RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಗೋಕಾಕ ಜಿಲ್ಲೆ ರಚನೆಗಾಗಿ ಶಕ್ತಿಮೀರಿ ಪ್ರಯತ್ನಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ

ಗೋಕಾಕ:ಗೋಕಾಕ ಜಿಲ್ಲೆ ರಚನೆಗಾಗಿ ಶಕ್ತಿಮೀರಿ ಪ್ರಯತ್ನಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ 

ಗೋಕಾಕ ಜಿಲ್ಲೆ ರಚನೆಗಾಗಿ ಶಕ್ತಿಮೀರಿ ಪ್ರಯತ್ನಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ

ಗೋಕಾಕ ಡಿ 12 : ಗೋಕಾಕ ಜಿಲ್ಲಾ ರಚನೆ ಸಂಬಂಧ ಹೋರಾಟದ ನೇತೃತ್ವವನ್ನು ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿಕೊಳ್ಳುವಂತೆ ಇಂದಿಲ್ಲಿ ಸಂಪಾದನ ಮಠದಲ್ಲಿ ಸೇರಿದ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಅದರಂತೆ ಜಾರಕಿಹೊಳಿ ಸಹೋದರರ ನಾಯಕತ್ವದಲ್ಲಿ ಹೋರಾಟ ಮಾಡಿದರೆ ಜಿಲ್ಲಾ ರಚನೆಯಾಗುವುದು ಶತಸಿದ್ಧ ಎಂಬ ಒಂದು ಸಾಲಿನ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ಕುರಿತಂತೆ ಹೋರಾಟದ ರೂಪುರೇಷೆಗಳನ್ನು ಹಾಕಿಕೊಳ್ಳಲಾಗಿದ್ದು, ಜಿಲ್ಲಾ ರಚನೆಯನ್ನು ಬೆಂಬಲಿಸುವವರು ಪಕ್ಷಾತೀತವಾಗಿ ಒಂದೇ ವೇದಿಕೆಗೆ ಬಂದು ಸ್ವಾಮೀಜಿಯವರ ನೇತೃತ್ವದಲ್ಲಿ ಹೋರಾಟದಲ್ಲಿ ಭಾಗಿಯಾಗಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಬಿ.ಆರ್.ಪಾಟೀಲ, ಬಸಗೌಡ ಪಾಟೀಲ(ಕಲ್ಲೋಳಿ), ಎಂ.ಆರ್.ಭೋವಿ, ರಾಮಣ್ಣಾ ಹುಕ್ಕೇರಿ, ಡಾ.ಜಿ.ಆರ್. ಸೂರ್ಯವಂಶಿ, ಎಸ್.ಎ. ಕೋತವಾಲ, ಎಸ್.ಜಿ. ಪಾಟೀಲ, ಸಿದ್ದಲಿಂಗ ದಳವಾಯಿ, ಎಲ್.ಎನ್. ಬೂದಿಗೊಪ್ಪ, ಮುನ್ನಾ ಭಾಗವಾನ, ಕಿರಣ ಡಮಾಮಗರ, ವಿಷ್ಣು ಲಾತೂರ, ಕೃಷ್ಣಾ ಹುಣಶ್ಯಾಳ ಮುಂತಾದವರು ಮಾತನಾಡಿ, ಗೋಕಾಕ ಜಿಲ್ಲಾ ಹೋರಾಟದ ಸಂಬಂಧ ನ್ಯಾಯವಾದಿಗಳ ಸಂಘವು ನೇತೃತ್ವ ವಹಿಸಿಕೊಂಡಿದ್ದು, ಸಂಘದ ಅಧ್ಯಕ್ಷರು ಪಕ್ಷವೊಂದರ ಪದಾಧಿಕಾರಿಯಾಗಿರುವುದರಿಂದ, ಅವರ ನೇತೃತ್ವದಲ್ಲಿ ಹೋರಾಟವನ್ನು ಮಾಡಲಿಕ್ಕೆ ತಕರಾರು ಇದೆ. ಈ ಹೋರಾಟ ಪಕ್ಷಾತೀತವಾಗಿ ನಡೆಯಬೇಕಾಗಿರುವುದರಿಂದ ತಾಲೂಕಿನ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟವನ್ನು ಯಶಸ್ವಿಯಾಗಿ ಮಾಡಬೇಕಾಗಿದೆ. ಸ್ವಾಮೀಜಿಗಳು ಹಾಗೂ ಸಚಿವ ರಮೇಶ ಜಾರಕಿಹೊಳಿ, ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಈ ಹೋರಾಟದ ನಾಯಕತ್ವವನ್ನು ವಹಿಸಿಕೊಂಡರೆ ಹೋರಾಟಕ್ಕೆ ಆನೆ ಬಲ ಬಂದಂತಾಗುತ್ತದೆ ಎಂದು ಹೇಳಿದರು. ವಕೀಲರ ಸಂಘಕ್ಕೆ ಆಮಂತ್ರಣ ನೀಡಿದರೂ ಈ ಸಭೆಗೆ ಉದ್ಧೇಶಪೂರ್ವಕವಾಗಿಯೇ ಗೈರ ಹಾಜರಾಗಿದ್ದಾರೆ. ಇದರ ತಾತ್ಪರ್ಯವಾದರೂ ಏನು? ಎಂದು ಪ್ರಶ್ನಿಸಿದ ಅವರು, ಸ್ವಾಮೀಜಿಯವರ ಹಾಗೂ ಜಾರಕಿಹೊಳಿ ಸಹೋದರರ ಸಾರಥ್ಯದಲ್ಲಿಯೇ ಈ ಹೋರಾಟ ನಡೆಯಬೇಕೆಂದು ಪಟ್ಟು ಹಿಡಿದರು. ವಿನಾಕಾರಣ ಜಿಲ್ಲಾ ರಚನೆಗೆ ಜಾರಕಿಹೊಳಿ ಸಹೋದರರು ಅಡ್ಡಿಯಾಗುತ್ತಿದ್ದಾರೆಂಬ ಅಪಪ್ರಚಾರ ಬಿಂಬಿಸುತ್ತಿರುವುದು ಸರಿಯಲ್ಲ. ಇವರು ಮನಸ್ಸು ಮಾಡಿದರೆ ಗೋಕಾಕ ಜಿಲ್ಲೆಯಾಗುವುದು ಖಚಿತ. ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸಿ ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆಂದು ದೂರಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಗೋಕಾಕ ಜಿಲ್ಲೆ ಸಂಬಂಧ ಎಲ್ಲ ಜನಪ್ರತಿನಿಧಿಗಳು ಒಂದೇ ವೇದಿಕೆಯಡಿ ಬರಬೇಕು. ರೂಪುರೇಷೆಗಳನ್ನು ತಯಾರಿಸಬೇಕು. ಗೋಕಾಕ ಜಿಲ್ಲೆ ರಚನೆಗಾಗಿ ಶಕ್ತಿಮೀರಿ ಪ್ರಯತ್ನಿಸಲಾಗುವುದು. ಕೆಲವರು ಜಾರಕಿಹೊಳಿಯವರಿಗೆ ಜಿಲ್ಲೆಯಾಗುವುದು ಬೇಕಾಗಿಲ್ಲ. ಜಿಲ್ಲೆಯಾದರೆ ಜಿಲ್ಲಾ ಮಟ್ಟದ ಕಛೇರಿಗಳು ಕಾರ್ಯಾರಂಭವಾಗುತ್ತವೆ. ಇದರಿಂದ ನಮಗೆ ಹೊಡೆತ ಬೀಳುತ್ತದೆ. ಜಿಲ್ಲೆಗೆ ನಾವೇ ವಿರೋಧಿಸುತ್ತಿದ್ದೇವೆ ಎಂಬ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಜಿಲ್ಲೆಯಾದರೆ ನಮಗೇ ಆಡಳಿತಾತ್ಮಕವಾಗಿ ಅನುಕೂಲವಾಗಲಿದೆ. ಡಿಸಿ, ಎಸ್‍ಪಿ ಕಛೇರಿಗಳು ಬಂದರೆ ನಮಗೇಕೆ ತೊಂದರೆಯಾಗುತ್ತದೆ ಎಂದು ಪ್ರಶ್ನಿಸಿದರು.
ಡಿ. 21 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಗೋಕಾಕ ನಗರಕ್ಕೆ ಭೇಟಿ ನೀಡಲಿದ್ದು, ಎಲ್ಲರೂ ಸೇರಿ ಸಿದ್ಧರಾಮಯ್ಯ ಅವರಿಗೆ ಗೋಕಾಕ ಜಿಲ್ಲಾ ರಚನೆ ಸಂಬಂಧ ಮನವಿ ಸಲ್ಲಿಸೋಣ. ನಮ್ಮ ಹಕ್ಕೊತ್ತಾಯ ಮಂಡಿಸೋಣ. ಸಿಎಂ ಭೇಟಿ ನಂತರ ಮುಂದಿನ ಹೋರಾಟದ ರೂಪುರೇಷೆಗಳನ್ನು ಹಾಕಿಕೊಳ್ಳೋಣ. ಈ ಹೋರಾಟದ ನೇತೃತ್ವವನ್ನು ಶೂನ್ಯ ಸಂಪಾದನ ಮಠದ ಸ್ವಾಮೀಜಿಗಳು ವಹಿಸಿಕೊಂಡರೆ ಹೋರಾಟದಲ್ಲಿ ಸಕ್ರೀಯವಾಗಿ ಭಾಗಿಯಾಗುತ್ತೇನೆಂದು ಹೇಳಿದರು.

ಇಲ್ಲಿಯ ಶೂನ್ಯ ಸಂಪಾದನ ಮಠದಲ್ಲಿ ಮಂಗಳವಾರದಂದು ಕರೆಯಲಾಗಿದ್ದ ನಿಯೋಜಿತ ಗೋಕಾಕ ಜಿಲ್ಲಾ ರಚನೆ ಚಾಲನಾ ಸಮೀತಿಯ ಸಭೆಯಲ್ಲಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಉಪಸ್ಥಿತರಿದ್ದರು

ಜಿಲ್ಲಾ ಹೋರಾಟದಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಶಾಂತಿಯುತವಾಗಿ ಹೋರಾಟ ಮಾಡಿ ಜಿಲ್ಲಾ ಮಾಡೋಣ. ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಗೆ ಯಾರೂ ಹಾನಿ ಮಾಡಬೇಡಿ. ಪಕ್ಷಾತೀತವಾಗಿ ಜಿಲ್ಲಾ ಹೋರಾಟ ಕೈಗೊಳ್ಳೋಣ. ಎಲ್ಲ ಪಕ್ಷದವರನ್ನು ಸೇರಿಸಿಕೊಂಡು ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟಕ್ಕೆ ಅಣಿಯಾಗೋಣ ಎಂದು ಹೇಳಿದರು.
ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ತಾಲೂಕಿನ ಜನತೆಯ ಕೋರಿಕೆಯಂತೆ ಈ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳುತ್ತೇನೆ. ಜಿಲ್ಲೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧನಿದ್ದೇನೆ. ಜಾರಕಿಹೊಳಿ ಸಹೋದರರು ಮನಸ್ಸು ಮಾಡಿದರೆ ಗೋಕಾಕ ಜಿಲ್ಲೆಯಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ಹುಣಶ್ಯಾಳ ಪಿಜಿಯ ನಿಜಗುಣ ದೇವರು, ಸುಣಧೋಳಿಯ ಶಿವಾನಂದ ಸ್ವಾಮಿಗಳು, ಮುನ್ಯಾಳದ ಶಿವಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳು, ಮನ್ನಿಕೇರಿಯ ವಿಜಯಸಿದ್ಧೇಶ್ವರ ಸ್ವಾಮಿಗಳು, ಚೌಕಿಮಠದ ಪ್ರಭುಲಿಂಗ ಮಹಾಸ್ವಾಮಿಗಳು, ಯರಗುದ್ರಿಯ ಸಂಗಮೇಶ ದೇವರು, ಬಟಕುರ್ಕಿಯ ಬಸವಲಿಂಗ ಸ್ವಾಮಿಗಳು, ಹೂಲಿಕಟ್ಟಿಯ ಕುಮಾರ ದೇವರು, ಬಸಳಿಗುಂದಿಯ ಸದಾನಂದ ಸ್ವಾಮಿಗಳು, ಮಮದಾಪೂರದ ಚರಮೂರ್ತೆಶ್ವರ ಸ್ವಾಮಿಗಳು, ಕಪರಟ್ಟಿಯ ಬಸವರಾಜ ಹಿರೇಮಠ, ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ಮೂಡಲಗಿ ಪುರಸಭೆ ಉಪಾಧ್ಯಕ್ಷ ರವಿ ಸೋನವಾಲ್ಕರ, ಪ್ರಭಾಶುಗರ ಅಧ್ಯಕ್ಷ ಅಶೋಕ ಪಾಟೀಲ, ನಿಂಗಪ್ಪ ಫಿರೋಜಿ, ಪ್ರಕಾಶ ಕರನಿಂಗ, ಅನಂತ ನಾಯಿಕ, ಅಪ್ಪಯ್ಯ ಬಡ್ನಿಂಗಗೋಳ, ನಜೀರ ಶೇಖ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಆನಂದ ಗೋಟಡಕಿ, ಡಿ.ಎಂ. ದಳವಾಯಿ, ಗೋವಿಂದ ಕೊಪ್ಪದ, ಶಿವಲಿಂಗ ಪೂಜೇರಿ, ರಾಮಣ್ಣಾ ಮಹಾರಡ್ಡಿ, ಅಶೋಕ ಪರುಶೆಟ್ಟಿ, ಮಹಾದೇವ ತುಕ್ಕಾನಟ್ಟಿ, ಶಿದ್ಲಿಂಗ ಕಂಬಳಿ, ಕಲ್ಲಪ್ಪ ಚೌಕಶಿ, ಬಸವಂತ ಕಮತಿ, ವಿಠ್ಠಲ ಪಾಟೀಲ, ಹನಮಂತ ತೇರದಾಳ, ಮುತ್ತೆಪ್ಪ ಕುಳ್ಳೂರ, ಅಶೋಕ ಖಂಡ್ರಟ್ಟಿ, ಶಿವನಗೌಡ ಪಾಟೀಲ, ಎ.ಟಿ. ಗಿರಡ್ಡಿ, ಸುಭಾಸ ಕುರಬೇಟ, ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ಪರಮೇಶ್ವರ ಹೊಸಮನಿ, ಎಚ್.ಡಿ. ಮುಲ್ಲಾ, ಸುಭಾಸ ಪಾಟೀಲ, ಪರಶುರಾಮ ಭಗತ, ಲಕ್ಷ್ಮಣ ತೆಳಗಡೆ, ಹಿರಿಯ ಪತ್ರಕರ್ತ ಎಸ್.ಬಿ. ಧಾರವಾಡಕರ, ತಾಪಂ ಸದಸ್ಯರು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಗಳ ಸದಸ್ಯರು, ಸಹಕಾರಿಗಳು, ವರ್ತಕರು, ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಒಮ್ಮತದ ನಿರ್ಣಯವಾದರೆ ಡಿ. 15 ರಂದು ನಡೆಯಲಿರುವ ಗೋಕಾಕ ಬಂದ್‍ಗೆ ಬೆಂಬಲ ನೀಡಲಾಗುವುದು. ಒಂದು ವೇಳೆ ನಮ್ಮಲ್ಲಿ ಗೊಂದಲ ಮುಂದುವರೆದರೆ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಮತ್ತೊಮ್ಮೆ ಜಿಲ್ಲಾ ರಚನೆಗಾಗಿ ಗೋಕಾಕ ಬಂದ್‍ಗೆ ಕರೆ ನೀಡಲಾಗುವುದು ಎಂದು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಅಶೋಕ ಓಸ್ವಾಲ ಕಾರ್ಯಕ್ರಮ ನಿರೂಪಿಸಿದರು.

Related posts: