ಘಟಪ್ರಭಾ:ತಾಯಿ-ತಂದೆಯವರ ಸೇವೆಗೈದರೆ ಜೀವನ ಪಾವನವಾಗುವುದು : ಶಾಸಕ ಬಾಲಚಂದ್ರ
ತಾಯಿ-ತಂದೆಯವರ ಸೇವೆಗೈದರೆ ಜೀವನ ಪಾವನವಾಗುವುದು : ಶಾಸಕ ಬಾಲಚಂದ್ರ
ಘಟಪ್ರಭಾ ಜ 4 : ತಾಯಿ-ತಂದೆಯವರ ಸೇವೆಗೈದರೆ ಜೀವನ ಪಾವನವಾಗುವುದು. ಹೆತ್ತವರಿಗೆ ಪ್ರೀತಿ, ಗೌರವ ನೀಡುವ ಮೂಲಕ ತಾಯಿ-ತಂದೆಯವರ ಪ್ರೀತಿಗೆ ಪಾತ್ರರಾಗಬೇಕೆಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ದಂಡಾಪೂರ ಗ್ರಾಮದ ಹೊರವಲಯದ ಒಳಕಲ್ಲಮರಡಿ ತೋಟದಲ್ಲಿರುವ ಯಲ್ಲಾಲಿಂಗ ಮಹಾರಾಜರ ಜಾತ್ರೆಯಲ್ಲಿ ಬುಧವಾರ ಸಂಜೆ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ತಾಯಿ-ತಂದೆಯವರು ಜೀವಂತವಿರುವವರೆಗೆ ಸೇವೆ ಮಾಡಿದರೆ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಕಣ್ಣಿಗೆ ಕಾಣುವ ನಿಜವಾದ ದೇವರುಗಳೇ ತಾಯಿ-ತಂದೆಯವರು. ಇಂತಹವರ ಸೇವೆ ಎಷ್ಟೇ ಮಾಡಿದರೂ ಅವರ ಋಣ ತೀರಿಸಲು ಸಾಧ್ಯವಾಗುವುದಿಲ್ಲವೆಂದು ಅವರು ಹೇಳಿದರು.
ಜಾತ್ರೆಗಳು ನಮ್ಮ ಸಂಸ್ಕøತಿ ಹಾಗೂ ವೈಭವವನ್ನು ಎತ್ತಿ ತೋರಿಸುತ್ತವೆ. ಹಿಂದಿನ ಕಾಲದಿಂದಲೂ ಬಂದಿರುವ ಇತಿಹಾಸ ಬಿಂಬಿಸುವ ಜಾತ್ರೆಗಳು ಇಂದಿಗೂ ಮೊದಲಿನಂತೆಯೇ ನಡೆಯುತ್ತಿವೆ. ಭಾರತ ಎಷ್ಟೇ ಮುಂದುವರೆದಿದ್ದರೂ ಧಾರ್ಮಿಕತೆಯಲ್ಲಿ ಎಲ್ಲ ಧರ್ಮಿಯರು ಒಂದಾಗಿ-ಒಗ್ಗಟ್ಟಾಗಿ ತಮ್ಮ ತಮ್ಮ ಆಚರಣೆಗಳನ್ನು ಮಾಡುತ್ತಿರುವುದು ನಮ್ಮ ಇತಿಹಾಸವನ್ನು ಬಿಂಬಿಸುತ್ತದೆ. ವಿವಿಧತೆಯಲ್ಲಿ ಏಕತೆ ಮೆರೆಯುತ್ತಿರುವ ಭಾರತ ಇಡೀ ಜಗತ್ತಿಗೆ ಮಾದರಿ ರಾಷ್ಟ್ರವಾಗಿದೆ ಎಂದು ಹೇಳಿದರು.
ಮುಗಳಖೋಡದ ಯಲ್ಲಾಲಿಂಗ ಮಹಾರಾಜರು ಶ್ರೇಷ್ಠ ಸತ್ಪುರುಷರು. ಸಾಕಷ್ಟು ಲೀಲೆಗಳನ್ನು ಮಾಡಿರುವ ಪವಾಡ ಪುರುಷರು. ರಾಜ್ಯ ಹಾಗೂ ಅಂತರರಾಜ್ಯಗಳ ಅಸಂಖ್ಯಾತ ಭಕ್ತ ಸಮೂಹವನ್ನು ಹೊಂದಿದ್ದ ಯಲ್ಲಾಲಿಂಗ ಮಹಾರಾಜರನ್ನು ಕಳೆದ 25 ವರ್ಷಗಳ ಹಿಂದೆ ಸಹೋದರ-ಶಾಸಕ ಸತೀಶ ಜಾರಕಿಹೊಳಿ ಹಾಗೂ ನಾಗನೂರಿನ ಬಸಗೌಡ ಪಾಟೀಲ ಅವರೊಂದಿಗೆ ಮುಗಳಖೋಡಕ್ಕೆ ತೆರಳಿ ದರ್ಶನ ಪಡೆದು ಪುನಿತನಾದೆ. ಆ ಸಂದರ್ಭದಲ್ಲಿ ನನ್ನನ್ನು ಏಕಚಿತ್ತದಿಂದ ಗಮನಿಸಿದ ಯಲ್ಲಾಲಿಂಗ ಮಹಾರಾಜರು ಮುಂದೆ ದೊಡ್ಡ ವ್ಯಕ್ತಿಯಾಗುತ್ತಿಯಾ. ನಿನಗೆ ಒಳ್ಳೆಯ ಯೋಗವಿದೆ ಎಂದು ಹರಿಸಿ ಆಶೀರ್ವದಿಸಿದನ್ನು ಬಾಲಚಂದ್ರ ಜಾರಕಿಹೊಳಿ ಅವರು ಸ್ಮರಿಸಿಕೊಂಡರು.
ಸಿಬಿಸಿ ಮೂಲಕ ನೀರು : ದಂಡಾಪೂರ ಗ್ರಾಮಕ್ಕೆ ಈಗಾಗಲೇ ಘಟಪ್ರಭಾ ಎಡದಂಡೆ ಕಾಲುವೆ ನೀರು ಹರಿಯುತ್ತಿದ್ದು, ಮುಂದಿನ ದಿನಗಳಲ್ಲಿ ದಂಡಾಪೂರ ಭಾಗದ ರೈತರಿಗೆ ಚಿಕ್ಕೋಡಿ ವಿತರಣಾ ಕಾಲುವೆ ಮೂಲಕ ನೀರು ಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆಯಿತ್ತರು.
ಸಾನಿಧ್ಯವನ್ನು ಸ್ಥಳೀಯ ಯಲ್ಲಾಲಿಂಗ ಮಠದ ಕೃಪಾನಂದ ಸ್ವಾಮಿಗಳು ವಹಿಸಿದ್ದರು.
ಬಡಿಗವಾಡ ಗ್ರಾಪಂ ಮಾಜಿ ಅಧ್ಯಕ್ಷರಾದ ಸಿದ್ದಪ್ಪ ಢವಳೇಶ್ವರ, ಮಹಾದೇವ ತುಕ್ಕಾನಟ್ಟಿ, ಪ್ರಭಾಶುಗರ ನಿರ್ದೇಶಕ ಲಕ್ಷ್ಮಣ ಗಣಪ್ಪಗೋಳ, ಬೀರಪ್ಪ ಶೀಮಕ್ಕನವರ, ದುಂಡಪ್ಪ ಕೊಣ್ಣೂರ, ಅಡಿವೆಪ್ಪ ಜಟ್ಟೆನ್ನವರ, ಸಿದ್ದಪ್ಪ ಇಂಗಳಿ, ನಾಗಪ್ಪ ತುಕ್ಕಾನಟ್ಟಿ, ಗಂಗಪ್ಪ ಬೆಂಡವಾಡ, ರುದ್ರಪ್ಪ ಪೊಲೀಸಗೋಳ, ಪರಸಪ್ಪ ಹಿರೇಕುರುಬರ, ಭೀಮಪ್ಪ ಇಂಗಳಿ, ಸಿದ್ದಪ್ಪ ಮಾಳಪ್ಪಗೋಳ, ಎಪಿಎಂಸಿ ಮಾಜಿ ಅಧ್ಯಕ್ಷ ಶಿದ್ಲಿಂಗ ಕಂಬಳಿ, ಮಾರುತಿ ಬಂಬಲವಾಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು