿಯನ್ನು ಸಂಶಯದಿಂದ ನೋಡುವಂತಾಗುತ್ತದೆ. ವಿನಾಕಾರಣ ಕೋರ್ಟಿಗೆಳೆದು ಲಕ್ಷಗಟ್ಟಲೇ ಜುಲ್ಮಾನೆ ವಿಧಿಸುವುದಾದರೆ ಯಾವ ವೈದ್ಯರು ಈ ಕ್ಷೇತ್ರದಲ್ಲಿ ಉಳಿಯಲಾರರು ಎಂದು ವೈದ್ಯರು ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯರ ಮನವಿ ಸ್ವೀಕರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಅವರನ್ನು ಭೇಟಿ ಮಾಡಿ ಸದನದಲ್ಲಿ ಈ ವಿಷಯ ಪ್ರಸ್ತಾಪಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಡಾ.ಅಶ್ವಿನ ಮಾಸೂರಕರ, ಡಾ.ಅಶೋಕ ಕೊಪ್ಪ, ಡಾ.ಗುಡಗುಡಿ, ಡಾ.ಎಸ್.ಎ. ಕಣಗಲಿ, ಡಾ.ಎಂ.ಕೆ. ಕಡ್ಡಿ, ಡಾ.ನಿತೀನ ಮೇಸ್ತ್ರಿ, ಡಾ.ರಾಜಕುಮಾರ ಕೊಪ್ಪ, ಡಾ.ಗಂಗಾಧರ ಉಮರಾಣಿ, ಡಾ.ವಿರೇಶ ಪಾಟೀಲ, ಡಾ.ಕೆಂಪಣ್ಣಾ ಹಳಿಗೌಡರ, ಡಾ.ಆರ್.ಡಿ. ಪಾಟೀಲ, ಡಾ.ಗೋರೋಶಿ, ಡಾ.ರಮೇಶ ಪಟಗುಂದಿ, ಡಾ.ಕಡಾಡಿ, ಸೇರಿದಂತೆ ನಗರದ ವೈದ್ಯರುಗಳು ಉಪಸ್ಥಿತರಿದ್ದರು.