ಗೋಕಾಕ:ರೈತರಿಂದ ನೇರವಾಗಿ ಗೋವಿನ ಜೋಳವನ್ನು ಖರೀದಿಸುವಂತೆ ಆಗ್ರಹ : ರೈತ ಸಂಘ , ಹಸಿರು ಸೇನೆಯ ಕಾರ್ಯಕರ್ತರಿಂದ ಪ್ರತಿಭಟನೆ
ರೈತರಿಂದ ನೇರವಾಗಿ ಗೋವಿನ ಜೋಳವನ್ನು ಖರೀದಿಸುವಂತೆ ಆಗ್ರಹ : ರೈತ ಸಂಘ , ಹಸಿರು ಸೇನೆಯ ಕಾರ್ಯಕರ್ತರಿಂದ ಪ್ರತಿಭಟನೆ
ಗೋಕಾಕ ಡಿ 7: ರಾಕೇಟ್ ರಿದ್ದಿ ಸಿದ್ದಿ ಗ್ಲಾಸ್ಕೋ ಕಾರ್ಖಾನೆಯವರು ರೈತರಿಂದ ನೇರವಾಗಿ ಗೋವಿನ ಜೋಳವನ್ನು ಖರೀದಿಸಬೇಕೆಂದು ಆಗ್ರಹಿಸಿ ಬುಧವಾರದಂದು ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಎಪಿಎಮ್‍ಸಿಯಲ್ಲಿ ಸೇರಿದ ರೈತ ಸಂಘದ ಕಾರ್ಯಕರ್ತರು, ಎಪಿಎಮ್‍ಸಿ ಅಧ್ಯಕ್ಷರು ಹಾಗೂ ಸಿಬ್ಬಂದಿಯವರೊಂದಿಗೆ ಚರ್ಚೆ ನಡೆಸಿ ಅಲ್ಲಿಂದ ನೇರವಾಗಿ ನಗರದ ಹೊರವಲಯದಲ್ಲಿರುವ ರಾಕೇಟ್ ರಿದ್ದಿ-ಸಿದ್ದಿ ಕಾರ್ಖಾನೆಗೆ ಆಗಮಿಸಿ ಅಲ್ಲಿ ಪ್ರತಿಭಟನೆ ನಡೆಸಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಖಾನೆ ಮಾರ್ಕೆಟಿಂಗ್ ಮಾನೇಜರ್ ರವಿಕುಮಾರ ಹಾಗೂ ಹಿರಿಯ ವ್ಯವಸ್ಥಾಪಕ ಪ್ರಕಾಶ ಅವರೊಂದಿಗೆ ರೈತ ಮುಖಂಡರು ಚರ್ಚೆ ನಡೆಸಿ, ರೈತರಿಂದ ನೇರವಾಗಿ ಗೋವಿನ ಜೋಳವನ್ನು ಖರೀದಿಸುವಂತೆ ಆಗ್ರಹಿಸಿದರು.
ರೈತ ಮುಖಂಡರಾದ ಚೂನಪ್ಪ ಪೂಜೇರಿ ಹಾಗೂ ಗಣಪತಿ ಈಳಿಗೇರ ಮಾತನಾಡಿ ಸತತ ಬರಗಾಲದಿಂದ ಕಂಗೆಟ್ಟಿರುವ ರೈತರು ಇಂದು ಗೋವಿನ ಜೋಳದ ಬೆಲೆ ಕುಸಿತದಿಂದ ಮತ್ತಷ್ಟು ಹೈರಾಣರಾಗಿದ್ದಾರೆ. ಮಧ್ಯವರ್ತಿಗಳ ಹಾವಳಿಯಿಂದ 1 ಕ್ವೀಂಟಲ್‍ಗೆ ಸುಮಾರು 200 ರೂಗಳ ಕಡಿಮೆ ದರ ದೊರಕುತ್ತಿದೆ. ಇದರಿಂದಾಗಿ ರೈತರು ಇನ್ನಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಕೂಡಲೇ ಕಾರ್ಖಾನೆಯವರು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರಲ್ಲದೇ ಸರ್ಕಾರ ಕೂಡಲೇ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು. ಖರೀದಿ ಕೇಂದ್ರಗಳನ್ನು ತೆರೆಯುವಂತೆ ಒತ್ತಾಯಿಸಲು ಇದೇ ದಿ. 8 ರಂದು ರೈತ ಸಂಘದಿಂದ ರಾಜ್ಯಾಯಾಧ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಕಾರ್ಖಾನೆ ಮಾರ್ಕೆಟಿಂಗ್ ಮಾನೇಜರ್ ರವಿಕುಮಾರ ಮಾತನಾಡಿ ರೈತರ ಏಳ್ಗೆಗಾಗಿ ಶ್ರಮಿಸಲು ಕಾರ್ಖಾನೆ ಸದಾ ಸಿದ್ದವಿದ್ದು ರೈತರು ಗುಣಮಟ್ಟದ ಗೋವಿನ ಜೋಳವನ್ನು ಕಾರ್ಖಾನೆಗೆ ಪೂರೈಸಬೇಕು. ಮಾರುಕಟ್ಟೆಯ ದರದಂತೆ ರೈತರಿಗೆ ಹಣವನ್ನು ನೀಡಲಾಗುವುದು ಎಂದು ತಿಳಿಸಿದರು.
ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ ಮಾತನಾಡಿ ರೈತರು ದಳ್ಳಾಳಿಗಳ ಮೊರೆಹೋಗದೆ ಯೋಗ್ಯ ಬೆಲೆ ನೀಡುವಲ್ಲಿ ತಾವು ಬೆಳೆದ ಬೆಳೆಗಳನ್ನು ಮಾರಬೇಕು. ಗೋವಿನ ಜೋಳವನ್ನು ಕ್ವೀಂಟಲ್ ಕೇವಲ 2 ವಜಾ ಮಾಡಲಾಗತ್ತದೆ. ಹೆಚ್ಚಿಗೆ ವಜಾ ಮಾಡಿದ್ದ ದಳ್ಳಾಳಿಗಳ ಕಂಡು ಬಂದಲ್ಲಿ ಲೈಸನ್ಸ ರದ್ದು ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ, ಮುಖಂಡರಾದ ಮಂಜುನಾಥ ಪೂಜೇರಿ, ಗೋಪಾಲ ಕುಕನೂರ, ಪ್ರದೀಪ ಪೂಜಾರಿ, ಪ್ರಕಾಶ ಹಾಲನ್ನವರ, ಮುತ್ತೆಪ್ಪ ಬಾಗನ್ನವರ, ಮುತ್ತೆಪ್ಪ ಕುರಬರ, ಸಿದ್ರಾಮ ಪೂಜೇರಿ, ಚಿಕ್ಕು ಕೊಂಗನೊಳ್ಳಿ, ಮಾರುತಿ ನಾಯಿಕ, ಶಿವಪುತ್ರ ಪತ್ತಾರ, ಸಿದ್ದಲಿಂಗ ಪೂಜೇರಿ, ಮಹಾದೇವ ಗೋಡೆರ, ರಾಜು ಹೂಲಿಕಟ್ಟಿ, ಎಪಿಎಮ್‍ಸಿ ಕಾರ್ಯದರ್ಶಿ ಬಿ.ಆರ್. ಜಾಲಿಬೇರಿ, ಸಿಬ್ಬಂದಿಯವರಾದ ರಾಜು ದೊಡಮನಿ, ಎಸ್.ಸಿ, ಕುರಬೇಟ ಇದ್ದರು.