ಮೂಡಲಗಿ:ಜೋಕಾನಟ್ಟಿ ಗ್ರಾಮದ ಜಾತ್ರೆಯು ವೈವಿಧ್ಯತೆಯಿಂದ ಕೂಡಿರುವ ಮಾದರಿ ಜಾತ್ರೆ : ಶಾಸಕ ಬಾಲಚಂದ್ರ
ಜೋಕಾನಟ್ಟಿ ಗ್ರಾಮದ ಜಾತ್ರೆಯು ವೈವಿಧ್ಯತೆಯಿಂದ ಕೂಡಿರುವ ಮಾದರಿ ಜಾತ್ರೆ : ಶಾಸಕ ಬಾಲಚಂದ್ರ
ಮೂಡಲಗಿ ಜ 7 : ಎಲ್ಲ ದೇವರುಗಳನ್ನು ಒಂದುಗೂಡಿಸಿ ವರ್ಷಕ್ಕೊಮ್ಮೆ ನಡೆಯುವ ಜೋಕಾನಟ್ಟಿ ಗ್ರಾಮದ ಜಾತ್ರೆಯು ವೈವಿಧ್ಯತೆಯಿಂದ ಕೂಡಿರುವ ಮಾದರಿ ಜಾತ್ರೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ಜೋಕಾನಟ್ಟಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಸಮಸ್ತ ದೇವರುಗಳ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಎಲ್ಲೆಡೆ ದೇವರು ಅವತರಿಸಿದ್ದಾನೆ. ದೇವನೊಬ್ಬ ನಾಮ ಹಲವು ಎಂಬಂತೆ ವಿವಿಧ ಧರ್ಮಿಯರು ತಮ್ಮ-ತಮ್ಮ ಕುಲದೇವರುಗಳ ಹೆಸರಿನಲ್ಲಿ ಪೂಜೆ ಪುನಸ್ಕಾರ ಮಾಡುವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದಾರೆ.
ಪೂಜಿಸಲ್ಪಡುವ ದೇವರು ಒಬ್ಬನೇ ಆಗಿದ್ದರೂ ಅವನನ್ನು ನೋಡುವ ಅಥವಾ ಹೆಸರಿಸುವ ದೃಷ್ಠಿ ಬೇರೆ-ಬೇರೆಯಾಗಿದೆ. ಆದರೆ ಆಚರಣೆಯಲ್ಲಿ ಎಲ್ಲರೂ ಒಂದೇ ತೆರನಾಗಿ ಪೂಜಿಸುತ್ತಾರೆಂದು ತಿಳಿಸಿದರು.
ವದಂತಿಗಳನ್ನು ನಂಬಬೇಡಿ : ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕೆಲವರು ಗ್ರಾಮಗಳಿಗೆ ಪ್ರವೇಶ ಮಾಡಿ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುವ ಸಂಚು ನಡೆಸುತ್ತಿರುತ್ತಾರೆ. ಜನರಿಗೆ ಹಲವು ಆಮೀಷಗಳನ್ನು ಒಡ್ಡುತ್ತಾ ಸುಳ್ಳು ಭರವಸೆಗಳನ್ನು ಕೊಡುತ್ತಿರುತ್ತಾರೆ. ಅಂತಹ ಪಿತೂರಿಗಾರರ ಮಾತುಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಗೆ ನಿಮ್ಮ ಆಶೀರ್ವಾದ ನೀಡಿ ಎಂದು ಮನವಿ ಮಾಡಿದರು.
ಜೋಕಾನಟ್ಟಿ ಗ್ರಾಮದ ಉದ್ಧಾರಕ್ಕೆ ಕಳೆದೊಂದು ದಶಕದಿಂದ ಶ್ರಮಿಸಲಾಗುತ್ತಿದೆ. ಜನರ ಬೇಡಿಕೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಒಂದು ಗ್ರಾಮ ಪ್ರಗತಿಯಾಗಬೇಕಾದರೆ ಎಲ್ಲರೂ ಒಂದಾಗಿ-ಒಗ್ಗಟ್ಟಾಗಿ ದುಡಿದರೆ ಮಾತ್ರ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಗುಂಪುಗಾರಿಕೆಯಿಂದ ಯಾವುದೇ ಅಭಿವೃದ್ಧಿ ಸಾಧ್ಯವಾಗುವುದಿಲ್ಲವೆಂದು ಕಿವಿಮಾತು ಹೇಳಿದರು.
ಸಕಲ ದೇವರುಗಳ ಪಲ್ಲಕ್ಕಿ ಉತ್ಸವದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಭಕ್ತಾಧಿಗಳೊಂದಿಗೆ ಭಾಗಿಯಾದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಜೋಕಾನಟ್ಟಿ ಗ್ರಾಮಸ್ಥರಿಂದ ಸತ್ಕರಿಸಲಾಯಿತು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ, ಪ್ರಭಾಶುಗರ ಅಧ್ಯಕ್ಷ ಅಶೋಕ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಶಿದ್ಲಿಂಗ ಕಂಬಳಿ, ಭೀಮಶಿ ಮೋಕಾಶಿ, ಪ್ರಭಾಶುಗರ ನಿರ್ದೇಶಕ ಕೆ.ಕೆ. ಬಂಡ್ರೊಳ್ಳಿ, ತಾಪಂ ಮಾಜಿ ಸದಸ್ಯ ಸಾಬಪ್ಪ ಬಂಡ್ರೋಳ್ಳಿ, ನಾರಾಯಣ ಸನದಿ, ಚಂದ್ರು ಬಿದರಿ, ಕುಬೇಂದ್ರ ತೆಗ್ಗಿ, ಪವಾಡೆಪ್ಪ ಕುರಿಬಾಗಿ, ಅಮೃತ ದಪ್ಪಿನವರ, ಮುಂತಾದವರು ಉಪಸ್ಥಿತರಿದ್ದರು.