ಗೋಕಾಕ:ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವ ಸರಕಾರ: ಅತಿಥಿ ಉಪನ್ಯಾಸಕರಿಗೆ ಲೈಫ್‍ಟೈಮ್ ಸೆಕ್ಯುರಿಟಿ ನೀಡಲಿ – ರಾಜು ಕಂಬಾರ
ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವ ಸರಕಾರ: ಅತಿಥಿ ಉಪನ್ಯಾಸಕರಿಗೆ ಲೈಫ್‍ಟೈಮ್ ಸೆಕ್ಯುರಿಟಿ ನೀಡಲಿ – ರಾಜು ಕಂಬಾರ
ಗೋಕಾಕ ಜ 9 : ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರಕಾರ ಸೇವಾ ಭದ್ರತೆ ನೀಡುವ ಕುರಿತು ಗಂಭೀರವಾದ ಚಿಂತನೆ ಮಾಡಬೇಕು. ಸರಕಾರಿ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವ ಸರಕಾರ ಅವರಿಗೆ ಬೋಧಿಸುವ ಅತಿಥಿ ಉಪನ್ಯಾಸಕರಿಗೆ ಲೈಫ್‍ಟೈಮ್ ಜಾಬ್ ಸೆಕ್ಯುರಿಟಿ ನೀಡಬೇಕು! ಎಂದು ಬೆಳಗಾವಿ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ರಾಜು ಕಂಬಾರ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಸರ್ಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೂರೆಂಟು ಸೌಲಭ್ಯಗಳನ್ನು ಸರಕಾರ ನೀಡುತ್ತಿರುವುದು ಶ್ಲಾಘನೀಯವಾದದ್ದು. ಲ್ಯಾಪ್‍ಟಾಪ್ ನಂಥಹ ಆಧುನಿಕ ಕಲಿಕಾ ಸಾಮಗ್ರಿ ನೀಡುತ್ತಿರುವ ಸರಕಾರವನ್ನು ಸರಕಾರಿ ಪದವಿ ಕಾಲೇಜಿನ 3 ಲಕ್ಷಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳ ಪರವಾಗಿ ನಾವು ಅಭಿನಂದಿಸುತ್ತೇವೆ. ಆದರೆ ಅದೇ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ 13 ಸಾವಿರ ಅತಿಥಿ ಉಪನ ಯಾಸಕರ ಬದುಕಿನ ಕಡೆ ಒಮ್ಮೆ ಸರಕಾರ ನೋಡಬೇಕು. ಸುಂದರವಾದ ಶಿಲ್ಪಕ್ಕಿಂತ ಅದನ್ನು ರೂಪಿಸಿದ ಶಿಲ್ಪಿಯ ಬದುಕು ಮಹತ್ವದ್ದಾಗಿರುತ್ತದೆ. ಅತಿಥಿ ಉಪನ್ಯಾಸಕರು ಹತ್ತಾರು ವರ್ಷಗಳಿಂದ ಸರಕಾರಿ ಪದವಿ ಕಾಲೇಜುಗಳಲ್ಲಿ ದುಡಿಯುತ್ತಿದ್ದಾರೆ. ಆದರೆ ಅವರ ಸೇವೆಗೆ ಮಾತ್ರ ಯಾವುದೇ ಭದ್ರತೆ ಇಲ್ಲದಂತಾಗಿದೆ. ಆದ್ದರಿಂದ ಸರಕಾರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಿ ಅವರ ಬದುಕಿಗೊಂದು ಅತಿಥಿ ಭಾಗ್ಯವನ್ನು ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.