ಬೈಲಹೊಂಗಲ:ಲಿಂಗದಾರಿಗಳು ಚಲಿಸುವ ದೇವಾಲಯಗಳು : ಬಸವಕುಮಾರ ಸ್ವಾಮೀಜಿ
ಲಿಂಗದಾರಿಗಳು ಚಲಿಸುವ ದೇವಾಲಯಗಳು : ಬಸವಕುಮಾರ ಸ್ವಾಮೀಜಿ
ಬೈಲಹೊಂಗಲ ನ 16: ಭಾರತ ಸಂವಿಧಾನದ ಕಲಂ 25 ರ ಪ್ರಕಾರ ಲಿಂಗಾಯತ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆ ಹಾಗೂ ಲಿಂಗಾಯತ ಧರ್ಮೀಯರಿಗೆ ಧಾರ್ಮಿಕ ಅಲ್ಪಸಂಖ್ಯಾತ ಧರ್ಜೆ, ಧಾರ್ಮಿಕ ಕೋಡ ನೀಡಬೇಕೆಂದು ಹಕ್ಕೋತ್ತಾಯಿಸಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ, ತೆಲಂಗಾಣ, ತಮಿಳನಾಡು, ಕೇರಳ ರಾಜ್ಯಗಳಲ್ಲಿ ಲಕ್ಷಾಂತರ ಬಸವ ಭಕ್ತರು ಭೃಹತ್ ಸಮಾವೇಶಗಳ ಆಯೋಜಿಸುತ್ತಾ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಿದ್ದು ರಾಷ್ಟ್ರೀಯ ಕಾರ್ಯಕರ್ತ ಸಮಾವೇಶವನ್ನು ನಮ್ಮ ಬಸವಧರ್ಮ ಪೀಠ ಹಾಗೂ ವಿಶ್ವಕಲ್ಯಾಣ ಮಿಷನ್ ವತಿಯಿಂದ ಇದೇ ರವಿವಾರ ದಿ 19 ರಂದು ಕರ್ನಾಟಕ ರಾಜ್ಯದ ಬೆಂಗಳೂರ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾರಾಷ್ಟ್ರದ ಅಲ್ಲಮಗಿರಿಯ ಅಲ್ಲಮಪ್ರಭು ಯೋಗಪೀಠದ ಜಗದ್ಗುರು ಬಸವಕುಮಾರ ಮಹಾಸ್ವಾಮೀಜಿ ಹೇಳಿದರು.
ನಗರದ ಕಿತ್ತೂರ ಚನ್ನಮ್ಮ 2ನೆಯ ಅಡ್ಡರಸ್ತೆಯಲ್ಲಿರುವ ಬಸವ ಮಂಟಪದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನುದೇಶಿಸಿ ಮಾತನಾಡಿದ ಅವರು 12 ನೆಯ ಶತಮಾನದಲ್ಲಿ ಗುರುಬಸವಣ್ಣನವರ ಆದಿಯಾಗಿ 770 ಕಾಯಕವರ್ಗದ ಮುಖಂಡರಿಂದ ಲಿಂಗಾಯತ ಧರ್ಮ ಸ್ಥಾಪನೆಯಾಗಿದೆ. ಇದರ ಬಗ್ಗೆ ವಿದೇಶಿ ಇತಿಹಾಸಕಾರರ ಸಾಹಿತ್ಯದ “ಜಗತ್ತಿನ ಧರ್ಮಗಳು” ಎಂಬ ಗ್ರಂಥದಲ್ಲಿ ಲಿಂಗಾಯತ ಒಂದು ವಿಶಿಷ್ಠ ಧರ್ಮ ಲಿಂಗದಾರಿಗಳು ಚಲಿಸುವ ದೇವಾಲಯಗಳು, ಮಾತನಾಡುವ ದೇವರು ಎಂಬ ಉಲ್ಲೇಖವಿದೆ. ಐತಿಹಾಸಿಕ ದಾಖಲೆಗಳಾದ ಬ್ರಿಟಿಷ ಗೆಜೆಟ್, ಮೈಸೂರ ಗೆಜೆಟ್ ಕೋರ್ಗಿಸ್ ಗೆಜೆಟಿಯರ, ಹಿಂದೂ ಲಾ ನಲ್ಲಿ ಲಿಂಗಾಯತ ಪ್ರತ್ಯೇಕವೆಂದು ದಾಖಲಾಗಿದೆ. ಹಾಗಾಗೀ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಯಿಂದ ಜಾಗತಿಕ ಧರ್ಮಗಳ ಪಟ್ಟಿ ಸೇರಿ ಪ್ರತಿಯೊಬ್ಬರು ಸಮಾನತೆ, ಕಾಯಕ, ದಾಸೋಹ, ಶಿವಯೋಗದ ಮಹತ್ವ ಅರಿತು ಜಗತ್ತಿಗೆ ತೋರಿಸುವ ಕಾರ್ಯ ನಡೆಯುತ್ತದೆ. ಅಷ್ಟೇ ಅಲ್ಲದೆ ಹರಿದು ಹಂಚಿಹೋಗಿರುವ 99 ಲಿಂಗಾಯತ ಒಳಪಂಗಡಗಳು ಒಂದಾಗಲಿವೆ ಎಂದರು.
ಕೂಡಲ ಸಂಗಮದ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಡಾ. ಮಾತೆ ಮಹಾದೇವಿ ಅವರ ನೇತೃತ್ವದಲ್ಲಿ ಸಮಾವೇಶ ಜರಗುತ್ತಿದ್ದು ಮಹಾರಾಷ್ಟ್ರದ ಶತಾಯುಶಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಗದಗ ತೋಂಟದಾರ್ಯ ಮಠದ ಡಾ. ಸಿದ್ದಲಿಂಗ ಸ್ವಾಮೀಜಿ, ಚಿತ್ರದುರ್ಗ ಭೃಹನ್ಮಠದ ಡಾ. ಶಿವಮೂರ್ತಿ ಮುರಘಾಶರಣರು, ಇಳಕಲ್ಲ ಡಾ. ಮಹಾಂತ ಸ್ವಾಮಿಜಿ, ಬೆಳಗಾವಿಯ ಡಾ. ಸಿದ್ದರಾಮ ಸ್ವಾಮಿಜಿ, ಬಾಲ್ಕಿಯ ಡಾ ಬಸವಲಿಂಗ ಪಟ್ಟದೇವರು, ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಉಳವಿ ಚನ್ನಬಸವೇಶ್ವರ ಮಹಾಮಠದ ಬಸವ ಸಿದ್ಧಲಿಂಗ ಸ್ವಾಮೀಜಿ ಹಾಗೂ ನೂರಾರು ಗುರು-ವಿರಕ್ತರು ಸಾನಿದ್ಯ ವಹಿಸಲಿದ್ದು ಬೆಂಗಳೂರು ನಗರದ ಮಹಾಪೌರ ಸಂಪತ್‍ರಾಜ್, ಸಚಿವ ರಾಮಲಿಂಗರೆಡ್ಡಿ, ಎಂ ಕೃಷ್ಣಪ್ಪ, ಶರಣಪ್ರಕಾಶ ಪಾಟೀಲ, ಬಸವರಾಜ ರಾಯರೆಡ್ಡಿ, ಎಂ.ಬಿ ಪಾಟೀಲ, ವಿನಯ ಕುಲಕರ್ಣಿ, ಬಸವರಾಜ ಹೊರಟ್ಟಿ, ಹಾಗೂ ಚಿಂತಕರಾದ ಚಂದ್ರಶೇಖರ ಪಾಟೀಲ, ಎಸ್.ಎಮ್. ಜಾಮದಾರ, ನಿವೃತ್ತ ಹೈಕೋರ್ಟ ನ್ಯಾಯಾಧೀಶ ಅರಳಿ ನಾಗರಾಜ, ಮತ್ತು ರಾಜ್ಯದ ದಲಿತಪರ ಸಂಘಟನೆಗಳು ಅದ್ಯಕ್ಷರು, ಪ್ರಗತಿಪರ ಚಿಂತಕರು, ರಾಜ್ಯದ ಮಹಿಳಾ ಪ್ರತಿನಿಧಿಗಳು ಭಾಗವಹಿಸಲಿದ್ದು ಬೆಳಗಾವಿ, ಬೈಲಹೊಂಗಲ, ಸವದತ್ತಿ, ಗೋಕಾಕ, ಕಿತ್ತೂರ ಹಾಗೂ ಸೂತ್ತಮೂತ್ತಲಿನ ಬಸವ ನಾಡಿನ ಎಲ್ಲ ಶರಣ-ಶರಣೆಯರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದರು.
ಇದೇ ವೇಳೆ ಬೈಲಹೊಂಗಲ ಬಸವದಳದ ಅದ್ಯಕ್ಷೆ ವಿಜಯಲಕ್ಷ್ಮೀ ತೋಟಗಿ, ಬಸವ ಕೇಂದ್ರದ ಸಂಚಾಲಕ ಬಸವರಾಜ ಹುಬ್ಬಳ್ಳಿ, ಬಸವ ಸೇನಾದ ಸಂಚಾಲಕ ಸುದೀರ ವಾಲಿ, ವಿರುಪಾಕ್ಷಿ ತೋಟಗಿ, ಶೈಲಾ ಆಲದಕಟ್ಟಿ, ಚನ್ನಮ್ಮ ಕಂಬಾರಗಣವಿ, ಗಂಗಮ್ಮ ಅಮರಶಟ್ಟಿ, ಶೃತಿ ಕಂಭಾರಗಣವಿ ಮತ್ತಿತ್ತರರು ಉಪಸ್ಥಿತರಿದ್ದರು.