ಗೋಕಾಕ:ಸರ್ಕಾರಿ ಆಸ್ಪತ್ರೆ ವೈದ್ಯರ ಸೇವೆ ಶ್ಲಾಘನೀಯ : ಕಿರಣ ಡಮಾಮಗರ
ಸರ್ಕಾರಿ ಆಸ್ಪತ್ರೆ ವೈದ್ಯರ ಸೇವೆ ಶ್ಲಾಘನೀಯ : ಕಿರಣ ಡಮಾಮಗರ
ಗೋಕಾಕ ನ 20 :ಕೆಪಿಎಮ್‍ಇ ಮಸೂದೆ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ಖಾಸಗೀ ಆಸ್ಪತ್ರೆಯ ವೈಧ್ಯರ ಮುಷ್ಕರ ಹಿನ್ನೆಲೆಯಲ್ಲಿ ಗೋಕಾಕ ಸರ್ಕಾರಿ ಆಸ್ಪತ್ರೆ ವೈದ್ಯರು ನೀಡಿದ ವೈದ್ಯಕೀಯ ಸೇವೆ ಸ್ಮರಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಯ ತಾಲೂಕಾ ಘಟಕದ ವತಿಯಿಂದ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಸನ್ಮಾನಿಸಲಾಯಿತು.
ಸೋಮವಾರದಂದು ಇಲ್ಲಿಯ ಕರವೇ ತಾಲೂಕಾಧ್ಯಕ್ಷ ಕಿರಣ ಡಮಾಮಗರ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ. ಆರ್.ಎಸ್.ಬೆಣಚಿನಮರಡಿ, ಡಾ. ಗೋಪಾಲ ವಾಗ್ಮುಡೆ, ಡಾ. ರವೀಂದ್ರ ಅಂಟಿನ, ಡಾ. ಉದಯ ಅಂಗಡಿ, ಡಾ. ಭೀಮಸೇನ ಬಾಗಲಕೋಟ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಿರಣ ಡಮಾಮಗರ, ಖಾಸಗೀ ವೈದ್ಯರ ಮುಷ್ಕರದಿಂದ ರಾಜ್ಯಾದ್ಯಂತ 50 ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದು ವಿಷಾಧದ ಸಂಗತಿಯಾಗಿದೆ. ಅದರಲ್ಲೂ ಗೋಕಾಕ ತಾಲೂಕಿನಲ್ಲಿ ಯಾವ ರೋಗಿಗಳ ಸಾವು-ನೋವು ಆಗದಂತೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಗಲಿರುಳು ವೈದ್ಯಕೀಯ ಸೇವೆ ನೀಡಿದ್ದನ್ನು ಶ್ಲಾಘಿಸಿದರಲ್ಲದೇ, ದೇಶದಲ್ಲಿ ವೈದ್ಯರ ಕೊರತೆ ಹೆಚ್ಚಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದಕ್ಕೆ ಹೆಚ್ಚಿನ ಮಹತ್ವ ನೀಡಿ, ದೇಶದ ಜನತೆಗೆ ಉತ್ತಮ ಆರೋಗ್ಯ ನೀಡುವಂತಹ ಯೋಜನೆಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿದರು.
ಮುಷ್ಕರದಿಂದ ಸಾವನ್ನಪ್ಪಿದ ರೋಗಿಗಳ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.
ಮಲ್ಲಪ್ಪ ಪಾಶ್ಚಾಪೂರ, ಸಿದ್ದಲಿಂಗ ಗುಡ್ಲಿ, ಕಲ್ಲಯ್ಯ ಮಠಪತಿ, ಮಹಾರುದ್ರ ಗಂಡ್ರೊಳ್ಳಿ, ಅಮೃತ ವಾಳ್ವೇಕರ, ಗೋಪಾಲ ಉಡಿನಾರ, ಸಂಜು ತಿಪ್ಪವ್ವಗೋಳ, ಗಣಪತಿ ರಾಮಲಿಂಗ, ಸಿದ್ದು ಗುಡ್ಲಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.