ತರ್ಕಕ್ಕೆ ನಿಲುಕದ ದೇಶನೂರಿನ ರೋಮನ್ ಕ್ಯಾಥೋಲಿಕ್ ಚರ್ಚ್
ತರ್ಕಕ್ಕೆ ನಿಲುಕದ ದೇಶನೂರಿನ ರೋಮನ್ ಕ್ಯಾಥೋಲಿಕ್ ಚರ್ಚ್
ಲೇಖನ : ಸಾಧಿಕ ಎಂ ಹಲ್ಯಾಳ
ರಾಷ್ಟ್ರಾದ್ಯಂತ ಮಠಗಳು, ಮದರಸಾಗಳು, ಚರ್ಚುಗಳು ಸೇರಿದಂತೆ ವಿವಿಧ ಸಮುದಾಯಗಳನ್ನು ಪ್ರತಿನಿಧಿಸುವ ಕೇಂದ್ರಗಳು ಇಂದು ತನ್ನದೆ ಆದ ರೀತಿಯಲ್ಲಿ ಸಮಾಜವನ್ನು ತಿದ್ದಿ ಮನುಕುಲವನ್ನು ಸರಿಯಾದ ದಾರಿಯಲ್ಲಿ ನಡೆಸುವ ಮಹತ್ತರ ಕಾರ್ಯಕ್ಕೆ ಕೈ ಹಾಕಿ ಅದರಲ್ಲಿ ಸೈ ಎನಿಸಿಕೊಳ್ಳುತ್ತಿವೆ. ಇದಕ್ಕೆ ಪ್ರತಿರೂಪವಾಗಿ ರಾಷ್ಟ್ರದ ಕೆಲವೊಂದು ಪ್ರದೇಶಗಳಲ್ಲಿ ಇದನ್ನೇ ನೆಪವಾಗಿಟ್ಟುಕೊಂಡು ಸಮಾಜದಲ್ಲಿ ನೆಲೆಸಿರುವ ಮುಗ್ಧ ಪ್ರಮಾಣಿಕರನ್ನು ನಂಬಿಸಿ ಮೋಸ ಮಾಡಿ ಅವರ ಭಾವನೆಗಳಿಗೆ ಧಕ್ಕೆ ಮಾಡಿ ಮಠಗಳಿಗೆ, ಮದರಸಾಗಳಿಗೆ, ಚರ್ಚುಗಳಿಗೆ ಕೆಟ್ಟ ಹೆಸರು ತಂದ ನಿದರ್ಶನಗಳು ಹಲವಾರಿವೆ.
ಇವೆಲ್ಲವುದನ್ನು ಮೆಟ್ಟಿ ನಿಂತು ಮನುಕುಲದ ಸಮಗ್ರ ಅಭಿವೃದ್ಧಿಗಾಗಿ ಜಾತಿ, ಮತ, ಪಂಥಗಳನ್ನು ಮೀರಿ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಜಗತ್ತಿಗೆ ಸಾರಿ, ಎಲ್ಲರ ಪ್ರೀತಿಗೆ ಪಾತ್ರವಾಗಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ್ ತಾಲೂಕಿನ ದೇಶನೂರ ಎಂಬ ಪುಟ್ಟ ಗ್ರಾಮದಲ್ಲಿರುವ ಸ್ಥಾನಿಕ ವಿರಕ್ತಮಠ ಎಂದರೆ ಅತಿಶಯೋಕ್ತಿಯಾಗಲಾರದು.
ಚರ್ಚಿನ ಒಳಗನ ವಿಹಂಗ ನೋಟ
1953 ರಿಂದ ಇಲ್ಲಿಯವರೆಗೆ ಸುಮಾರು 60 ವರ್ಷಗಳ ಇತಿಹಾಸವುಳ್ಳ ಈ ವಿರಕ್ತಮಠ ನೋಡಲು ದೇವಾಲಯದಂತೆ ಕಂಡರೂ ಒಳಗಡೆ ಚರ್ಚವಾಗಿ ರೂಪಗೊಂಡಿದೆ. ಪೋಪ್ ಪ್ರಾನ್ಸಿಸ್‍ರ ಅನುಯಾಯಿಗಳಾದ ಇಲ್ಲಿಯ ಚರ್ಚ್ ಫಾದರ ‘ಮೆನಿನೋ’ ರೋಮನ್ ಕ್ಯಾಥೋಲಿಕ್‍ರ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ದೇಶಾದ್ಯಂತ ರೋಮನ್ ಕ್ಯಾಥೋಲಿಕಕ್ಕೆ ಸೇರಿದ ಸುಮಾರು 29000 ಸಾವಿರ ಫಾದರಗಳು ಲಾರ್ಡ್ ಯೇಸುಕ್ರಿಸ್ತನ ಸಂದೇಶಗಳನ್ನು ಜಗತ್ತಿಗೆ ತಲುಪಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಕಾರ್ಯವನ್ನು ಕಳೆದ 60 ವರ್ಷಗಳಿಂದ ಮಾಡುತ್ತ ಬಂದಿರುವ ಈ ಚರ್ಚ (ವಿರಕ್ತಮಠ)ವು ಇಂದು ಹಿಂದೂ, ಮುಸ್ಲಿಂರ ಭಾವ್ಯಕತೆಯ ತಾಣವಾಗಿ ಬೆಳೆದು ನಿಂತಿರುವದನ್ನು ನೋಡಿದರೆ ಆಶ್ಚರ್ಯವಾಗದೆ ಇರಲಾರದು.
ಫಾದರ ಮೆನಿನೋ
ದೇಶದ ಎಲ್ಲಾ ಚರ್ಚುಗಳಲ್ಲಿ ಪ್ರತಿನಿತ್ಯ ನಡೆಯುವ ಪ್ರಾರ್ಥನೆಯಂತೆ ಇಲ್ಲಿಯೂ ಸಹ ದಿನಂಪ್ರತಿ ಸಮಯಕ್ಕೆ ಸರಿಯಾಗಿ ಪ್ರಾರ್ಥನೆ, ಪೂಜೆಗಳನ್ನು ನೆರವೇರುತ್ತವೆ. ಆದರೆ ಇಲ್ಲಿ ನಡೆಯುವ ಪ್ರಾರ್ಥನೆ, ಪ್ರವಚನಗಳು ಕೊಂಚ ಡಿಂಫರೆಂಟ್‍ವಾಗಿ ಜರುಗುತ್ತವೆ. ಪ್ರತಿನಿತ್ಯ ಮುಂಜಾನೆ 7-00 ಘಂಟೆ ಹಾಗೂ ಸಾಯಂಕಾಲ 7-00 ಗಂಟೆಗೆ ಈ ಚರ್ಚಿನಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಗುತ್ತೆ. ಪ್ರಾರ್ಥನೆಯಲ್ಲಿ ಗ್ರಾಮದ ಎಲ್ಲಾ ಜನರು ಜಾತಿ, ಭೇದ, ಮತವನ್ನು ಮರೆತು ಎಲ್ಲರೂ ಸಕ್ರೀಯವಾಗಿ ಪಾಲ್ಗೊಂಡು ಪ್ರಾರ್ಥನೆಗೆ ಸಾಕ್ಷಿಯಾಗುತ್ತಾರೆ. ಮುಂಜಾನೆ 7ಗಂಟೆ ಹಾಗೂ ಸಾಯಂಕಾಲ 7ಗಂಟೆ ಹೊಡೆಯುತ್ತಿದಂತೆ ಚರ್ಚ ಫಾದರ “ಮೇನಿನೋ” ನೆಹರು ಶರ್ಟ, ಕೊರಳಿನಲ್ಲಿ ಕ್ರೈಸ್ತ ಧರ್ಮದ ಸಂಕೇತದ ಹಾರ, ಖಾವಿ ಶಲ್ಲೆ ಹಾಗೂ ತಲೆಯ ಮೇಲೆ ಮುಸ್ಲಿಂ ಧರ್ಮದ ಸಂಕೇತವಾಗಿರುವ ಟೋಪಿ ಧರಿಸಿ ಪ್ರಾರ್ಥನೆಗೆ ಸಜ್ಜಾಗುತ್ತಾರೆ.
ಪ್ರಾರ್ಥನೆಯಲ್ಲಿ ಬೈಬಲ್, ವೇದ, ಉಪನಿಷತ್ತುಗಳು ಸೇರಿದಂತೆ ಇನ್ನೂ ಹಲವು ಧರ್ಮಗಳ ಧಾರ್ಮಿಕ ಗ್ರಂಥಗಳನ್ನು ಪಠಿಸಿ ಎಲ್ಲರ ಮಾರ್ಗ ಒಂದೇ ಎಂದು ಸಾರಿ ಸಾರಿ ಹೇಳಲಾಗುತ್ತೆ. ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಈ ಚರ್ಚ ತುಂಬಾ ದೇವಾಲಯದಲ್ಲಿರುವಂತೆ ಘಂಟೆಗಳನ್ನು ತೂಗು ಹಾಕಲಾಗಿದೆ. ಚರ್ಚ ಒಳಗೆ ಪ್ರವೇಶಿಸುವವರು ಘಂಟೆಗಳನ್ನು ಬಾರಿಸಿ ಒಳಗೆ ಹೋಗುವವರನ್ನು ಕಂಡರೆ ಇದು ದೇವಾಲಯವೋ ಅಥವಾ ಚರ್ಚವೋ ಎಂಬುದು ನಿರ್ಧರಿಸುವುದು ಕಠಿಣವಾಗುತ್ತೆ. ಒಳಗಡೆ ದೇವಾಲಯದಲ್ಲಿರುವಂತೆ ಇಲ್ಲಿಯೂ ಸಹ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಚರ್ಚನಲ್ಲಿ ನಡೆಯುವ ಎಲ್ಲಾ ವಿಧಿ ವಿಧಾನಗಳನ್ನು ಮುಗಿದ ನಂತರ ಎಲ್ಲರೂ ಈ ಶಿವನ ಲಿಂಗಕ್ಕೆ ನೈವಧ್ಯ ಮಾಡಿ ಪ್ರಾರ್ಥನೆ ಮಾಡುವುದು ಈ ಚರ್ಚಿನ ವಿಶೇಷತೆಯಾಗಿದೆ.
ಬರೀ ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗದೇ ಈ ಚರ್ಚ್ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಮುಖಿಯಾಗಿ ಕೆಲಸ ನಿರ್ವಹಿಸುತ್ತಿರುವುದು ಗಮನಾರ್ಹ. ಈ ಚರ್ಚಿನ ಅಧೀನದಲ್ಲಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಆಶ್ರಮ ಶಾಲೆ, ನೇಸರಗಿಯಲ್ಲಿ ವಿದ್ಯಾಮಂದಿರ ಪ್ರೌಢಶಾಲೆ, ಮೊಹರೆಯಲ್ಲಿ ಪ್ರಾಥಮಿಕ ಆಶ್ರಮ ಶಾಲೆಗಳಿರುತ್ತವೆ. ಚರ್ಚನಲ್ಲಿರುವ ಅನಾಥಾಶ್ರಮದಲ್ಲಿ 8 ವಿದ್ಯಾರ್ಥಿನಿಯರು 43 ವಿದ್ಯಾರ್ಥಿಗಳು ಸೇರಿ ಒಟ್ಟು 51 ವಿದ್ಯಾರ್ಥಿ/ನಿಯರು ಈ ಚರ್ಚಿನಲ್ಲಿ ಆಶ್ರಯ ಪಡೆದಿದ್ದಾರೆ. ಪ್ರತಿನಿತ್ಯ ಇಲ್ಲಿರುವ ವಿದ್ಯಾರ್ಥಿಗಳಿಗೆ ಪಾಠದ ಜೊತೆ ಅವರವರು ಪ್ರತಿನಿಧಿಸುವ ಧರ್ಮದ ಪ್ರಕಾರ ಧಾರ್ಮಿಕ ಬೋಧನೆಯನ್ನು ಸಹ ಬೋಧಿಸಲಾಗುತ್ತಿದೆ.
ಉಚಿತ ವೈದ್ಯಕೀಯ ಸೇವೆ :
ಜಾತ್ರೆ, ಹಬ್ಬ, ಹರಿದಿನಗಳಲ್ಲಿ ಕೊಂಚ ದೂರವಿರುವ ಈ ಪುಣ್ಯಕ್ಷೇತ್ರವು ತನ್ನದೇ ಆದ ಶೈಲಿಯಲ್ಲಿ ಜನಸೇವೆಗಿಳಿದು “ವೈದ್ಯೋ ನಾರಾಯಣ ಹರಿ” ಎಂಬಂತೆ ಸಾಮಾಜಿಕ ರಂಗದ ಅತ್ಯಂತ ಶ್ರೇಷ್ಟ ಸೇವೆಯಾದ ವೈದ್ಯಕೀಯ ಸೇವೆಯಲ್ಲಿ ತೊಡಗಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಕಳೆದ ಎರಡು ದಶಕಗಳಿಂದ ನುರಿತ ವೈದ್ಯರನ್ನು ನೇಮಿಸಿ ಗ್ರಾಮದಲ್ಲಿ ಉಚಿತ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಿ ಹಲವು ಬಡಜೀವಿಗಳಿಗೆ ವರದಾನವಾಗಿ ಪರಿಣಮಿಸಿದೆ. ಇದರ ಮತ್ತೊಂದು ವಿಶೇಷತೆವೆಂದರೆ ಪ್ರತಿ ವರ್ಷ ಅತ್ಯಂತ ಕಡುಬಡವರ ಹೆಣ್ಣು ಮಕ್ಕಳನ್ನು ಗುರುತಿಸಿ ಬೆಳಗಾವಿಯ ‘ಸೇಂಟ್‍ಪಾಲ್ ನರ್ಸಿಂಗ್ ಕಾಲೇಜಿನಲ್ಲಿ’ ನರ್ಸಿಂಗ್ ತರಬೇತಿಯನ್ನು ಕೊಡಿಸಿ, ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಖಾಯಂ ಆಗಿ ಸೇವೆ ಸಲ್ಲಿಸುವಂತೆ ಮುತುವರ್ಜಿ ವಹಿಸಿದ್ದಾರೆ. ಕಳೆದ ಒಂದು ದಶಕದಲ್ಲಿ ಚರ್ಚಿನ ಸಹಾಯದಿಂದ ಸುಮಾರು 35 ಬಡ ವಿದ್ಯಾರ್ಥಿನಿಯರನ್ನು ನರ್ಸಿಂಗ ತರಬೇತಿ ಕೊಡಿಸಿದ ಕೀರ್ತಿಗೆ ಈ ಚರ್ಚಿನ ಫಾದರ ಮೇನೀನೂ ಪಾತ್ರರಾಗಿರುವುದು ಇವರ ಸಾಮಾಜಿಕ ಕಾಳಜಿಯನ್ನು ಎತ್ತಿ ತೋರಿಸುತ್ತದೆ.
ಇದರ ಜೊತೆ ಜೊತೆಗೆ ತಲೆ ತಲಾಂತರಗಳಿಂದ ಬಂದ ಆರ್ಯುವೇದಿಕ ಔಷಧ ಸೇವೆಯನ್ನು ಮಠದಿಂದ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಕಿಡ್ನಿ ವೈಪಲ್ಯ, ಹಾವು ಕಡಿತ, ಚೋಳು ಕಡಿತ, ಸಕ್ಕರೆ ಕಾಯಿಲೆ, ಕಾಮಾಲೆ ಸೇರಿದಂತೆ ಇನ್ನು ಹಲವು ರೋಗಗಳಿಗೆ ಈ ಚರ್ಚಿನಲ್ಲಿ ಆಯುರ್ವೇಧಿಕ ಔಷಧಿಯನ್ನು ನೀಡಲಾಗುತ್ತದೆ. ಈ ಸೇವೆಯನ್ನು ಪಡೆಯಲು ರಾಜ್ಯ ಸೇರಿದಂತೆ ಹೊರ ರಾಜ್ಯದಿಂದ ಜನರು ಈ ಚರ್ಚನ್ನು ಅವಲಂಭಿಸಿರುವುದು ಗಮನಾರ್ಹವಾಗಿದೆ.
ಹೀಗೆ ಜಾತಿ, ಧರ್ಮ, ಪಂಥವನ್ನು ಮೀರಿ ಸಾರ್ವಜನಿಕರಿಂದ ಸಾರ್ವಜನಿಕರಿಗಾಗಿ ಸಾರ್ವಜನಿಕಗೋಸ್ಕರ ತನ್ನ ವಿಶಿಷ್ಟ ಶೈಲಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಗ್ರಾಮದ ಸುಧಾರಣೆಗಾಗಿ ಹಗಲಿರಳು ಶ್ರಮಿಸಿ ಜನರ ತರ್ಕವನ್ನು ಮೀರಿ ಬೆಳೆಯುತ್ತಿರುವ ಈ ಚರ್ಚಿನ ಸೇವೆ ಇಡೀ ರಾಜ್ಯಕ್ಕೆ, ಮಠ, ಮಾನ್ಯಗಳಿಗೆ, ಮದರಸಾಗಳಿ ಮಾದರಿಯಾಗಲಿ ಎಂಬುವುದೇ ನಮ್ಮ ಬಯಕೆ.