RNI NO. KARKAN/2006/27779|Friday, November 22, 2024
You are here: Home » breaking news » ಮೂಡಲಗಿ:ಕುಲಗೋಡ ವಿತರಣಾ ಕಾಲುವೆಯ ರೈತರಿಗೆ ನೀರು ತಲುಪಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ:ಕುಲಗೋಡ ವಿತರಣಾ ಕಾಲುವೆಯ ರೈತರಿಗೆ ನೀರು ತಲುಪಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ : ಶಾಸಕ ಬಾಲಚಂದ್ರ ಜಾರಕಿಹೊಳಿ 

ಕುಲಗೋಡ ವಿತರಣಾ ಕಾಲುವೆಯ ರೈತರಿಗೆ ನೀರು ತಲುಪಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ ಡಿ 7: ಅಧಿಕಾರಿಗಳ ಬೇಜವಾಬ್ದಾರಿಯಿಂದ ಕುಲಗೋಡ ವಿತರಣಾ ಕಾಲುವೆಯ ರೈತರಿಗೆ ಇಲ್ಲಿಯವರೆಗೂ ನೀರು ತಲುಪುತ್ತಿರಲಿಲ್ಲ. ಈಗಾಗಲೇ ಕಾಲುವೆ ನಿರ್ಮಾಣದ ಪ್ರಸ್ತಾವನೆ ಸರ್ಕಾರದ ಪರಿಶೀಲನೆ ಹಂತದಲ್ಲಿದ್ದು ಇದನ್ನು ಅನುಷ್ಠಾನ ಮಾಡಲು ಶಕ್ತಿಮೀರಿ ಪ್ರಯತ್ನಿಸುತ್ತೇನೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಗೆ ಸಮೀಪದ ಲಕ್ಷ್ಮೇಶ್ವರ ಗ್ರಾಮದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಘಟಪ್ರಭಾ ಬಲದಂಡೆ ಕಾಲುವೆ ಯೋಜನೆಯ ಕುಲಗೋಡ ವಿತರಣಾ ಕಾಲುವೆಯ 1 ರಿಂದ 10 ಕಿ.ಮೀ.ವರೆಗಿನ ಕಾಲುವೆ ನಿರ್ಮಾಣ ಕಾಮಗಾರಿಗೆ 24.40 ಕೋಟಿ ರೂ. ವೆಚ್ಚದ ಪ್ರಸ್ತಾವನೆ ನಿಗಮದ ಪರಿಶೀಲನೆಯಲ್ಲಿದೆ ಎಂದು ಹೇಳಿದರು.
ಕುಲಗೋಡ ಟೇಲ್‍ಎಂಡ್ ಭಾಗದ ರೈತರಿಗೆ ನೀರು ಶಾಶ್ವತವಾಗಿ ಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಈಗಾಗಲೇ ಹಿಡಕಲ್ ಜಲಾಶಯದಿಂದ ನೀರು ಬಿಡುತ್ತಿರುವುದರಿಂದ ಕಳೆದ ಒಂದು ದಶಕದಿಂದ ಕುಲಗೋಡ ವಿತರಣಾ ಕಾಲುವೆ ಟೇಲ್‍ಎಂಡ್ ಭಾಗದ ಲಕ್ಷ್ಮೇಶ್ವರ, ಕುಲಗೋಡ, ಹೊನಕುಪ್ಪಿ, ಸಿದ್ಧಾಪೂರಹಟ್ಟಿ, ಸುಣಧೋಳಿ, ಭೈರನಟ್ಟಿ, ಹೊಸಟ್ಟಿ ಗ್ರಾಮಗಳ ರೈತರಿಗೆ ನೀರು ತಲುಪಿದೆ. ಅಧಿಕಾರಿಗಳ ನಿರ್ಲಕ್ಷದಿಂದಾಗಿ ಇಲ್ಲಿಯವರೆಗೆ ರೈತರ ಜಮೀನುಗಳಿಗೆ ನೀರು ಕನಸಿನ ಮಾತಾಗಿತ್ತು. ಅಧಿಕಾರಿಗಳು ನೀಡುತ್ತಿದ್ದ ತಪ್ಪು ಮಾಹಿತಿಯಿಂದಾಗಿ ಕಾಲುವೆ ಕೊನೆ ಭಾಗದ ರೈತರು ನೀರಿನಿಂದ ವಂಚಿತರಾಗಿದ್ದರು ಎಂದು ಅಧಿಕಾರಿಗಳ ವಿರುದ್ಧ ಶಾಸಕರು ಹರಿಹಾಯ್ದರು.
ಜಿಆರ್‍ಬಿಸಿ ಕಾಲುವೆಗೆ ಡಿಸೆಂಬರ 10 ರವರೆಗೆ ನೀರು ಹರಿಯಲಿದೆ. ಮುಂದೆ ಬಿಡಲಾಗುವ ನೀರನ್ನು ಕುಲಗೋಡ ಟೇಲ್‍ಎಂಡ್ ರೈತರಿಗೆ ಮುಟ್ಟಿಸುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ರೈತರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸುತ್ತೇನೆ. 24.40 ಕೋಟಿ ರೂ. ವೆಚ್ಚದ ಈ ಕಾಮಗಾರಿಯನ್ನು ಅನುಷ್ಠಾನ ಮಾಡಿ ರೈತರ ಹಿತ ಕಾಪಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇನೆಂದು ಅವರು ಹೇಳಿದರು.
ಕುಲಗೋಡ ವಿತರಣಾ ಕಾಲುವೆಯ ಟೇಲ್‍ಎಂಡ್ ರೈತರಿಗೆ ನೀರು ತಲುಪಿಸುವಲ್ಲಿ ಪ್ರಯತ್ನಿಸಿದ ಜಿಪಂ ಸದಸ್ಯ ಗೋವಿಂದ ಕೊಪ್ಪದ, ತಾಪಂ ಸದಸ್ಯ ರಮೇಶ ಗಡಗಿ ಅವರನ್ನು ಶಾಸಕರು ಅಭಿನಂದಿಸಿ, ಸತ್ಕರಿಸಿದರು.
ಕುಲಗೋಡದ ಬಿ.ಎಚ್.ಪಾಟೀಲ, ಸುಣಧೋಳಿ ಗ್ರಾಪಂ ಅಧ್ಯಕ್ಷ ಭೀಮಪ್ಪ ಹೂವಣ್ಣವರ, ಎಪಿಎಂಸಿ ನಿರ್ದೇಶಕ ರೇವಣ್ಣಾ ಕನಕಿಕೋಡಿ, ಎಚ್.ಕೆ. ಅಲಕನೂರ ಪರಮೇಶ್ವರ ಹೆಗಡೆ, ಡಾ.ಸಿದ್ಧಾಪೂರ, ರಾಘವೇಂದ್ರ ಸೂರಣ್ಣವರ, ಸುರೇಶ ಸಣ್ಣಕ್ಕಿ, ಶಿವಲಿಂಗ ಬಳಿಗಾರ, ಮಕ್ತುಂಸಾಬ ಮೋಮಿನ, ಬಿ.ಕೆ. ಗಂಗರಡ್ಡಿ, ಸಂಜು ಗಡಗಿ, ಕುಲಗೋಡ ಟೇಲ್‍ಎಂಡ್ ಭಾಗದ ರೈತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Related posts: