ಘಟಪ್ರಭಾ:ಅರಭಾವಿ ಮತಕ್ಷೇತ್ರದ ಜನರನ್ನು ಪಡೆದಿರುವುದು ನನ್ನ ಭಾಗ್ಯ : ಮಾಜಿ ಸಚಿವ ಬಾಲಚಂದ್ರ
ಅರಭಾವಿ ಮತಕ್ಷೇತ್ರದ ಜನರನ್ನು ಪಡೆದಿರುವುದು ನನ್ನ ಭಾಗ್ಯ : ಮಾಜಿ ಸಚಿವ ಬಾಲಚಂದ್ರ
ಘಟಪ್ರಭಾ ಡಿ 3: ಅರಭಾವಿ ಮತಕ್ಷೇತ್ರದ ಜನರನ್ನು ಪಡೆದಿರುವುದು ನನ್ನ ಭಾಗ್ಯ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ಕಲ್ಲೋಳಿ ಪಟ್ಟಣದಲ್ಲಿ ಮಾರುತಿ ದೇವರ ದರ್ಶನ ಪಡೆದು ಮಾತನಾಡುತ್ತಿದ್ದ ಅವರು, ಅರಭಾವಿ ಕ್ಷೇತ್ರದ ಜನರು ನಂಬಿಕೆ, ಪ್ರೀತಿ-ವಿಶ್ವಾಸಕ್ಕೆ ಅರ್ಹರು. ಇಂತಹ ಜನರು ಎಲ್ಲಿಯೂ ಸಿಗುವುದಿಲ್ಲ ಎಂದು ತಿಳಿಸಿದರು.
ಎಲ್ಲರೂ ಹೇಳುತ್ತಿರುತ್ತಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಂತಹ ಶಾಸಕರು ಸಿಕ್ಕಿರುವುದು ನಿಮ್ಮ ಪುಣ್ಯವೆಂದು ಸಾಕಷ್ಟು ಶರಣರು, ಬುದ್ಧಿಜೀವಿಗಳು ಹೇಳಿಕೊಳ್ಳುತ್ತಾರೆ. ಆದರೆ ನಾನೇ ಪುಣ್ಯವಂತ. ಇಂತಹ ಜನರು ನನಗೆ ಪ್ರತಿ ಸಂದರ್ಭದಲ್ಲೂ ಆಶೀರ್ವಾದ ಮಾಡುತ್ತಿರುತ್ತಾರೆ. ಇಂದು ನಾನು ಶಾಸಕನಾಗಿ, ಸಚಿವನಾಗಿ ಜನಸೇವೆ ಮಾಡಿದ್ದೇನೆಂದರೆ ಅದಕ್ಕೆ ಕಾರಣ ನಮ್ಮ ಜನರು. ಜನರೇ ನನಗೆ ದೊಡ್ಡ ಶಕ್ತಿ ಎಂದು ಹೇಳಿದರು.
ಕಲ್ಲೋಳಿ ಪಟ್ಟಣದ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅಭಿವೃದ್ಧಿಪರ ಕೆಲಸಗಳಿಗೆ ಸದಾ ಸಿದ್ಧನಾಗಿರುವೆ. ಅರಭಾವಿ ಮತಕ್ಷೇತ್ರದ ಸರ್ವಾಂಗೀಣ ವಿಕಾಸವೇ ನನ್ನ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆಗೆ 4 ತಿಂಗಳು ಬಾಕಿ ಇದ್ದು, ಈಗಿನಿಂದಲೇ ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಭೇಟಿ ನೀಡುತ್ತಿದ್ದೇನೆ. ನಿಮ್ಮಲ್ಲಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಒಂದಾಗಿ-ಒಗ್ಗಟ್ಟಾಗಿ ಮುಂದಿನ ಚುನಾವಣೆಗೆ ಕಾರ್ಯಕರ್ತರು ಈಗಿಂದಲೆ ಸನ್ನದ್ಧರಾಗುವಂತೆ ಕೋರಿಕೊಂಡರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮಾರುತಿ ದೇವಸ್ಥಾನದಲ್ಲಿ ಅರ್ಚಕರು ಸತ್ಕರಿಸಿದರು.
ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಸುಭಾಸ ಕುರಬೇಟ, ರಾವಸಾಬ ಬೆಳಕೂಡ, ಪ್ರಭಾಶುಗರ ನಿರ್ದೇಶಕ ಮಹಾಂತೇಶ ಕಪ್ಪಲಗುದ್ದಿ, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲಪ್ಪ ಹೆಬ್ಬಾಳ, ಅಶೋಕ ಮಕ್ಕಳಗೇರಿ, ಬಸು ದಾಸನವರ, ದತ್ತು ಕಲಾಲ, ಭಗವಂತ ಪತ್ತಾರ, ಶಿವಾನಂದ ಹೆಬ್ಬಾಳ, ಪಟ್ಟಣ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.