RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ : ಶಾಸಕ ಬಾಲಚಂದ್ರ

ಗೋಕಾಕ:ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ : ಶಾಸಕ ಬಾಲಚಂದ್ರ 

ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ : ಶಾಸಕ ಬಾಲಚಂದ್ರ

ಗೋಕಾಕ ಡಿ 1: ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಬಲವರ್ಧನೆಗೆ ಶ್ರಮಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಕುಲಗೋಡ ಗ್ರಾಮದಲ್ಲಿ ಗುರುವಾರ ಸಂಜೆ ಬಲಭೀಮ ದೇವಸ್ಥಾನದ ಆವರಣದಲ್ಲಿ ಜರುಗಿದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ತಿಳಿಸಿದರು.
2018 ರ ಎಪ್ರೀಲ್-ಮೇ ತಿಂಗಳಲ್ಲಿ ಜರುಗುವ ಸಾರ್ವತ್ರಿಕ ಚುನಾವಣೆಯಲ್ಲಿ ನನ್ನ ಗೆಲುವು ಶತಸಿದ್ಧ. ಯಾರು ಎಷ್ಟೇ ಪ್ರಯತ್ನಿಸಿದರೂ ಅವರು ಮೊದಲು ತಮ್ಮ ಠೇವಣಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಕಳೆದ 13 ವರ್ಷಗಳಿಂದ ಅರಭಾವಿ ಕ್ಷೇತ್ರದ ಸರ್ವಾಂಗೀಣ ಏಳ್ಗೆಗೆ ಶ್ರಮಿಸಿದ್ದೇನೆ. ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದೇನೆ. ಎಲ್ಲ ವರ್ಗಗಳ ಹಿತರಕ್ಷಣೆಗೆ ಯಾವುದೇ ಜಾತಿ-ಮತ-ಪಂಥಗಳನ್ನು ಮಾಡದೇ ಸರ್ವರ ಏಳ್ಗೆಗೆ ಹಗಲಿರುಳು ದುಡಿಯುತ್ತಿದ್ದೇನೆ. ಇಷ್ಟಾಗಿಯೂ ಕ್ಷೇತ್ರದ ಪ್ರಗತಿ ಕಾರ್ಯಗಳನ್ನು ಬಯಸದ ಕೆಲವರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದು, ಅಂತಹ ಯಾವುದೇ ವದಂತಿಗಳಿಗೆ ಕಾರ್ಯಕರ್ತರು ಕಿವಿಗೊಡದೆ ಪಕ್ಷದ ಏಳ್ಗೆಗೆ ಹಾಗೂ ಸಂಘಟನೆಗೆ ಹೆಚ್ಚಿನ ಒತ್ತು ನೀಡುವಂತೆ ಕೋರಿದರು.
ಜಿಆರ್‍ಬಿಸಿ ಕುಲಗೋಡ ವಿತರಣಾ ಕಾಲುವೆಯ ಹಳ್ಳಿಗಳಾದ ಲಕ್ಷ್ಮೇಶ್ವರ, ಹೊನಕುಪ್ಪಿ, ಸಿದ್ಧಾಪೂರಹಟ್ಟಿ, ಭೈರನಟ್ಟಿ, ಹೊಸಟ್ಟಿ, ಸುಣಧೋಳಿ, ಕುಲಗೋಡ ಗ್ರಾಮಗಳ ರೈತರಿಗೆ ಕಳೆದ 15 ವರ್ಷಗಳಿಂದ ನೀರು ತಲುಪುತ್ತಿರಲಿಲ್ಲ. ಈಗ ಈ ಎಲ್ಲ ಟೇಲ್‍ಎಂಡ್ ರೈತರಿಗೆ ನೀರು ಮುಟ್ಟಿಸುವಲ್ಲಿ ನಮ್ಮ ಕಾರ್ಯಕರ್ತರು ಯಶಸ್ವಿಯಾಗಿರುವುದರಿಂದ, ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಕರ್ತವ್ಯದಲ್ಲಿ ಗೈರು ಹಾಜರಾಗುವ ಕೆಲ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಪಡಿತರ ಚೀಟಿಯ ಸಮಸ್ಯೆ ಎದುರಾಗಿದ್ದು ಅದನ್ನು ನಿವಾರಿಸುವ ಭರವಸೆ ವ್ಯಕ್ತಪಡಿಸಿದರು.
ಸತ್ಕಾರ : ಗೋಕಾಕ ತಾಲೂಕನ್ನು ವಿಂಗಡಿಸಿ ಮೂಡಲಗಿ ಹೊಸ ತಾಲೂಕು ಕೇಂದ್ರವನ್ನಾಗಿ ಮಾಡಿಸುವಲ್ಲಿ ಯಶಸ್ವಿಯಾದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸ್ಥಳೀಯ ಸಾಯಿ ಸೇವಾ ಸಮೀತಿ ಹಾಗೂ ಗ್ರಾಮಸ್ಥರು ಸತ್ಕರಿಸಿದರು.
ಗೋಕಾಕ ಟಿಎಪಿಸಿಎಂಎಸ್ ನಿರ್ದೇಶಕ ಅಶೋಕ ನಾಯಿಕ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಶಂಕರಗೌಡ ಪಾಟೀಲ, ತಾಪಂ ಸದಸ್ಯ ಸದಾಶಿವ ದುರಗನ್ನವರ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಸುಭಾಸ ವಂಟಗೋಡಿ, ಎಪಿಎಂಸಿ ನಿರ್ದೇಶಕರಾದ ಮಾರುತಿ ಹರಿಜನ, ರೇವಣ್ಣಾ ಕನಕಿಕೋಡಿ, ರಾಜು ಕೊಪ್ಪದ, ರಾಜು ಯಡಹಳ್ಳಿ, ಪುಟ್ಟಣ್ಣ ಪೂಜೇರಿ, ಈರಣ್ಣಾ ಜಾಲಿಬೇರಿ, ಮಹಾದೇವ ನಾಡಗೌಡ, ಸದಾಶಿವ ನಾಯಿಕ, ಕೃಷ್ಣಪ್ಪ ನಾಯಿಕ, ಜಗದೀಶ ನಾಯಿಕ, ಮುರಿಗೆಪ್ಪ ಯಕ್ಷಂಬಿ, ಗಿರೀಶ ಹಳ್ಳೂರ, ಬಸು ನಾಯಿಕ, ಪ್ರಕಾಶ ಹಿರೇಮೇತ್ರಿ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts: