ಮೂಡಲಗಿ:ಸಮಾಜದಲ್ಲಿ ತಲೆ ಎತ್ತಿ ಬದುಕಬೇಕಾದರೆ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು : ಶಾಸಕ ಬಾಲಚಂದ್ರ
ಸಮಾಜದಲ್ಲಿ ತಲೆ ಎತ್ತಿ ಬದುಕಬೇಕಾದರೆ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು : ಶಾಸಕ ಬಾಲಚಂದ್ರ
ಮೂಡಲಗಿ ಜ 20 : ಸಮಾಜದಲ್ಲಿ ತಲೆ ಎತ್ತಿ ಬದುಕಬೇಕಾದರೆ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು. ಸುಶಿಕ್ಷಿತರಾದಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಮಾನಗಳು ದೊರೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶುಕ್ರವಾರ ರಾತ್ರಿ ಇಲ್ಲಿಯ ಮುಸ್ಲಿಂ ಸಮಾಜ ಏರ್ಪಡಿಸಿದ್ದ ಸುನ್ನಿ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾಜಕ್ಕೆ ಅಗತ್ಯವಿರುವ 1 ಕೋಟಿ ರೂ. ವೆಚ್ಚದ ಶಾದಿಮಹಲ ಕಟ್ಟಡವನ್ನು ಮಂಜೂರು ಮಾಡಿಸುವ ಭರವಸೆ ನೀಡಿದ ಅವರು, ಈಗಾಗಲೇ ಮೂಡಲಗಿ ಹೊರವಲಯದ ಗುರ್ಲಾಪೂರ ರಸ್ತೆಗೆ ಅಂಟಿಕೊಂಡಿರುವ ಜಾಗೆಯನ್ನು ಗುರುತಿಸಲಾಗಿದೆ. ಇದರ ಪ್ರಸ್ತಾವನೆಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಶೀಘ್ರದಲ್ಲಿಯೇ ಸಲ್ಲಿಸಲಾಗುವುದು. ಈಗಾಗಲೇ ಅರಭಾವಿ ಮತಕ್ಷೇತ್ರದ ಯಾದವಾಡ ಹಾಗೂ ಅರಭಾವಿ ಗ್ರಾಮಗಳಿಗೆ ಕೋಟಿ ರೂ. ವೆಚ್ಚದ ಶಾದಿಮಹಲ ಕಟ್ಟಡಗಳ ಪ್ರಸ್ತಾವನೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬಿಟಿಟಿ ಕಮೀಟಿ ಅಧ್ಯಕ್ಷ ಶರೀಫ ಪಟೇಲ್ ಇದರ ಅಧ್ಯಕ್ಷತೆ ವಹಿಸಿದ್ದರು.
ಮುಂಬೈನ ಮೌಲಾನಾ ಮೊಹಮ್ಮದ ಜಮಾಲುದ್ದೀನ, ಮೌಲಾನಾ ಅಮೀರ ಅಮಜಾನ ಥರಥರಿ, ಮೌಲಾನಾ ಶಫೀ ಆಜ್ಮಿ, ಬಿಟಿಟಿ ಕಮೀಟಿ ಉಪಾಧ್ಯಕ್ಷ ಮಲೀಕ ಕಳ್ಳಿಮನಿ, ಸಮಾಜದ ಧುರೀಣರಾದ ನಬಿಸಾಬ ಥರಥರಿ, ಹಸನಸಾಬ ಮುಗಟಖಾನ, ಅಬ್ದುಲರೆಹಮಾನ ತಾಂಬೋಳಿ, ಸಲೀಮ ಇನಾಮದಾರ, ರಾಜು ಅತ್ತಾರ, ಸಾಹೇಬಫೀರ ಫಿರಜಾದೆ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಪುರಸಭೆ ಉಪಾಧ್ಯಕ್ಷ ರವಿ ಸೋನವಾಲ್ಕರ, ಮುಖಂಡರು, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಬಿಟಿಟಿ ಕಮೀಟಿಯಿಂದ ಶರೀಫ ಪಟೇಲ್ ಹಾಗೂ ಮೌಲಾನಾ ಮೊಹಮ್ಮದ ಜಮಾಲುದ್ದೀನ ಅವರು ಸತ್ಕರಿಸಿದರು