RNI NO. KARKAN/2006/27779|Monday, December 23, 2024
You are here: Home » breaking news » ಮೂಡಲಗಿ:ಬಯಲು ಶೌಚಾಲಯ ಮುಕ್ತಗೊಳಿಸಲು ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ : ಶಾಸಕ ಬಾಲಚಂದ್ರ

ಮೂಡಲಗಿ:ಬಯಲು ಶೌಚಾಲಯ ಮುಕ್ತಗೊಳಿಸಲು ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ : ಶಾಸಕ ಬಾಲಚಂದ್ರ 

ಬಯಲು ಶೌಚಾಲಯ ಮುಕ್ತಗೊಳಿಸಲು ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ : ಶಾಸಕ ಬಾಲಚಂದ್ರ
ಮೂಡಲಗಿ ಡಿ 2: ಬಯಲು ಶೌಚಾಲಯ ಮುಕ್ತಗೊಳಿಸಲು ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಪ್ರತಿ ಕುಟುಂಬಗಳು ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ಜನೇವರಿ ತಿಂಗಳೊಳಗೆ ಯಾದವಾಡ ಗ್ರಾಮದಲ್ಲಿ 100 ಶೌಚಾಲಯಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸಮೀಪದ ಯಾದವಾಡ(ಕೊಪದಟ್ಟಿ) ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಅರಭಾವಿ ಕ್ಷೇತ್ರದಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಅನುದಾನದಲ್ಲಿ ಎನ್‍ಜಿಓ ಮೂಲಕ ಶೌಚಾಲಯಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ 15 ಸಾವಿರ ರೂ. ಹಾಗೂ ಇತರೇ ಬಿಪಿಎಲ್ ಕುಟುಂಬಗಳಿಗೆ 12 ಸಾವಿರ ರೂ.ಗಳನ್ನು ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಜೊತೆಗೆ ಅರಭಾವಿ ಮತಕ್ಷೇತ್ರದಲ್ಲಿ ನಿರ್ಮಾಣ ಮಾಡಲಾಗುವ ಬಿಪಿಎಲ್ ಕುಟುಂಬಗಳ ಪ್ರತಿ ಶೌಚಾಲಯಗಳಿಗೆ ವೈಯಕ್ತಿಕವಾಗಿ ತಲಾ 3000 ರೂ.ಗಳನ್ನು ಧನಸಹಾಯ ಮಾಡುತ್ತೇನೆ. ಹೆಣ್ಣು ಮಕ್ಕಳ ಗೌರವ, ಸ್ವಾಭಿಮಾನ ಹಾಗೂ ಸಮಾನತೆಯ ದೃಷ್ಟಿಯಿಂದ ಶೌಚಾಲಯಗಳ ನಿರ್ಮಾಣಕ್ಕೆ ಮುಂದಾಗಿದ್ದು, ಕುರಣಿಯ ವಿವೇಕಾನಂದ ಸೌಹಾರ್ದ ಸಹಕಾರಿಯ ಸಹಕಾರದಿಂದ ಈ ಎಲ್ಲ ಶೌಚಾಲಯಗಳು ಅರಭಾವಿ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳಲಿವೆ ಎಂದು ಹೇಳಿದರು.
ಹಿಡಕಲ್ ಜಲಾಶಯದಿಂದ ಈಗಾಗಲೇ 9.5 ಟಿಎಂಸಿ ನೀರನ್ನು ಜಿಆರ್‍ಬಿಸಿ, ಜಿಎಲ್‍ಬಿಸಿ ಹಾಗೂ ಸಿಬಿಸಿ ಕಾಲುವೆಗಳಿಗೆ ಡಿ.10 ರವರೆಗೆ ಹರಿಸಲಾಗುತ್ತಿದೆ. ಈಗಾಗಲೇ ನೀರು ಯಾದವಾಡ ಭಾಗದಲ್ಲಿ ಕಾಲುವೆಗಳ ಟೇಲ್‍ಎಂಡ್‍ವರೆಗೆ ಹರಿಯುತ್ತಿದೆ. ನೀರಿಗೆ ಹೆಚ್ಚಿನ ಮಹತ್ವ ನೀಡಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕು. ಕೃಷಿ ಚಟುವಟಿಕೆಗಳಿಗೆ ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಕೋರಿದರು.
ಕೊಪದಟ್ಟಿ-ಕಾಮನಕಟ್ಟಿ-ಗಿರಿಸಾಗರ-ಯಾದವಾಡ ಗ್ರಾಮಗಳ ಕಾಂಕ್ರೀಟ ರಸ್ತೆ ಕಾಮಗಾರಿಗಾಗಿ ಪಿಎಂಜಿಎಸ್‍ವಾಯ್ ಯೋಜನೆಯಡಿ ಕೋಟಿ ರೂ. ಮಂಜೂರಾಗಿದೆ. ಯಾದವಾಡ ಗ್ರಾಮಕ್ಕೆ ಕುಡಿಯುವ ನೀರಿಗಾಗಿ 1.95 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಯಾದವಾಡ ಗ್ರಾಮದ ಹರಿಜನ ಕೇರಿಯಲ್ಲಿ ಕುಡಿಯುವ ನೀರಿನ ಪೈಪಲೈನ್ ಸಲುವಾಗಿ 40 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಕೊಪದಟ್ಟಿ ಜಲಸಂಗ್ರಹಾಲಯ 38 ಲಕ್ಷ ರೂ, ಯಾದವಾಡ-ತಿಮ್ಮಾಪೂರ ಒಳಗಿನ ರಸ್ತೆ ದುರಸ್ತಿಗಾಗಿ ಕಾಡಾದಿಂದ 10 ಲಕ್ಷ ರೂ. ಮಂಜೂರಾಗಿದೆ. ಅಲ್ಲದೇ 75 ಲಕ್ಷ ರೂ. ವೆಚ್ಚದ ಗ್ರಾಮ ವಿಕಾಸ ಯೋಜನೆಯಡಿ ಕೊಪದಟ್ಟಿ ಗ್ರಾಮದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.
ಜಿಪಂ ಸದಸ್ಯ ಗೋವಿಂದ ಕೊಪ್ಪದ, ಯಾದವಾಡ ಗ್ರಾಪಂ ಅಧ್ಯಕ್ಷ ಯಲ್ಲಪ್ಪಗೌಡ ನ್ಯಾಮಗೌಡರ, ತಾಪಂ ಸದಸ್ಯ ಸದಾಶಿವ ದುರಗನ್ನವರ, ಮುಖಂಡರಾದ ಬಿ.ಎಚ್. ಪಾಟೀಲ, ಪರ್ವತಗೌಡ ಪಾಟೀಲ, ಲಕ್ಷ್ಮಣ ಪಾಟೀಲ(ಯರಗಟ್ಟಿ), ಅಶೋಕ ನಾಯಿಕ, ಬೀರಪ್ಪ ಮುಗಳಖೋಡ, ಎಂ.ಎಂ. ಪಾಟೀಲ, ಬಸು ಕೇರಿ, ಹಣಮಂತ ಹುಣಸಿಕಟ್ಟಿ, ರಾಜು ಕಲ್ಯಾಣಿ, ಬಸು ಹಿಡಕಲ್, ಶ್ರೀಶೈಲ ಢವಳೇಶ್ವರ, ಹನೀಪ ರಕೀಪದಾರ, ಶ್ರೀನಿವಾಸ ಸಿದ್ಧಾಪೂರ, ಧರೆಪ್ಪ ಮುಧೋಳ, ರಾಜುಗೌಡ ಪಾಟೀಲ, ರಾಜೇಸಾಬ ಖೆಮಲಾಪೂರ, ಬಸು ಭೂತಾಳಿ, ಕಲ್ಲಪ್ಪ ಗಾಣಿಗೇರ, ಮುಂತಾದವರು ಉಪಸ್ಥಿತರಿದ್ದರು.

Related posts: