ಮೂಡಲಗಿ:ನಾಗನೂರ ಪಟ್ಟಣದ ಅಭಿವೃದ್ಧಿಗೆ 20 ಕೋಟಿ ರೂ. : ಶಾಸಕ ಬಾಲಚಂದ್ರ
ನಾಗನೂರ ಪಟ್ಟಣದ ಅಭಿವೃದ್ಧಿಗೆ 20 ಕೋಟಿ ರೂ. : ಶಾಸಕ ಬಾಲಚಂದ್ರ
ಮೂಡಲಗಿ ಡಿ 5: ನಾಗನೂರ ಪಟ್ಟಣದ ಅಭಿವೃದ್ಧಿಗೆ ಒಟ್ಟು 20 ಕೋಟಿ ರೂ. ಮೊತ್ತದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸಮೀಪದ ನಾಗನೂರ ಪಟ್ಟಣದಲ್ಲಿ ಸೋಮವಾರ ರಾತ್ರಿ ಪ.ಪಂ ಕಾರ್ಯಾಲಯದ ಆವರಣದಲ್ಲಿ ಜರುಗಿದ 2017-18ನೇ ಸಾಲಿನ ಒಟ್ಟು 9.32 ಕೋಟಿ ರೂ ವೆಚ್ಚದಲ್ಲಿ ಎಸ್‍ಎಫ್‍ಸಿ ಮುಕ್ತ ನಿಧಿ ಅನುದಾನದಡಿ ಗ್ಯಾಸ್, ಲ್ಯಾಪಟಾಪ್, ತ್ರಿಚಕ್ರ ವಾಹನ ಹಾಗೂ ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ಎಸ್‍ಎಫ್‍ಸಿ ಮುಕ್ತ ನಿಧಿ ಅನುದಾನದಡಿ 1.63 ಕೋಟಿ ರೂ, ಹಾಗೂ 14ನೇ ಹಣಕಾಸು ಯೋಜನೆಯಡಿ 1.51 ಕೋಟಿ ರೂ, ಹಾಗೂ 18.57 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ. ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ಹಾಗೂ ಎಸ್‍ಸಿಪಿ.ಟಿಎಸ್‍ಪಿ ಯೋಜನೆಯಡಿ 1 ಕೋಟಿ ರೂ, ಯೋಜನೆಯ ಕಾಮಗಾರಿಗಳು ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ. ತಿಂಗಳೊಳಗೆ ಕಾಮಗಾರಿಗಳು ಆರಂಭವಾಗಲಿವೆ ಎಂದು ಹೇಳಿದರು.
ಈಗಾಗಲೇ ನಾಗನೂರ ಪಟ್ಟಣದಲ್ಲಿ 9.73 ಕೋಟಿ ರೂ. ವೆಚ್ಚದ 110 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರವು ಕಾರ್ಯಾರಂಭ ಮಾಡಿದೆ. ಇದರಿಂದ ನಾಗನೂರ, ಹುಣಶ್ಯಾಳ ಪಿಜಿ, ಕಲ್ಲೋಳಿ, ತುಕ್ಕಾನಟ್ಟಿ, ಮೂಡಲಗಿ(ಗ್ರಾ) ಸೇರಿದಂತೆ 14 ಗ್ರಾಮಗಳ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗಲಿದೆ. ಜೊತೆಗೆ ರೈತರ ಪಂಪಸೆಟ್‍ಗಳಿಗೆ ಗುಣಮಟ್ಟದ ವಿದ್ಯುತ್ ನೀಡುವಲ್ಲಿ ಈ ವಿತರಣಾ ಕೇಂದ್ರ ಉಪಯುಕ್ತವಾಗಲಿದೆ ಎಂದು ಹೇಳಿದರು. ಜೊತೆಗೆ ಬಡ ರೋಗಿಗಳ ಚಿಕಿತ್ಸೆಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗಿದೆ. ನಾಗನೂರ ಪಟ್ಟಣಕ್ಕೆ ಒಟ್ಟು 20 ಕೋಟಿ ರೂ.ಗಳ ಅನುದಾನದಡಿ ಅಭಿವೃದ್ಧಿ ಕಾರ್ಯಗಳನ್ನು ತೆಗೆದುಕೊಂಡಿರುವುದಾಗಿ ಅವರು ಹೇಳಿದರು.
ರಾಜ್ಯದಲ್ಲಿಯೇ ಅತೀ ಹೆಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪಡೆದಿರುವ ಗೋಕಾಕ ತಾಲೂಕಿನಲ್ಲಿ ಒಟ್ಟು 15 ವಸತಿ ಶಾಲೆಗಳನ್ನು ಆರಂಭಿಸಲಾಗಿದ್ದು, ಅದರಲ್ಲಿ ಅರಭಾವಿ ಕ್ಷೇತ್ರದಲ್ಲಿ 7 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿಯೇ ಇದೊಂದು ದಾಖಲೆ ಎಂದು ವಿವರಿಸಿದ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿರುವುದಾಗಿ ತಿಳಿಸಿದರು.
ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳು ದುರಸ್ತಿಯಲ್ಲಿದ್ದು, ಇವುಗಳ ದುರಸ್ತಿಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ದುರಸ್ತಿ ನಂತರ ಧುಪದಾಳದಿಂದ ಜಮಖಂಡಿವರೆಗೆ ನೀರು ವೇಗವಾಗಿ ತಲುಪಲಿಕ್ಕೆ ಅನುಕೂಲವಾಗಲಿದೆ. ಜತ್ತ-ಜಾಂಬೋಟಿ(ರಾ.ಹೆ.31) ರಸ್ತೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಪಟ್ಟಣದ ವ್ಯಾಪ್ತಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ 2 ಮೀ. ಅಗಲೀಕರಣ ಕಡಿಮೆಗೊಳಿಸಿ ರಸ್ತೆ ಸುಧಾರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಪ.ಪಂ ಅಧ್ಯಕ್ಷೆ ಶೋಭಾ ಬಬಲಿ ವಹಿಸಿದ್ದರು.
ರಾಜ್ಯ ಸಹಕಾರಿ ಮಾರಾಟ ಮಂಡಳದ ಉಪಾಧ್ಯಕ್ಷ ಬಸಗೌಡ ಪಾಟೀಲ, ಪ.ಪಂ ಉಪಾಧ್ಯಕ್ಷೆ ನಾಗವ್ವ ಪೂಜೇರಿ, ಎಪಿಎಂಸಿ ನಿರ್ದೇಶಕ ಕೆಂಚಪ್ಪ ಸಕ್ರೆಪ್ಪಗೋಳ, ಪಿಕೆಪಿಎಸ್ ಅಧ್ಯಕ್ಷ ಶಂಕರ ಹೊಸಮನಿ, ಭಗೀರಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರು ಬೆಳಗಲಿ, ಯಲ್ಲಪ್ಪ ಹೊರಟ್ಟಿ, ಸತ್ತೆಪ್ಪ ಕರವಾಡಿ, ಭೀಮಪ್ಪ ಹಳಿಗೌಡರ, ಮಹ್ಮದ ಅತ್ತಾರ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಸುಭಾಸ ಪಡದಲ್ಲಿ, ಮುಖ್ಯಾಧಿಕಾರಿ ಬಿ.ಆರ್. ಕಮತಗಿ, ಮುಂತಾದವರು ಉಪಸ್ಥಿತರಿದ್ದರು.
ಪರಸಪ್ಪ ಬಬಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಮನಪ್ಪ ಕರಬನ್ನವರ ಕಾರ್ಯಕ್ರಮ ನಿರೂಪಿಸಿದರು.