ಗೋಕಾಕ:ಗಣಿಗಾರಿಕೆ ಸ್ಥಗಿತಗೊಳಿಸಬೇಕೆಂದು ಶಿಂದಿಕುರಬೇಟ , ಧುಪದಾಳ ಗ್ರಾಮಸ್ಥರ ಆಗ್ರಹ
ಗಣಿಗಾರಿಕೆ ಸ್ಥಗಿತಗೊಳಿಸಬೇಕೆಂದು ಶಿಂದಿಕುರಬೇಟ , ಧುಪದಾಳ ಗ್ರಾಮಸ್ಥರ ಆಗ್ರಹ
ಗೋಕಾಕ ಡಿ 8: ತಾಲೂಕಿನ ಶಿಂದಿಕುರಬೇಟ ಹಾಗೂ ಧುಪದಾಳ ಗ್ರಾಮಗಳ ಮಧ್ಯೆ ಇರುವ ಸರ್ಕಾರಿ ಭೂಮಿ ಧುಪದಾಳ ಗ್ರಾಮದ ಸರ್ವೆ ನಂ.173/1ಎಕ್ಕೆ ಸಂಬಂಧಿಸಿದ ಖುಲ್ಲಾ ಭೂಮಿಯನ್ನು ಸರ್ಕಾರದವರು ಲೀಜ್ ಆಧಾರದ ಮೇಲೆ ಗಣಿಗಾರಿಕೆ ನಡೆಸಲು ನೀಡಿದ ಪ್ರಯುಕ್ತ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು ಗಣಿಗಾರಿಕೆ ಸ್ಥಗಿತಗೊಳಿಸಬೇಕೆಂದು ಶಿಂದಿಕುರಬೇಟ ಹಾಗೂ ಧುಪದಾಳ ಗ್ರಾಮಗಳ ತೋಟದ ಜನರು ಶುಕ್ರವಾರದಂದು ತಹಶೀಲದಾರರಿಗೆ ಮನವಿ ಸಲ್ಲಿಸಿದರು.
ಶಿಂದಿಕುರಬೇಟ ಹಾಗೂ ಧುಪದಾಳ ಗ್ರಾಮಗಳ ಸುತ್ತಮುತ್ತ ನೂರಾರು ಕುಟುಂಬಗಳು ವಾಸ ಮಾಡುತ್ತಿದ್ದು ಗಣಿಗಾರಿಕೆ ಮಾಡುತ್ತಿರುವುದರಿಂದ ಪರಿಸರ ಹಾಳಾಗುತ್ತಿದ್ದು ಗಣಿ ಧೂಳಿನಿಂದ ಜನರಿಗೆ ಮಾರಕ ರೋಗಗಳು ಹರಡುತ್ತಿವೆ. ಅಲ್ಲದೇ ಜಮೀನದಲ್ಲಿ ಬೆಳೆದ ಬೆಳೆಗಳು ಸರಿಯಾಗಿ ಫಸಲು ನೀಡದೇ ಬೆಳೆ ಹಾನಿಯಾಗುತ್ತಿದೆ. ಗಣಿಗಾರಿಕಗಾಗಿ ಸಿಡಿಮದ್ದು (ಬ್ಲಾಸ್ಟಿಂಗ್) ಮಾಡುವುದರಿಂದ ಮನೆಗಳು ಬಿರುಕುಗೊಂಡಿದ್ದು ಮನೆಗಳು ಬೀಳುವ ಸಾಧ್ಯತೆ ಇದ್ದು ಜನರಿಗೆ ಪ್ರಾಣದ ಭಯ ಉಂಟಾಗಿದೆ. ಇದರಿಂದ ಅರಣ್ಯ ಸಂಪತ್ತು ನಾಶವಾಗುವದರ ಜೊತೆಗೆ ಪರಿಸರವನ್ನು ಹಾಳು ಮಾಡುತ್ತಿದೆ. ಅಗಷ್ಟ 2011ರಲ್ಲಿ ಜನವಸತಿ ಇರುವ ಸ್ಥಳದಲ್ಲಿ ಗಣಿಗಾರಿಕೆ ಮಾಡುವುದನ್ನು ನಿರ್ಬಂಧ ಮಾಡುವಂತೆ ಸರ್ಕಾರಕ್ಕೆ ಉಚ್ಚ ನ್ಯಾಯಾಲಯವು ಆದೇಶ ನೀಡಿದೆ. ಆದರೂ ಕೂಡಾ ಗಣಿಗಾರಿಕೆ ಮಾಡುವ ಮಾಲೀಕರು ಯಾವುದನ್ನು ಲೆಕ್ಕಿಸದೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಗಣಿಗಾರಿಕೆ ಬಂದ್ ಮಾಡಿ ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಗ್ರಾಮಸ್ಥರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಅಡಿವೆಪ್ಪ ಹಳ್ಳಿ, ನಾಗರಾಜ ಮಲ್ಲಾಪೂರೆ, ಕಾಡಪ್ಪ ಸನದಿ, ಲಗಮಣ್ಣಾ ಪೂಜೇರಿ, ಶಿವಾಜಿ ಸಾಳುಂಕೆ, ವಿನಾಯಕ ಸಾಳುಂಕೆ, ಸಿದ್ದಪ್ಪ ಗುಡಾಳೆ, ದುಂಡಪ್ಪ ಬೆಳಗಲಿ, ಲಕ್ಷ್ಮಣ ಕೊತಕೊನ್ನಿ, ಶಿದ್ರಾಮ ಹಳ್ಳಿ, ಮಂಜುನಾಥ ಮಾಳವ್ವಗೋಳ, ಶಿವಪ್ಪ ಶೆಂಡೂರಿ, ಬಸವರಾಜ ಬೆಳಗಾವಿ, ಬಸವಣ್ಣಿ ಕಾಳಪ್ಪಗೋಳ, ಸತ್ತೆಪ್ಪ ಶೆಂಡೂರಿ, ಮಾಯಪ್ಪ ಮಲ್ಲಾಪೂರೆ ಸೇರಿದಂತೆ ಅನೇಕರು ಇದ್ದರು.