RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ : ಅರವಳಿಕೆ ತಜ್ಞರ ಕೊರತೆಯಿಂದ ಬಳಲುತ್ತಿರುವ ಗೋಕಾಕಿನ ಸರ್ಕಾರಿ ಆಸ್ಪತ್ರೆ

ಗೋಕಾಕ : ಅರವಳಿಕೆ ತಜ್ಞರ ಕೊರತೆಯಿಂದ ಬಳಲುತ್ತಿರುವ ಗೋಕಾಕಿನ ಸರ್ಕಾರಿ ಆಸ್ಪತ್ರೆ 

  • ಅರವಳಿಕೆ ತಜ್ಞರ ಕೊರತೆಯಿಂದ ಬಳಲುತ್ತಿರುವ ಗೋಕಾಕಿನ ಸರ್ಕಾರಿ ಆಸ್ಪತ್ರೆ
    ವಿಶೇಷ ವರದಿ : ಸಾಧಿಕ ಎಂ. ಹಲ್ಯಾಳ, (ಸಂಪಾದಕರು) ಗೋಕಾಕ.
    ಗೋಕಾಕ ಮೇ 15: ಬೆಳಗಾವಿ ನಗರವನ್ನು ಬಿಟ್ಟರೆ ಅಷ್ಟೇ ವೇಗವಾಗಿ ಬೆಳೆಯುತ್ತಿರುವ ಗೋಕಾಕ ನಗರವು ಹಲವು ಕಾರಣಗಳಿಂದ ಪ್ರಸಿದ್ದಿ ಪಡೆದಿದೆ. ಪ್ರತಿನಿತ್ಯ ಆರೋಗ್ಯ ತಪಾಸಣೆಗಾಗಿ ಗೋಕಾಕ ನಗರವನ್ನು ಅರಸಿ ಸಾವಿರಾರು ಜನ ಗೋಕಾಕ ನಗರದ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಹೀಗೆ ಬಂದ ರೋಗಿಗಳಲ್ಲಿ ಭಾಗಶಃ ರೋಗಿಗಳು ಶಸ್ತ್ರ ಚಿಕಿತ್ಸೆ ಒಳಗಾಗಿರುತ್ತಾರೆ. ಅದರಲ್ಲಿ ಪ್ರಮುಖವಾಗಿ ಹರಣಿಯಾ, ಅಪೆಂಡಿಕ್ಸ್, ಸಿಜರಿನ್, ಇಕ್ಟೋಮಿಯಾ, ಎಲುವು-ಕೀಲು ಸಂಬಂಧ ಶಸ್ತ್ರ ಚಿಕಿತ್ಸೆಗಳಿಗೆ ಸರಕಾರಿ ಆಸ್ಪತ್ರೆಯನ್ನು ಅವಲಿಂಬಿಸಿದ ರೋಗಿಗಳಿಗೆ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞ ವೈದ್ಯರ ಕೊರತೆ ಕಾಡುತ್ತಿದೆ. ಇದರಿಂದ ಈ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ರೋಗಿಗಳು ಭಾರಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈಗ ಪ್ರಸ್ತುತ ಕರಿಗಾರ ಎಂಬ 70 ರ ಹರೆಯ ಹಿರಿಯ ಜೀವಿ ಅರವಳಿಕೆ ನೀಡಲು ಖಾಸಗಿಯಾಗಿ ಲಭ್ಯವಿದ್ದರೂ ಸಹ ಇವರು ಸಿಜರಿನ್ ನಂತಹ ಶಸ್ತ್ರ ಚಿಕಿತ್ಸೆಗಳಿಗೆ ಮಾತ್ರ ಸಿಮೀತವಾದಂತಾಗಿದೆ. ನಿಯೋಜನೆ ಮೇರೆಗೆ ಇದ್ದ ಯರಗಣವಿ ಎಂಬುವವರ ನಿಯೋಜನೆ ರದ್ದಾಗಿದ್ದರಿಂದ ಇವರ ಜಾಗಕ್ಕೆ ಸಂಕೇಶ್ವರ ಸರ್ಕಾರಿ ಆಸ್ಪತ್ರೆಯಿಂದ ದೊಡ್ಡಮನಿ ಎಂಬುವವರನ್ನು ಇಲಾಖೆಯು ನಿಯೋಜನೆ ಮೇರೆಗೆ ಗೋಕಾಕಕ್ಕೆ ಕಳುಹಿಸಿಕೊಟ್ಟಿದೆ. ಹೀಗೆ ನಿಯೋಜನೆ ಮೇರೆಗೆ ಬಂದ ಅರವಳಿಕೆ ತಜ್ಞ ದೊಡಮನಿಯವರು ವಾರದ ಮೂರು ದಿನ ಗೋಕಾಕ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ ಆದರೆ ಇವರು ಬಂದು ಸುಮಾರು 2 ತಿಂಗಳಾದರೂ ಸಹ ಇಲ್ಲಿ ಹರಣಿಯ, ಅಪೆಂಡಿಕ್ಸ್ ನಂತಹ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಜನ ಪರದಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಇಬ್ಬರು ರೋಗಿಗಳು ಹರಣಿಯ ಸಂಬಂಧ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಗೋಕಾಕ ಆಸ್ಪತ್ರೆಯಲ್ಲಿ ದಾಖಲಾಗಿ ಶಸ್ತ್ರ ಚಿಕಿತ್ಸೆ ಮಾಡುವಂತೆ ಮುಖ್ಯ ವೈದ್ಯಾಧಿಕಾರಿ ಆರ್.ಎಸ್. ಬೆಣಚಿನಮರಡಿ ಯವರನ್ನು ಅಂಗಲಾಚಿದರೂ ಸಹ ಅರವಳಿಕೆ ತಜ್ಞರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಾರದೇ ಇರುವುದರಿಂದ ರೋಗಿಗಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದ್ದು ಅನಿವಾರ್ಯವಾಗಿ ದೂರದ ಬೆಳಗಾವಿ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಆಸ್ಪತ್ರೆಯಲ್ಲಿ ಭೇಟಿ ನೀಡಿ ಮುಖ್ಯ ವೈದ್ಯಾಧಿಕಾರಿ ಬೆಣಚಿನಮರಡಿಯವರಿಗೆ ವಿಚಾರಿಸಿದರೆ ಅರವಳಿಕೆ ತಜ್ಞರ ಕೊರತೆ ಇರುವುದರಿಂದ ಭಾರಿ ಶಸ್ತ್ರ ಚಿಕಿತ್ಸೆಗಳನ್ನು ವೇಳೆಗೆ ಸರಿಯಾಗಿ ಆಗುತ್ತಿಲ್ಲ. ಈಗಿನ ಅರವಳಿಕೆ ತಜ್ಞರು ವಾರದಲ್ಲಿ 3 ದಿನ ಮೂರು ಇಲ್ಲಿಗೆ ಬರುತ್ತಾರೆ. ಇದರಿಂದ ರೋಗಿಗಳಿಗೆ ಕೊಂಚ ತೊಂದರೆಯಾಗುತ್ತಿದೆ. ಈಗಾಗಲೇ ಸರ್ಕಾರಕ್ಕೆ ಖಾಯಂ ಅವರಳಿಕೆ ತಜ್ಞರನ್ನು ನೇಮಿಸಬೇಕೆಂದು ಪ್ರಸ್ತಾವಣೆ ಕಳುಹಿಸಿಕೊಡಲಾಗಿದೆ. ಅತೀ ಶೀಘ್ರವಾಗಿ ಪ್ರಸ್ತಾವನೆಗೆ ಅನುಮತಿ ದೊರೆಯುತ್ತದೆ ಅವರು ಬಂದ ನಂತರ ಎಲ್ಲ ಸರಿ ಹೋಗುತ್ತದೆ ಎಂಬ ಹಾರೈಕೆ ಉತ್ತರ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ಒಟ್ಟಾರೆಯಾಗಿ 100 ಹಾಸಿಗೆವುಳ್ಳ ಸುಸಜ್ಜಿತ ಆಸ್ಪತ್ರೆ ಇದ್ದರೂ ಸಹ ವೈದ್ಯರ ಕೊರತೆಯಿಂದ ಗೋಕಾಕ ತಾಲೂಕಾ ಆಸ್ಪತ್ರೆ ಬಡವವಾಗುತ್ತಿದೆ. ಸದ್ಯದಲ್ಲಿಯೇ ಇನ್ನೊಂದು ಬೃಹತ್ 100 ಹಾಸಿಗೆಯುಳ್ಳ ಹೊಸ ಕಟ್ಟಡದ ಕಾರ್ಯ ಮುಗಿದು ಉದ್ಘಾಟನೆ ಹಂತಕ್ಕೆ ಬಂದು ತಲುಪಿದೆ. ಆದರೆ ಎಲ್ಲಾ ವಿಭಾಗದ ತಜ್ಞ ವೈದ್ಯರನ್ನು ನೇಮಿಸಿ ಕಟ್ಟಡವನ್ನು ಉದ್ಘಾಟಿಸಿದರೆ ಅದಕ್ಕೊಂದು ಅರ್ಥ ಬರಬಹುದೇನೋ ! ಎಂಬ ಚರ್ಚೆಗಳು ನಗರದಲ್ಲಿ ನಡೆಯುತ್ತಿವೆ.

ಉದ್ಘಾಟನೆಗೆ ಕಾದು ಕುಳಿತಿರುವ ಹೊಸಆಸ್ಪತ್ರೆ

ಪ್ರಸ್ತುತ ಎಲುವು-ಕೀಲು ತಜ್ಞ, ಕಣ್ಣಿನ ತಜ್ಞರು, ಕಿವಿ-ಮೂಗು, ಗಂಟಲು, ಹೃದಯರೋಗ ತಜ್ಞರು ಮಾತ್ರ ಈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಣ್ಣಿನ ತಜ್ಞ ವೈದ್ಯರು ಇಲ್ಲಿ ಇದ್ದು ಇಲ್ಲದಂತಾಗಿದೆ. ಚಿಕ್ಕ ಮಕ್ಕಳ ತಜ್ಞ ವೈದ್ಯರ ಹುದ್ದೆಯಂತೂ ವರ್ಷಗಳು ಕಳೆದರೂ ಸಹ ಖಾಲಿ ಉಳಿದಿದೆ. ಇನ್ನೂ ಹಲವು ವಿಭಾಗಗಳ ತಜ್ಞರ ಈ ಆಸ್ಪತ್ರೆಗೆ ಬೇಕಾಗಿದ್ದಾರೆ. ಇದರ ಬಗ್ಗೆ ಆರೋಗ್ಯ ಇಲಾಖೆ, ಸ್ಥಳೀಯ ಶಾಸಕ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಮೇಶ ಜಾರಕಿಹೊಳಿ ಯವರು ಮುತುವರ್ಜಿವಹಿಸಿ ತುರ್ತಾಗಿ ಅರವಳಿಕೆ ತಜ್ಞರನ್ನು ಖಾಯಂಯಾಗಿ ನೇಮಿಸಲು ದಿಟ್ಟ ಕ್ರಮ ತೆಗೆದುಕೊಂಡು ಅರವಳಿಕೆ ತಜ್ಞ ವೈದ್ಯರ ಕೊರತೆಯಿಂದ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವುದರಿಂದ ವಂಚಿತವಾಗಿ ಊರೂರು ಅಲೆಯುತ್ತಿರುವ ರೋಗಿಗಳ ಹಿತ ಕಾಪಾಡಬೇಕೆಂದು ಸಾರ್ವಜನಿಕರ, ಬಡರೋಗಿಗಳ ಒತ್ತಾಸೆಯಾಗಿದೆ. ಇದಕ್ಕೆ ಇಲಾಖೆಯವರು ಯಾವ ರೀತಿ ಸ್ಪಂಧಿಸುತ್ತಾರೋ ಕಾದು ನೋಡಬೇಕು.

ಶಿಲ್ಲೆದಾರ, ಹರಣಿಯಾ ಪೀಡಿತ ಬಡ ರೋಗಿ :

ಕಳೆದ ಹಲವು ದಿನಗಳಿಂದ ಹರಣಿ ಗಂಟಿನಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಗೋಕಾಕ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಸುಮಾರು 15 ದಿನಗಳ ಕಾಲ ದಾಖಲಾಗಿದ್ದರೂ ಸಹ ಯಾವೊಬ್ಬರು ನನ್ನ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಲಿಲ್ಲ. ಅರವಳಿಕೆ ತಜ್ಞರು ಇಲ್ಲದಿರುದರಿಂದ ಕೊಂಚ ತಡವಾಗುತ್ತೆ. ಬೇರೆ ಕಡೆ ಹೋಗಿ ಮಾಡಿಸಿಕೊಳ್ಳಿ ಎಂದು ಮುಖ್ಯ ವೈದ್ಯಾಧಿಕಾರಿ ಆರ್.ಎಸ್. ಬೆಣಚಿನಮರಡಿ 15 ದಿನಗಳ ನಂತರ ಮರಳಿ ಕಳಿಸಿರುತ್ತಾರೆ.

ಬಸವರಾಜ ಖಾನಪ್ಪನವರ, ಕರವೇ ಅಧ್ಯಕ್ಷರು ಗೋಕಾಕ ತಾಲೂಕ ಘಟಕ : :

ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞ ವೈದ್ಯರಿಲ್ಲದೇ ಸಾರ್ವಜನಿಕ ಬಡರೋಗಿಗಳು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಕುರಿತು ತಾಲೂಕಾ ವೈದ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂಬರುವ ದಿನಗಳಲ್ಲಿ ಈ ಕುರಿತು ಬೆಳಗಾವಿ ಡಿ.ಎಚ್.ಓ. ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು.

Related posts: