ಬೆಳಗಾವಿ:ಕಬ್ಬಿನ ಬಾಕಿ ಬಿಲ್ ಪಾವತಿಸುವಂತೆ ಆಗ್ರಹ : ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಪ್ರತಿಭಟನೆ
ಕಬ್ಬಿನ ಬಾಕಿ ಬಿಲ್ ಪಾವತಿಸುವಂತೆ ಆಗ್ರಹ : ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಪ್ರತಿಭಟನೆ
ಬೆಳಗಾವಿ ಡಿ 20: ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾಲೀಕತ್ವದ ಸೌಭಾಗ್ಯಲಕ್ಷ್ಮೀ ಕಾರ್ಖಾನೆಯಿಂದ ಇನ್ನೂ ‘ಲಕ್ಷ್ಮೀ’ ಸಿಕ್ಕಿಲ್ಲ ಎಂದು ರೈತರು ಬೆಳಗಾವಿಯಲ್ಲಿ ಇಂದು ಪ್ರತಿಭಟನೆ ನಡೆಸಿದರು ಕಳೆದ ಡಿ. 8ರಂದು ಡಿಸಿ ಕಚೇರಿ ಬಳಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಘೇರಾವ್ ಹಾಕಿ ಕಬ್ಬಿನ ಬಾಕಿ ಬಿಲ್ ಪಡೆಯುವ ಭರವಸೆ ಪಡೆದಿದ್ದ ರೈತರು ಈಗ ನಿರಾಶರಾಗಿದ್ದು, ಬಿಲ್ ಗಾಗಿ ಇಂದು ನಿರಶನ ಆರಂಭಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೆಳಿಗ್ಗೆಯಿಂದ ತಡರಾತ್ರಿವರೆಗೆ ಅಂದು ನಡೆಸಿದ್ದ ಹೋರಾಟದಲ್ಲಿ ಜಿಲ್ಲಾಡಳಿತ ಬಾಕಿ ಬಿಲ್ ಕೊಡಿಸುವ ಸ್ಪಷ್ಟ ಭರವಸೆ ನೀಡಿತ್ತು. ಬಾಕಿ ಬಿಲ್ ಬರಬೇಕಾದವರ ಹೆಸರು ಸಹ ಆಕರಿಸಲಾಗಿತ್ತು. ಆದರೆ ಸ್ವತಃ ಸಚಿವರು ಮತ್ತು ಜಿಲ್ಲಾಡಳಿತ ನೀಡಿದ್ದ ಡಿ. 18 ರ ಅವಧಿ ಮುಗಿದಿದ್ದು, ನಿನ್ನೆ ಒಂದು ದಿನ ಕಾಯ್ದು ಇಂದು ನಿರಶನ ಆರಂಭಿಸಿದ್ದೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಬಾಕಿ ಬಿಲ್ ಸ್ಪಷ್ಠತೆ ಸಿಗುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ತಿಳಿಸಿದ್ದ ರೈತರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಮತ್ತು ಡಿಸಿಪಿ ಅಮರನಾಥರೆಡ್ಡಿ ಹಲವು ಬಗೆಯ ಸಮಾಧಾನ ನೀಡಿದ್ದರು.
ಗೋಕಾಕ ತಾಲೂಕು ಹಿರೆನಂದಿಹಳ್ಳಿ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ ನೂರಾರು ರೈತರ ಬಾಕಿ ಬಿಲ್ ಸಂದಾಯವಾಗಬೇಕಿದೆ. ಬರಬೇಕಾದ ಬಿಲ್ ಬಾರದ್ದರಿಂದ ಜೀವನ ತಾಪತ್ರಯ ಆಗಿದೆ ಎಂದು ರೈತರು ಅಹವಾಲು ತಿಳಿಸಿ ಜಿಲ್ಲಾಡಳಿತದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಈ ಬಾರಿ ಕಬ್ಬಿನ ಬಿಲ್ ಸಿಗದಿದ್ದರೆ ಡಿಸಿ ಕಚೇರಿ ಆವರಣದಿಂದ ಏಳುವುದಿಲ್ಲ ಎಂದು ರೈತರು ಸ್ಪಷ್ಠಪಡಿಸಿದ್ದಾರೆ.
ರೈತ ಮುಖಂಡರಾದ ರಾಘವೇಂದ್ರ ನಾಯಕ, ಚೂನಪ್ಪ ಪೂಜೇರಿ, ಅಶೋಕ ಯಮಕನಮರಡಿ, ಎಸ್. ಸೌದಾಗರ ಮತ್ತಿತರರು ಉಪಸ್ಥಿತರಿದ್ದರು