ಬೆಳಗಾವಿ :ಅರಭಾಂವಿ ಪಟ್ಟಣವನ್ನು ಮೂಡಲಗಿ ತಾಲೂಕಿಗೆ ಸೇರಿಸದೇ ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಅರಭಾಂವಿ ಪಟ್ಟಣವನ್ನು ಮೂಡಲಗಿ ತಾಲೂಕಿಗೆ ಸೇರಿಸದೇ ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಬೆಳಗಾವಿ ಡಿ 29: ಅರಭಾಂವಿ ಪಟ್ಟಣವನ್ನು ಮೂಡಲಗಿ ತಾಲೂಕಿಗೆ ಸೇರಿಸದೇ ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸಬೇಕೆಂದು ಆಗ್ರಹಿಸಿ ಅರಭಾಂವಿ ಪಟ್ಟಣದ ನಾಗರೀಕರು ಶುಕ್ರವಾರದಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಅರ್ಪಿಸಿದರು.
ಕರ್ನಾಟಕ ಸರ್ಕಾರವು ಇತ್ತಿಚೆಗೆ ಗೋಕಾಕ ತಾಲೂಕನ್ನು ವಿಂಗಡಿಸಿ ಮೂಡಲಗಿಯನ್ನು ಹೊಸ ತಾಲೂಕಿಗೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಿದೆ. ಆದರೆ ಸರ್ಕಾರದ ಈ ಹೊಸ ಆದೇಶವನ್ನು ನಾವು ಖಂಡಿಸುತ್ತೇವೆ. ಅರಭಾಂವಿ ಪಟ್ಟಣವು ಗೋಕಾಕ ನಗರದಿಂದ ಕೇವಲ 3 ಕೀಮಿ ಅಂತರದಲ್ಲಿದ್ದು ಮೂಡಲಗಿಯು ಅರಭಾಂವಿಯಿಂದ 28 ಕೀಮಿ ದೂರವಿರುವುದರಿಂದ ಇಲ್ಲಿಯ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ ಜೊತೆಗೆ ಮೂಡಲಗಿಗೆ ಹೋಗಲು ಯಾವುದೇ ಸಾರಿಗೆ ಸಂಚಾರದ ವ್ಯವಸ್ಥೆ ಇರುವದಿಲ್ಲ. ಗೋಕಾಕ ನಗರಕ್ಕೆ ಅರಭಾಂವಿ ಮುಂದುವರೆದರೇ ಎಲ್ಲ ರೀತಿಯಿಂದ ಅಂದರೆ ಶಾಲಾ ಕಾಲೇಜು, ವ್ಯಾಪಾರ ವಹಿವಾಟಗಳನ್ನು ದಿನನಿತ್ಯ ಇಲ್ಲಿಯ ಜನ ಹೋಗಿ ಬರಲು ಸುಲಭವಾಗಿರುತ್ತದೆ.
ಅರಭಾಂವಿ ಪಟ್ಟಣವು ಸುಮಾರು 16 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು ಈಗಾಗಲೇ ಹೋಬಳಿ ಕೇಂದ್ರವನ್ನು ಸಹ ಹೊಂದಿದೆಯಲ್ಲದೇ ಇಲ್ಲಿಯ ನಾಗರೀಕರಿಗೆ ಗೋಕಾಕ ನಗರದ ಜೊತೆ ಅವಿನಭಾವ ಸಂಬಂಧವನ್ನು ಹೊಂದಿದ್ದಾರೆ. ಹಿಂದಿನ ನೀಲಿ ನಕ್ಷೆ ಪ್ರಕಾರ ಎರಡು ಬಾರಿ ಅರಭಾಂವಿಯನ್ನು ಮೂಡಲಗಿಗೆ ಸೇರಿಸದೇ ಇರುವ ದಾಖಲಾತಿಗಳಿವೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಅರಭಾಂವಿ ಪಟ್ಟಣವನ್ನು ಹಾಗೂ ಹೋಬಳಿಯನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಶಿವಯ್ಯ ಹಿರೇಮಠ, ಭೀಮಪ್ಪ ಹಳ್ಳೂರ, ರಾಯಪ್ಪ ಬಂಡಿವಡ್ಡರ, ನಿಂಗಪ್ಪ ಈಳಿಗೇರ, ಮೋಹನ ಬಂಡಿವಡ್ಡರ, ಸಾತಪ್ಪ ಜೈನ, ನಾಗಪ್ಪ ಹೊಲದವರ, ಕೆಂಪಣ್ಣ ಕಡಲಗಿ, ವಿಠ್ಠಲ ದೇವುಗೋಳ, ಅರಭಾಂವಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ರಮೇಶ ಮಾದರ, ಸದಸ್ಯರಾದ ಅಡಿವೆಪ್ಪ ಬಿಲಕುಂದಿ, ಅಶೋಕ ಪೂಜೇರಿ, ಮಹಾಂತೇಶ ನೇಮಗೌಡರ, ಈರಪ್ಪ ಹೊಲದವರು ಸೇರಿದಂತೆ ಅನೇಕರು ಇದ್ದರು.