ಘಟಪ್ರಭಾ:ಅರಬಾವಿಯನ್ನು ಮೂಡಲಗಿ ತಾಲೂಕಿಗೆ ಸೇರ್ಪಡೆಗೆ ವಿರೋಧ : ಪ.ಪಂ ವ್ಯಾಪ್ತಿಯ ಎಲ್ಲ 16 ಸದಸ್ಯರು ರಾಜೀನಾಮೆ
ಅರಬಾವಿಯನ್ನು ಮೂಡಲಗಿ ತಾಲೂಕಿಗೆ ಸೇರ್ಪಡೆಗೆ ವಿರೋಧ : ಪ.ಪಂ ವ್ಯಾಪ್ತಿಯ ಎಲ್ಲ 16 ಸದಸ್ಯರು ರಾಜೀನಾಮೆ
ಘಟಪ್ರಭಾ ಡಿ 26 : ನೂತನವಾಗಿ ರಚನೆಗೊಂಡ ಮೂಡಲಗಿ ತಾಲೂಕಿಗೆ ಅರಬಾವಿ ಪ.ಪಂ ವ್ಯಾಪ್ತಿಯ ಹಳ್ಳಿಗಳನ್ನು ಸೇರಿಸಿರುವುದನ್ನು ಖಂಡಿಸಿ ಮಂಗಳವಾರ ಅರಬಾವಿ ಪ.ಪಂ ವ್ಯಾಪ್ತಿಯ ವಿವಿಧ ಸಂಘಟನೆ ಹಾಗೂ ಮಹಿಳೆಯರು ಗ್ರಾಮಸ್ಥರು ಸೇರಿ ಐದನೂರಕ್ಕೂ ಹೆಚ್ಚು ಜನರು ಅರಬಾವಿ ಮಠದಲ್ಲಿ ಸಂಕೇಶ್ವರ ಗೋಕಾಕ ರಾಷ್ಟ್ರೀಯ ಹೆದ್ದಾರಿಯನ್ನು ಎರಡು ಗಂಟೆಗಳಕಾಲ ತಡೆದು ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವವನ್ನು ವಹಿಸಿರುವ ಶಿವಾನಂದ ಸ್ವಾಮಿಗಳು ಮಾತನಾಡಿ, ನಮ್ಮ ಗ್ರಾಮದ ಜನರಿಗೆ ಗೋಕಾಕ ಮೂರು ಕಿ.ಮಿ ಇದೆ ಮೂಡಲಗಿ 28 ಕಿ.ಮಿ ಇದೆ ಎಲ್ಲ ದೃಷ್ಠಿಯಿಂದ ಅನುಕೂಲವಾಗಿರುವ ಗೋಕಾಕನ್ನು ಬಿಟ್ಟು ದೂರದ ಮೂಡಲಗಿಗೆ ಅರಬಾವಿಯನ್ನು ಸೇರಿಸುತ್ತಿರುವುದು ಖಂಡನೀಯವಾಗಿದೆ. ಹಿಂದೆ ಎರಡುಬಾರಿ ನೀಲಿ ನಕಾಶೆ ಮಾಡಿದಾಗ ಸರ್ಕಾರ ಅರಬಾವಿಯನ್ನು ಮೂಡಲಗಿಗೆ ಸೇರಿಸಿಲ್ಲ ಆದರೆ ಈಗ ಹೊಸದಾಗಿ ತಯಾರಾದ ನೀಲಿ ನಕಾಶೆಯನ್ನು ಅಧಿಕಾರಿಗಳು ಯಾರಿಗೆ ತಿಳಿಯದಂತೆ ಮೂಡಲಗಿಗೆ ಸೇರಿಸಿರುವುದು ಖಂಡನೀಯ ಎಂದು ಹೇಳಿದರು.
ಸರ್ಕಾರದ ನಿರ್ಧಾರದಿಂದ ಅರಬಾವಿ ಪ.ಪಂ ವ್ಯಾಪ್ತಿಯ 16 ಸಾವಿರ ಜನಸಂಖ್ಯೆಗೆ ತೊಂದರೆಯಾಗುತ್ತಿದೆ ಎಂದು ಇಲ್ಲಿನ ಪ.ಪಂ ವ್ಯಾಪ್ತಿಯ ಎಲ್ಲ 16 ಸದಸ್ಯರು ರಾಜೀನಾಮೆಯನ್ನು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ನೀಡಿದರು. ಹಾಗೂ ಅರಬಾವಿ ಪ.ಪಂ ಗೋಕಾಕ ತಾಲೂಕಿನಲ್ಲಿ ಉಳಿಯಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಗೋಕಾಕ ತಹಶೀಲ್ದಾರ ಜಿ.ಎಸ್.ಮಾಳಗಿ ಅವರು ಮಾತನಾಡಿ ಮೂಡಲಗಿಗೆ ಅರಬಾವಿಯನ್ನು ಸೇರಿಸಿರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ ಇಲ್ಲಿನ ಜನರ ಹಿತದೃಷ್ಠಿಯಿಂದ ಗೋಕಾಕದಲ್ಲಿ ಅರಬಾವಿ ಉಳಿಯುವಂತೆ ಸರ್ಕಾರಕ್ಕೆ ತಿಳಿಸುತ್ತೇನೆ. ಹಾಗೂ ಈ ಬಗ್ಗೆ ಜಿಲ್ಲಾಧಿಕಾರಿಗಳು, ಸಚಿವರು ಮತ್ತು ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಸರಿಪಡಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ರೈತ ಸಂಘಟನೆ, ಕನ್ನಡಪರ ಸಂಘಟನೆ, ದಲಿತ ಸಂಘಟನೆ ಸ್ಥಳೀಯ ಮುಖಂಡರು, ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಎರಡು ಗಂಟೆಗಳಕಾಲ ರಸ್ತೆ ತಡೆ ನಡೆಸಿದ್ದರಿಂದ ದೂರದ ಪ್ರಯಾಣಿಕರು ಪರದಾಡುವಂತಾಯಿತು. ಮೂಡಲಗಿ ಸಿಪಿಐ ಮುರನಾಳ, ಘಟಪ್ರಭಾ ಪಿಎಸ್‍ಐ, ಕುಲಗೋಡ ಪಿಎಸ್‍ಐ, ಮೂಡಲಗಿ ಪಿ.ಎಸ್.ಐ ಬಂದೋಬಸ್ತ ವಹಿಸಿದ್ದು ಯಾವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಂಡರು..