ಗೋಕಾಕ:ಅರಬಾಂವಿ ಕ್ಷೇತ್ರದಿಂದ ನನಗೆ ಟಿಕೆಟ್ ತಪ್ಪಸಲು ಯಾರಿಂದಲೂ ಸಾಧ್ಯವಿಲ್ಲ : ಮಾಜಿ ಸಚಿವ ಬಾಲಚಂದ್ರ ಗುಡುಗು
ಅರಬಾಂವಿ ಕ್ಷೇತ್ರದಿಂದ ನನಗೆ ಟಿಕೆಟ್ ತಪ್ಪಸಲು ಯಾರಿಂದಲೂ ಸಾಧ್ಯವಿಲ್ಲ : ಮಾಜಿ ಸಚಿವ ಬಾಲಚಂದ್ರ ಗುಡುಗು
ಘಟಪ್ರಭಾ ಮೇ 12 : ಯಾರು ಏನೇ ಹೇಳಲಿ. 2018 ರಲ್ಲಿ ಜರುಗಲಿರುವ ವಿಧಾನಸಭೆ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಇಲ್ಲಿಯ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಾರ್ಯಾಲಯವನ್ನು ಉದ್ಘಾಟಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಯಾರು ಎಷ್ಟೇ ಪಿತೂರಿ ನಡೆಸಿದರೂ ಅರಭಾವಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ. ಇದರಲ್ಲಿ ಯಾವ ಸಂಶಯವೂ ಇಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಮೇ 9 ರಂದು ಅರಭಾವಿ ಕ್ಷೇತ್ರದ ಹಳ್ಳೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಜಿಲ್ಲಾ ಪ್ರವಾಸದ ಮಾಹಿತಿ ನನಗಿರಲಿಲ್ಲ. ಹಳ್ಳೂರ ನನ್ನ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದು. ಪ್ರವಾಸ ಮಾಡುವ ಸಂದರ್ಭದಲ್ಲಿ ಆಯಾ ಕ್ಷೇತ್ರಗಳ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಿನಾಂಕ ನಿಗದಿ ಮಾಡಬೇಕಾದ ಸಂಪ್ರದಾಯ. ಆದರೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಯಡಿಯೂರಪ್ಪ ಅವರು ಸೌಜನ್ಯಕ್ಕೂ ಸಹ ನನ್ನನ್ನು ಸಂಪರ್ಕಿಸಿಲ್ಲ. ಇದರ ಬಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಸುತ್ತೇನೆಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಹಳ್ಳೂರ ಗ್ರಾಮದಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕೆ ಬಿ.ಎಸ್.ಯಡಿಯೂರಪ್ಪನವರನ್ನು ಆಮಂತ್ರಿಸಲಿಕ್ಕೆ ಅಲ್ಲಮಪ್ರಭು ಸ್ವಾಮಿಗಳು ಹೋದ ಸಂದರ್ಭದಲ್ಲಿ ಕೆಲವರು ಬಾಲಚಂದ್ರ ಜಾರಕಿಹೊಳಿ ಅವರನ್ನು ವಿರೋಧ ಕಟ್ಟಿಕೊಂಡು ಕಾರ್ಯಕ್ರಮ ನಡೆಸುವುದಾದರೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಅದರಲ್ಲೂ ಬಾಲಚಂದ್ರ ಜಾರಕಿಹೊಳಿ ಅವರ ಸ್ವ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯುವುದಾದರೆ ಯಡಿಯೂರಪ್ಪನವರನ್ನು ಕಾರ್ಯಕ್ರಮಕ್ಕೆ ಕರೆತರುವ ಜವಾಬ್ದಾರಿ ತಮ್ಮದು ಎಂದು ಕೆಲವು ಬಿಜೆಪಿ ಮುಖಂಡರು ಹೇಳಿರುವುದು ಸಾರ್ವಜನಿಕ ವಲಯದಿಂದ ತಿಳಿದುಬಂದಿದೆ. ಇದರರ್ಥ ನಾನು ಬಿಜೆಪಿ ಶಾಸಕ. ಅಲ್ಲದೇ ಸಚಿವನಾಗಿ ಕೆಲಸ ನಿರ್ವಹಿಸಿದ್ದೇನೆ. ಕೇವಲ ನನ್ನ ರಾಜಕೀಯ ಏಳ್ಗೆ ಬಯಸದ ಕೆಲವರು ಕಾರ್ಯಕ್ರಮಕ್ಕೆ ಯಡಿಯೂರಪ್ಪನವರನ್ನು ಆಮಂತ್ರಿಸಿ, ನನ್ನನ್ನು ಕನಿಷ್ಠ ಸೌಜನ್ಯಕ್ಕಾದರೂ ಸಂಪರ್ಕಿಸಲಿಲ್ಲ. ಇದು ದುರುದ್ಧೇಶದಿಂದ ನಮ್ಮ ಪಕ್ಷದವರೇ ರೂಪಿಸಿರುವ ಷಢ್ಯಂತ್ರ. ಅಲ್ಲದೇ ಇದು ಕೂಡ ಪಕ್ಷವಿರೋಧಿ ಚಟುವಟಿಕೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಬಿಜೆಪಿ ಭಿನ್ನಮತೀಯ ಚಟುವಟಿಕೆಗಳಿಗೆ ರಾಜ್ಯದ ನಾಯಕರುಗಳೇ ಅವಕಾಶ ಮಾಡಿಕೊಡುತ್ತಿದ್ದಾರೆ. ಇದು ನಿಷ್ಠಾವಂತ ಕಾರ್ಯಕರ್ತರಿಗೆ ನೋವನ್ನುಂಟು ಮಾಡುತ್ತಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಕೆಟ್ಟ ಹೆಸರು ಬರಬಹುದು. ಮತದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಚುನಾಯಿತರಾಗಿದ್ದರು. ಬಿಜೆಪಿಯಿಂದ ಬಂಡೆದ್ದು ಹೊಸ ಪಕ್ಷ ಸ್ಥಾಪಿಸಿದ್ದ ಯಡಿಯೂರಪ್ಪನವರ ಕೆಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದರಿಂದ ಯಡಿಯೂರಪ್ಪನವರು ಸ್ಥಾಪಿಸಿದ್ದ ಕೆಜೆಪಿ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಬೇಕಾಯಿತು. ಇದನ್ನು ಮೊದಲು ಯಡಿಯೂರಪ್ಪನವರು ಅರ್ಥಮಾಡಿಕೊಳ್ಳಲಿ. ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಇವರು ಕೇವಲ ಕೆಜೆಪಿ ಕಾರ್ಯಕರ್ತರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತ, ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿ ಅವಮಾನಿಸುತ್ತಿದ್ದಾರೆಂದು ಯಡಿಯೂರಪ್ಪನವರ ವಿರುದ್ಧ ತಮ್ಮ ನೋವನ್ನು ಹೊರಹಾಕಿದರು.
ರಾಮದುರ್ಗ ಕ್ಷೇತ್ರದಿಂದ ಮಹಾದೇವಪ್ಪ ಯಾದವಾಡ, ಕಿತ್ತೂರ ಕ್ಷೇತ್ರದಿಂದ ಸುರೇಶ ಮಾರಿಹಾಳ ಹಾಗೂ ಖಾನಾಪೂರ ಕ್ಷೇತ್ರದಿಂದ ಪ್ರಲ್ಹಾದ ರೇಮಾಣಿ ಅವರಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೇಟ್ ನೀಡಬೇಕು. ಈ ಕ್ಷೇತ್ರಗಳಲ್ಲಿ ಕೆಜೆಪಿ ಕಾರ್ಯಕರ್ತರಿಗೆ ರಾಜ್ಯಾಧ್ಯಕ್ಷರು ಮಣೆ ಹಾಕುತ್ತಿದ್ದಾರೆ. ಈ ಮೂವರಿಗೂ ಬಿಜೆಪಿ ಟಿಕೇಟ್ ಖಚಿತ ಆಗುವವರೆಗೆ ನನ್ನ ಹೋರಾಟ ನಡೆಯಲಿದೆ ಎಂದು ಹೇಳಿದರು.
ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿರುವ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಪಕ್ಷದ ನಾಯಕರುಗಳು ನಮ್ಮ-ನಮ್ಮಲ್ಲಿಯೇ ಭಿನ್ನಮತ ಸೃಷ್ಟಿಸುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ಅವರ ದೂರದೃಷ್ಟಿ ನಾಯಕತ್ವ ಹಾಗೂ ಕೇಂದ್ರ ಸರ್ಕಾರದ ಜನಪರ ಕಾರ್ಯಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ದೇಶಾದ್ಯಂತ ಬಿಜೆಪಿ ಅಲೆ ಎದ್ದಿದೆ. ಆದಾಗ್ಯೂ ಕೆಲ ನಾಯಕರುಗಳು ತಮ್ಮ ಧೋರಣೆಯನ್ನು ಸರಿಪಡಿಸಿಕೊಳ್ಳುವುದು ಉತ್ತಮ. ಇದರಿಂದ ಬಿಜೆಪಿಗೆ ಭಾರೀ ಅನುಕೂಲವಾಗಲಿದೆ. ಒಂದು ವೇಳೆ ರಾಜ್ಯದ ನಾಯಕರುಗಳು ತಮ್ಮ ಮನಸ್ಥಿತಿಯನ್ನು ಬದಲಿಸದೇ ಹೀಗೆಯೇ ಮುಂದುವರೆದರೆ ಖಂಡಿತವಾಗಿಯೂ ಪಕ್ಷದಲ್ಲಿದ್ದುಕೊಂಡೇ ನಿಷ್ಠಾವಂತರ ಪರವಾಗಿ ಹೋರಾಟ ನಡೆಸುತ್ತೇನೆ. ಪಕ್ಷದ ರಾಜ್ಯ ನಾಯಕರುಗಳ ವಿರುದ್ಧ ದಾಖಲೆಗಳ ಸಮೇತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಅವರನ್ನು ಖುದ್ದಾಗಿ ಭೇಟಿ ಮಾಡಿ ದೂರು ನೀಡುತ್ತೇನೆಂದು ಬಾಲಚಂದ್ರ ಜಾರಕಿಹೊಳಿ ಖಡಕ್ಕಾಗಿ ನುಡಿದರು.