ಗೋಕಾಕ:ಸಮಾಜವನ್ನು ಉತ್ತಮ ಮಾರ್ಗದತ್ತ ಮುನ್ನಡೆಸುವ ಜವಾಬ್ದಾರಿ ಸತ್ಪುರುಷರ ಮೇಲಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ
ಸಮಾಜವನ್ನು ಉತ್ತಮ ಮಾರ್ಗದತ್ತ ಮುನ್ನಡೆಸುವ ಜವಾಬ್ದಾರಿ ಸತ್ಪುರುಷರ ಮೇಲಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ ಡಿ 26 : ಸಮಾಜವು ತಪ್ಪು ಮಾಡಿದಾಗ ಅದನ್ನು ತಿದ್ದಿ-ತೀಡಿ, ಸಮಾಜವನ್ನು ಉತ್ತಮ ಮಾರ್ಗದತ್ತ ಮುನ್ನಡೆಸುವ ಜವಾಬ್ದಾರಿ ಸತ್ಪುರುಷರ ಮೇಲಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಬಳೋಬಾಳ ಗ್ರಾಮದಲ್ಲಿ ಸಿದ್ಧಾರೂಢ ಮಠದ 18ನೇ ಸತ್ಸಂಗ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಸಮಾಜದ ಪರಿವರ್ತನೆಯಲ್ಲಿ ಸಾಧು-ಸಂತರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ನಮ್ಮ ದೇಶವು ಎಲ್ಲ ಜಾತಿ-ಜನಾಂಗ, ಧರ್ಮಗಳನ್ನು ಹೊಂದಿದ್ದರೂ ಆಚಾರದಲ್ಲಿ ಏಕತೆ ಕಾಯ್ದುಕೊಂಡು ಬಂದಿದೆ. ವಿಶಿಷ್ಟವಾದ ಧಾರ್ಮಿಕ ಪರಂಪರೆಯನ್ನು ಹೊಂದಿ ಇಡೀ ವಿಶ್ವಕ್ಕೆ ಭಾರತವು ಧಾರ್ಮಿಕತೆಯ ಮಹತ್ವವನ್ನು ಸಾರಿದೆ. ಇಂತಹ ಭರತ ಪುಣ್ಯ ಭೂಮಿಯಲ್ಲಿ ಹುಟ್ಟಿರುವುದಕ್ಕೆ ನಾವು ಪುಣ್ಯ ಮಾಡಿದ್ದೇವೆಂದು ಭಾರತೀಯ ಸಂಸ್ಕøತಿಯನ್ನು ವಿವರಿಸಿದರು.
ಹಿಡಕಲ್ ಜಲಾಶಯದಲ್ಲಿ ಈಗಾಗಲೇ 34 ಟಿಎಂಸಿ ನೀರು ಸಂಗ್ರಹವಿರುವುದರಿಂದ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ತೊಂದರೆ ತಪ್ಪಿಸಲು ನೀರನ್ನು ಕಾಯ್ದಿರಿಸಿ ರೈತರ ಬೆಳೆಗಳಿಗೆ ಅನುಕೂಲವಾಗುವಂತೆ ಜನೇವರಿ 2ನೇ ವಾರದಲ್ಲಿ ಘಟಪ್ರಭಾ ಎಡದಂಡೆ, ಬಲದಂಡೆ ಹಾಗೂ ಸಿಬಿಸಿ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಹುಣಶ್ಯಾಳ ಪಿಜಿಯ ನಿಜಗುಣ ದೇವರು ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಧಾರ್ಮಿಕ ಕ್ಷೇತ್ರದ ಹರಿಕಾರರು. ಅವರ ಬಳಿ ಯಾರೇ ಹೋದರೂ ಅವರಿಗೆ ಸಹಾಯಹಸ್ತ ನೀಡುವ ಮಹಾನ್ ದಾನಿ. ಇವರೊಬ್ಬ ಕಲಿಯುಗದ ದಾನಶೂರ. ಎಲ್ಲ ಸಮಾಜಗಳ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ ಬಾಲಚಂದ್ರ ಅವರಂತಹ ಶಾಸಕರನ್ನಾಗಿ ಪಡೆದಿರುವುದು ನಮ್ಮೆಲ್ಲರ ಸುದೈವ. ಅಧಿಕಾರ-ಅಂತಸ್ತು ಸಿಕ್ಕಾಗ ಹೆತ್ತವರನ್ನು ದೂರಮಾಡುತ್ತಿರುವ ಇಂದಿನ ದಿನಗಳಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಹೆತ್ತವರು ಇಲ್ಲವಾದರೂ ಅವರ ಸ್ಮರಣೆಗಾಗಿ ಹಲವು ವಿಧಾಯಕ ಕಾರ್ಯಕ್ರಮಗಳನ್ನು ನೆರವೇರಿಸುತ್ತ ತಾಯಿ-ತಂದೆಯ ನೆನಪಿನಲ್ಲಿ ಬದುಕುತ್ತಿರುವ ಇವರೊಬ್ಬ ಆಧುನಿಕ ಶ್ರವಣಕುಮಾರ ಎಂದು ಬಣ್ಣಿಸಿದರು.
ಬೈಲಹೊಂಗಲದ ಮಹಾದೇವ ಸರಸ್ವತಿ ಸ್ವಾಮಿಗಳು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಿಪ್ಪರಗಿಯ ಶಿವರುದ್ರ ಶರಣರು, ಘೋಡಗೇರಿಯ ಮಲ್ಲಯ್ಯ ಸ್ವಾಮಿಗಳು, ಇಳಕಲ್‍ದ ಅನ್ನದಾನೇಶ್ವರ ಸ್ವಾಮಿಗಳು, ಬೈಲಹೊಂಗಲದ ಸದಾಶಿವಾನಂದ ಸ್ವಾಮಿಗಳು, ಬೀರನಗಡ್ಡಿಯ ಶಾಂತಮ್ಮಾ ತಾಯಿ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಿತು.
ಭೀಮಪ್ಪ ಕಲ್ಲೋಳಿ, ಲಕ್ಕಣ್ಣಾ ಕಳಸನ್ನವರ, ಬಸವರಾಜ ಬೆಳವಿ, ಅಪ್ಪಯ್ಯಪ್ಪ ಪಾಟೀಲ, ರಾಮಲಿಂಗ ಕಳಸನ್ನವರ, ಮುದಕಪ್ಪ ಈರೇಶನವರ, ಮುದಕಪ್ಪ ಬೆಳವಿ, ಶಿವಪುತ್ರ ಕಳಸನ್ನವರ, ಸಿದ್ದಯ್ಯಾ ಹೋಳಗಿ, ವಿನೋದ ಪೂಜೇರಿ, ನಿರುಪಾದಿ ರಡ್ಡಿ, ಪ್ರಧಾನಿ ಕಳಸನ್ನವರ, ಲಗಮಣ್ಣಾ ಕಳಸನ್ನವರ, ಶ್ರೀಶೈಲ ಬೆಳವಿ, ಬಸಲಿಂಗಯ್ಯಾ ಹಿರೇಮಠ ಹಾಗೂ ಸಿದ್ಧಾರೂಢ ಮಠದ ಸದ್ಬಕ್ತರು ಉಪಸ್ಥಿತರಿದ್ದರು.